ಗಂಗಾವತಿ (ಕೊಪ್ಪಳ) : ಮಾಜಿ ಸಚಿವ ಶ್ರೀರಾಮುಲು ಬಗ್ಗೆ ನಾನು ಮಾಡಿರುವ ಟೀಕೆ-ಟಿಪ್ಪಣಿಗಳೆಲ್ಲವೂ ವೈಯಕ್ತಿಕ. ವಾಲ್ಮೀಕಿ ನಾಯಕ ಸಮುದಾಯಕ್ಕೆ ಯಾವುದೇ ನೋವು ಉಂಟು ಮಾಡುವ ರೀತಿಯಲ್ಲಿ ನಾನು ಮಾತನಾಡಿಲ್ಲ. ಇದು ಸಮಾಜಕ್ಕೆ ಮನವರಿಕೆಯಾಗಬೇಕಿತ್ತು ಎಂದು ಶಾಸಕ ಜನಾರ್ದನರೆಡ್ಡಿ ಹೇಳಿದರು.
ಈ ಬಗ್ಗೆ ಮಾತನಾಡಿದ ಅವರು, ರಾಮುಲು ಬಗ್ಗೆ ಸಾರ್ವಜನಿಕ, ಬಹಿರಂಗವಾಗಿ ಮತ್ತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದಂತೆ ಪಕ್ಷದ ಹಿರಿಯ ನಾಯಕರು ಸೂಚನೆ ನೀಡಿದ್ದಾರೆ. ಅವರ ಅಣತಿಯಂತೆ ನಡೆದುಕೊಳ್ಳುವೆ. ಆದರೆ, ರಾಮುಲು ವಿಚಾರವಾಗಿ ಯಾರಿಗೆ, ಎಲ್ಲಿ ಹೇಳಬೇಕಿತ್ತೋ, ಏನು ದೂರು ನೀಡಬೇಕಿತ್ತೋ ಅದನ್ನು ಮಾಡಿದ್ದೀನಿ. ಮುಂದಿನದ್ದು ಪಕ್ಷದ ಹಿರಿಯ ನಾಯಕರು ಚರ್ಚಿಸಿ ಸೂಕ್ತ ನಿರ್ಧಾರ ತಾಳುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ರಾಮುಲು ಅವರ ವಿಚಾರವನ್ನು ಕೈಗೆತ್ತಿಕೊಂಡಿದ್ದಕ್ಕೆ ವಾಲ್ಮೀಕಿ ಸಮಾಜ ನಿಮ್ಮ ವಿರುದ್ಧ ಹರಿಹಾಯುತ್ತಿದೆಯಲ್ಲ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರೆಡ್ಡಿ, ರಾಮುಲು - ರೆಡ್ಡಿಯ ಮಧ್ಯ ಇರುವ ಮನಸ್ತಾಪ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿರುವುದು ಎಂಬುವುದು ಆ ಸಮಾಜದ ನಾಯಕರಿಗೆ ಮನವರಿಕೆಯಾಗಬೇಕಿತ್ತು. ಈ ಬಗ್ಗೆ ನಾನು ಮಾತನಾಡಲಾರೆ, ಪಕ್ಷದ ಚೌಕಟ್ಟು ಮೀರಿ ಹೋಗಲಾರೆ. ಪಕ್ಷದ ನಾಯಕರಿಗೆ ಈ ವಿಚಾರ ಎಲ್ಲಾ ಗೊತ್ತಿದೆ. ಇದನ್ನು ಅವರೇ ಇತ್ಯರ್ಥ ಮಾಡುತ್ತಾರೆ. ಅಲ್ಲಿವರೆಗೂ ನಾನು ಮಾತನಾಡಲಾರೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಗಂಗಾವತಿ ನಗರಸಭೆಯ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಕೆಲವರು ಕಾಂಗ್ರೆಸ್ ಪ್ರೇರೇಪಿತ ಮನಃಸ್ಥಿತಿಯಿಂದ ಶಾಸಕ ಜನಾರ್ದನರೆಡ್ಡಿ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ನಾವು ಸೂಕ್ತ ವೇದಿಕೆಯಲ್ಲಿ ನಾಯಕ ಸಮುದಾಯದ ಯುವಕರೇ ಉತ್ತರ ನೀಡಲಿದ್ದೇವೆ. ಇದೇ ನಾಗೇಂದ್ರ ಅವರ ವಿಚಾರದಲ್ಲಿ ಮೌನವಾಗಿದ್ದ ಸಮಾಜದ ಮುಖಂಡರು, ರೆಡ್ಡಿ ವಿಚಾರದಲ್ಲಿ ಧ್ವನಿ ಎತ್ತುತ್ತಿರುವುದು ಗಮನಿಸಿದರೆ ಅನುಮಾನ ಮೂಡುತ್ತಿದೆ ಎಂದು ಹೇಳಿದರು.
ವಾಸ್ತವವಾಗಿ ರೆಡ್ಡಿ-ರಾಮುಲು ಇವರಿಬ್ಬರ ನಡುವಿನ ವಿಚಾರ ವೈಯಕ್ತಿಕವಾದದ್ದು. ರೆಡ್ಡಿ ಎಲ್ಲಿಯೂ ಸಮಾಜಕ್ಕೆ ನೋವು ಉಂಟಾಗುವ ರೀತಿಯಲ್ಲಿ ಮಾತನಾಡಿಲ್ಲ. ಆದರೆ, ಸಮುದಾಯದ ಕೆಲವರು ಇದನ್ನೇ ಅಸ್ತ್ರವಾಗಿಸಿಕೊಂಡಿದ್ದಾರೆ. ಇದಕ್ಕೆ ಸೂಕ್ತ ಉತ್ತರ ನೀಡುತ್ತೇವೆ ಎಂದರು.
ಇದನ್ನೂ ಓದಿ : ದಲಿತರ ಮನೆಗಳಲ್ಲಿ ಪಾದಪೂಜೆ, ಸಹ ಭೋಜನ : ಶಾಸಕ ಜಿ ಜನಾರ್ದನರೆಡ್ಡಿ - MLA G JANARDHANA REDDY