ಬೆಳಗಾವಿ: ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಡೆದಿದ್ದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಕುಂದಾನಗರಿ ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದು, ರಾಷ್ಟ್ರೀಯ ನಾಯಕರ ಸ್ವಾಗತಕ್ಕೆ ಜಿಲ್ಲೆಯ ಕೈ ಮುಖಂಡರು, ಕಾರ್ಯಕರ್ತರು ತುದಿಗಾಲ ಮೇಲೆ ನಿಂತಿದ್ದಾರೆ.
ಇಡೀ ದೇಶದ ಚಿತ್ತ ಈಗ ಬೆಳಗಾವಿಯತ್ತ ನೆಟ್ಟಿದೆ. 1924, ಡಿ.26ರಂದು ಬಾಪೂಜಿ ನೇತೃತ್ವದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆದಿದ್ದ ಅಂದಿನ ವಿಜಯ ನಗರದ, ಇಂದಿನ ಟಿಳಕವಾಡಿ ವೀರಸೌಧ ಮತ್ತೊಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗುತ್ತಿದೆ.
ನೂರು ವರ್ಷಗಳ ಹಿಂದೆ ನಡೆದ ಅಧಿವೇಶನದ ಅದೇ ಸಮಯಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಪ್ರಾರಂಭವಾಗಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಅಂದು ಗಾಂಧೀಜಿ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಸೂಚಿ ನೀಡಿದ್ಧ ವೀರಸೌಧದಲ್ಲಿ ಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಇನ್ನಿಲ್ಲದ ತಯಾರಿ ನಡೆಸಿದ್ದು, ಎರಡು ದಿನಗಳ ಕಾಲ ಮಹತ್ವದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕೈ ನಾಯಕರ ದಂಡೇ ಹರಿದು ಬರುತ್ತಿದೆ.
ಕಾರ್ಯಕ್ರಮದ ಹಿನ್ನೆಲೆ: ವೀರ ಸೌಧದಲ್ಲಿ 26ರಂದು(ಇಂದು) ಬೆಳಗ್ಗೆ 10 ಗಂಟೆಗೆ ಗಾಂಧಿ ಅವರ ಪುತ್ಥಳಿ ಅನಾವರಣ ಮತ್ತು ನೂತನ ಫೋಟೋ ಗ್ಯಾಲರಿ ಉದ್ಘಾಟನೆ ಆಗಲಿದೆ. ಬೆಳಗ್ಗೆ 10.45ಕ್ಕೆ ಖಾದಿ ಮೇಳಕ್ಕೆ ಚಾಲನೆ ಸಿಗಲಿದೆ. 11.15ಕ್ಕೆ ಗಂಗಾಧರ ದೇಶಪಾಂಡೆ ಅವರ ಸ್ಮಾರಕ ಮತ್ತು ಫೋಟೋ ಗ್ಯಾಲರಿಗೆ ಚಾಲನೆ ಸಿಗಲಿದೆ. ಮಧ್ಯಾಹ್ನ 3 ಗಂಟೆಗೆ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ರಾತ್ರಿ 7ಕ್ಕೆ ಎಐಸಿಸಿ ಅಧ್ಯಕ್ಷರಿಂದ ಭೋಜನಕೂಟ ಏರ್ಪಡಿಸಲಾಗಿದೆ.
ಮಾರನೇ ದಿನ ಡಿ. 27 ರಂದು ಸಿಪಿಎಡ್ ಮೈದಾನದಲ್ಲಿ ಬೃಹತ್ ಸಮಾವೇಶಕ್ಕೆ ಆಯೋಜಿಸಲಾಗಿದೆ. ಜೈ ಬಾಪು, ಜೈ ಭೀಮ, ಜೈ ಸಂವಿಧಾನದ ಹೆಸರಿನಡಿ ಸಮಾರಂಭಕ್ಕೆ ಬೃಹದಾಕಾರದ ವೇದಿಕೆ ತಯಾರಾಗಿದೆ. ವೇದಿಕೆ ಮುಂಭಾಗದಲ್ಲಿ ಮಹಾತ್ಮಾ ಗಾಂಧೀಜಿ, ಜವಾಹರಲಾಲ್ ನೆಹರು, ಗಂಗಾಧರರಾವ್ ದೇಶಪಾಂಡೆ ಅವರ ಭಾವಚಿತ್ರಗಳು ಗಮನ ಸೆಳೆಯುತ್ತಿವೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಎರಡು ದಿನಗಳಿಂದ ಬೆಳಗಾವಿಯಲ್ಲಿಯೇ ಠಿಕಾಣಿ ಹೂಡಿದ್ದು, ಕಾರ್ಯಕ್ರಮದ ಯಶಸ್ಸಿನ ಹೊಣೆ ಹೊತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಸಂಜೆ ಬೆಳಗಾವಿ ನಗರಕ್ಕೆ ಆಗಮಿಸಿದ್ದು, ಕಾರ್ಯಕ್ರಮ ನಡೆಯಲಿರುವ ವೀರಸೌಧಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ್ದಾರೆ. ಎರಡು ದಿನಗಳ ಕಾಲ ಮುಖ್ಯಮಂತ್ರಿಗಳು ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ಅತಿರಥ-ಮಹಾನಾಯಕರ ವಾಸ್ತವ್ಯ: ರಾಜ್ಯ ಸೇರಿದಂತೆ ರಾಷ್ಟ್ರ ಮಟ್ಟದ ನಾಯಕರು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದು, ಕಾಂಗ್ರೆಸ್ ಮುಖ್ಯಮಂತ್ರಿಗಳು, ಸುಮಾರು 140 ಸಂಸದರು, ವಿರೋಧ ಪಕ್ಷಗಳ ನಾಯಕರು ಸೇರಿದಂತೆ 500ಕ್ಕೂ ಅಧಿಕ ವಿವಿಐಪಿ ಗಣ್ಯರು ಆಗಮಿಸಲಿದ್ದಾರೆ. ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಂಸದರಾದ ಪ್ರಿಯಾಂಕಾ ವಾದ್ರಾ, ಕೆ.ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಅತಿರಥ-ಮಹಾರಥರು ಬೆಳಗಾವಿಗೆ ದೌಡಾಯಿಸಲಿದ್ದಾರೆ.
ಅಧಿವೇಶನದ ಕುತೂಹಲ: ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಸೇರಿ ಹಲವು ಕೈ ನಾಯಕರು ಬೆಳಗಾವಿಯಿಂದ ಹೊಸ ಅಧ್ಯಾಯ ಆರಂಭವಾಗಲಿದೆ ಎಂದಿದ್ದಾರೆ. ಹಾಗಾಗಿ, ಏನು ನಿರ್ಣಯ ಕೈಗೊಳ್ಳಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಅದ್ಧೂರಿ ದೀಪಾಲಂಕಾರ: ಬೆಳಗಾವಿ ನಗರದಲ್ಲಿ 104 ಕಿ.ಮೀ., 90 ವೃತ್ತಗಳು ವಿದ್ಯುತ್ ದೀಪಗಳಿಂದ ಅಲಂಕೃತವಾಗಿದೆ. ಕುಂದಾನಗರಿಯಲ್ಲಿ ಅಕ್ಷರಶಃ ಬೆಳಕಿನ ಸ್ವರ್ಗವೇ ನಿರ್ಮಾಣವಾಗಿದೆ. ಮೈಸೂರು ದಸರಾವನ್ನು ನೆನಪಿಸುತ್ತಿದೆ. ಝಗಮಗಿಸುತ್ತಿರುವ ದೀಪಗಳಲ್ಲಿ ಮಹಾತ್ಮಾ ಗಾಂಧೀಜಿ ಸೇರಿ ಮಹಾಪುರುಷರ ಪ್ರತಿಕೃತಿಗಳು ಎಲ್ಲರನ್ನೂ ಆಕರ್ಷಿಸುತ್ತಿವೆ. ಜನರು ಬೆಳಕಿನ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲಿದ್ದು, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.
ಫ್ಲೆಕ್ಸ್ ಭರಾಟೆ: ಬೆಳಗಾವಿ ಬಳಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ನಗರದ ವೀರಸೌಧವರೆಗೆ ನಾಡಿದ್ದು ಬೃಹತ್ ಸಮಾವೇಶ ನಡೆಯಲಿರುವ ಸಿಪಿಇಡ್ ಮೈದಾನ ಸೇರಿ ಪ್ರಮುಖ ರಸ್ತೆಗಳಲ್ಲಿ ಕಣ್ಣು ಹಾಯಿಸಿದಲ್ಲಿ ಎಲ್ಲಾ ಕಡೆ ರಾಷ್ಟ್ರೀಯ ನಾಯಕರ ಸ್ವಾಗತ ಕೋರುವ ಫ್ಲೆಕ್ಸ್ ಮತ್ತು ಬ್ಯಾನರ್ ಗಳು ರಾರಾಜಿಸುತ್ತವೆ. ರಸ್ತೆಯ ಇಕ್ಕೆಲಗಳಲ್ಲಿ ಕಾಂಗ್ರೆಸ್ ಧ್ವಜಗಳು ಹಾರಾಡುತ್ತಿದ್ದು, ಇಡೀ ಬೆಳಗಾವಿ ಕಾಂಗ್ರೆಸ್ ಮತ್ತು ಗಾಂಧಿ ಮಯವಾಗಿದೆ.
ಎರಡು ದಿನ ಊಟದ ವ್ಯವಸ್ಥೆ: ಆಹಾರ ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ಸಮಿತಿ ಊಟದ ವ್ಯವಸ್ಥೆ ಜವಾಬ್ದಾರಿ ಹೊತ್ತಿದ್ದು, 150ಕ್ಕೂ ಅಧಿಕ ಬಾಣಸಿಗರು ಅಡುಗೆ ಸಿದ್ಧಪಡಿಸಲಿದ್ದಾರೆ. 200ಕ್ಕೂ ಅಧಿಕ ಸ್ವಯಂ ಸೇವಕರ ನೆರವಿನಿಂದ ಆಹಾರ ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 1 ಲಕ್ಷಕ್ಕೂ ಅಧಿಕ ಜನರಿಗೆ 5 ಪ್ರಮುಖ ಸ್ಥಳಗಳಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ಧಾರವಾಡ, ಚನ್ನಮ್ಮನ ಕಿತ್ತೂರು ಕಡೆಯಿಂದ ಬರುವವರಿಗಾಗಿ ಸುವರ್ಣ ವಿಧಾನಸೌಧ ಮುಂಭಾಗ, ಹುಕ್ಕೇರಿ, ಸಂಕೇಶ್ವರದಿಂದ ಬರುವವರಿಗೆ ಹೊನಗಾ ಗ್ರಾಮ, ಗೋಕಾಕ, ಘಟಪ್ರಭಾ, ರಾಯಬಾಗದಿಂದ ಬರುವವರಿಗೆ ಖನಗಾವಿ-ಗೋಕಾಕ ರಸ್ತೆ, ಬಾಗಲಕೋಟೆ, ವಿಜಯಪುರದಿಂದ ಬರುವವರಿಗೆ ಪಂತಬಾಳೇಕುಂದ್ರಿಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಹತ್ತಿರ ಮತ್ತು ಖಾನಾಪುರ ಸೇರಿ ಸುತ್ತಲಿನ ಗ್ರಾಮಗಳಿಂದ ಬರುವ ಜನರಿಗೆ ರಕ್ಕಸಕೊಪ್ಪದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.
ಬಿಗಿ ಪೊಲೀಸ್ ಬಂದೋಬಸ್ತ್: ವಿವಿಐಪಿ ಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಮೇಲಸ್ತುವಾರಿ ವಹಿಸಿಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿಣಿ ನಡೆಯುವ ವೀರಸೌಧ, ಬಹಿರಂಗ ಸಮಾವೇಶ ನಡೆಯುವ ಸಿಪಿಇಡ್ ಮೈದಾನ ಸೇರಿ ವಿವಿಧೆಡೆ 3 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಇದನ್ನೂ ಓದಿ: ವೀರಸೌಧಕ್ಕೆ ಜನರ ದಂಡು: ಗಾಂಧೀಜಿ ಬೆಳಗಾವಿಗೆ ಬಂದಿದ್ದು ನಮ್ಮ ಅದೃಷ್ಟ!
ಇದನ್ನೂ ಓದಿ: ಸೌಧದಲ್ಲಿ ಗಾಂಧೀಜಿ ಪ್ರತಿಮೆ ಅನಾವರಣ: ವರ್ಷವಿಡೀ ಶತಮಾನೋತ್ಸವ ಕಾರ್ಯಕ್ರಮ, ಸಚಿವ ಪಾಟೀಲ್