ದಾವಣಗೆರೆ: ಮದುವೆ ಆಗುವುದಾಗಿ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ ಇಲ್ಲಿನ ಕೋರ್ಟ್ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 38 ಸಾವಿರ ರೂ. ದಂಡ ವಿಧಿಸಿದೆ. 27 ವರ್ಷದ ವ್ಯಕ್ತಿಯೇ ಶಿಕ್ಷೆಗೆ ಒಳಗಾದ ಆರೋಪಿ.
ಆರೋಪಿಯು ಬಾಲಕಿಯನ್ನು ಶಾಲೆಗೆ ಹೋಗುವಾಗ ಪರಿಚಯ ಮಾಡಿಕೊಂಡಿದ್ದಲ್ಲದೇ ತನ್ನ ಆಟೋದಲ್ಲಿ ಶಾಲೆಗೆ ಕರೆದುಕೊಂಡು ಹೋಗುವುದು, ಬರುವುದು ಮಾಡುವ ಮೂಲಕ ಸಲುಗೆ ಬೆಳೆಸಿಕೊಂಡಿದ್ದ. ಬಾಲಕಿ ತಿರಸ್ಕರಿಸಿದರೂ ನಿನ್ನನ್ನೇ ಮದುವೆಯಾವುದಾಗಿ ನಂಬಿಸಿ ಬಲವಂತವಾಗಿ ಅತ್ಯಾಚಾರ ಮಾಡಿರುವುದು ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬಾಲಕಿಯು ಒಂದು ದಿನ ಹೊಟ್ಟೆನೋವು ಅಂತಾ ನಮಗೆ ತಿಳಿಸಿದಾಗ, ನಾವು ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದ್ದೆವು. ಪರಿಕ್ಷೆ ನಡೆಸಿದ್ದ ವೈದ್ಯರು ಆಕೆ 7 ತಿಂಗಳು ಗರ್ಭಿಣಿ ಆಗಿರುವುದಾಗಿ ತಿಳಿಸಿದರು. ಕೇಳಿದಾಗ ಆಕೆ ವಿಷಯ ತಿಳಿಸಿದ್ದು, ನನ್ನ ಮಗಳಿಗೆ ಹೆದರಿಸಿ ಬಲವಂತವಾಗಿ ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿರುವ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ಪೋಷಕರು ಪ್ರಕರಣ ದಾಖಲಿಸಿದ್ದರು.
ಪೋಕ್ಸೋ ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಅಂದಿನ ಪಿಐ ಸತೀಶ್‌ಕುಮಾರ್ ಅವರು ಬಾಲಕಿ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿ, ಗರ್ಭಿಣಿ ಮಾಡಿರುವುದು ತನಿಖೆಯಿಂದ ದೃಢಪಟ್ಟ ಮೇರೆಗೆ ಆರೋಪಿ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷರೋಪಣಾಪಟ್ಟಿ ಸಲ್ಲಿಸಿದ್ದರು.
ಈ ಸಂಬಂಧ ದಾವಣಗೆರೆಯ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ಅವರು ಆರೋಪಿತನ ಮೇಲೆ ಆರೋಪ ಸಾಬೀತಾಗಿದ್ದರಿಂದ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 38,000 ರೂ. ದಂಡ ವಿಧಿಸಿದ್ದಾರೆ.
ಆರೋಪಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು, ಬಂಧನದ ಅವಧಿಯನ್ನು ಪರಿಗಣಿಸಿ ಶಿಕ್ಷಾ ಅವಧಿಯನ್ನು ಸೆಟ್ ಆಫ್ ಮಾಡಲಾಗಿರುತ್ತದೆ. ಸದರಿ ಆರೋಪಿತನಿಂದ ವಸೂಲಿ ಮಾಡಿದ ದಂಡದ ಒಟ್ಟು ಮೊತ್ತ 38,000 ರೂ.ಗಳನ್ನು ಪ್ರಕರಣದ ಸಂತ್ರಸ್ತೆಗೆ ನೀಡುವಂತೆ ಹಾಗೂ ಸಂತ್ರಸ್ತೆಗೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ನೀಡುವಂತೆ ತೀರ್ಪು ನೀಡಿರುವುದಾಗಿ ಪೊಲೀಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಪ್ರಕರಣದಲ್ಲಿ ಸಂತ್ರಸ್ತೆ ಪರ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ಅವರು ವಾದ ಮಂಡನೆ ಮಾಡಿದ್ದರು.