ಬೆಂಗಳೂರು/ಧಾರವಾಡ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ (ಮುಡಾ) ನಿವೇಶನ ಹಂಚಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ತನ್ನ ತೀರ್ಪನ್ನು ಕಾಯ್ದಿರಿಸಿದೆ.
ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ)ಗೆ ವಹಿಸಬೇಕು ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಆದೇಶವನ್ನು ಕಾಯ್ದಿರಿಸಿತು.
ಸ್ನೇಹಮಯಿ ಕೃಷ್ಣ ಪರವಾಗಿ ವಾದ ಮಂಡಿಸಿದ ಸುಪ್ರೀಂಕೋರ್ಟ್‌ನ ಹಿರಿಯ ವಕೀಲರ ಮಣೀಂದ್ರ್ ಸಿಂಗ್, ''ಪ್ರಕರಣದಲ್ಲಿ ಸರ್ಕಾರದಲ್ಲಿರುವ ಹಿರಿಯ ವ್ಯಕ್ತಿಗಳು ಆರೋಪಿಯಾಗಿರುವುದರಿಂದ ರಾಜ್ಯ ಸರ್ಕಾರದ ಅಧೀನದ ಸಂಸ್ಥೆ ವಿಚಾರಣೆ ನಡೆಸಿದರೂ ಸತ್ಯಾಂಶ ಹೊರಬರುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ, ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಕೋರಿದರು.
ನಮ್ಮ ಕಕ್ಷಿದಾರರು ಇಂತಹದ್ದೇ ಏಜೆನ್ಸಿಗೆ ತನಿಖೆ ವಹಿಸಬೇಕು ಎಂದು ಆಯ್ಕೆ ಮಾಡಿಕೊಂಡಿಲ್ಲ. ಸಿಬಿಐ ಇಲ್ಲವೇ ಇತರ ಯಾವುದೇ ಸ್ವತಂತ್ರ ತನಿಖೆಗೆ ಕೋರುತ್ತಿದ್ದೇವೆ. ಸರ್ಕಾರದ ಸಚಿವಾಲಯವೇ ಮುಖ್ಯಮಂತ್ರಿಗಳನ್ನು ಸಮರ್ಥನೆ ಮಾಡಿಕೊಳ್ಳಲು ನಿಂತಿತ್ತು. ಅಧಿಕಾರಿಗಳು ಇದನ್ನೇ ಅನುಸರಿಸಿದ್ದಾರೆ. ಹೀಗಾಗಿ ಕೆಲವು ಅಂಶಗಳು ಸ್ವಾತಂತ್ರ್ಯ ತನಿಖೆ ಅಗತ್ಯವವಿದೆ ಎಂಬ ಅಗತ್ಯವನ್ನು ನಿರ್ಮಾಣ ಮಾಡಿದೆ. ಅದು ಸಿಬಿಐ ನಿಂದ ತನಿಖೆ ನಡೆಸಿದರೆ ಮಾತ್ರ ಪಾರದರ್ಶಕವಾಗಲಿದೆ. ಹಗರಣದಲ್ಲಿ ಮುಖ್ಯಮಂತ್ರಿಗಳು, ಮತ್ತವರ ಕುಟುಂಬದ ಸದಸ್ಯರು ಭಾಗಿಯಾಗಿರುವುದರಿಂದ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕಾಗಿದೆ ಎಂದು ಅವರು ಪೀಠಕ್ಕೆ ವಿವರಿಸಿದರು
ಇದಕ್ಕೆ ಆಕ್ಷೇಪಿಸಿದ ಸರ್ಕಾರದ ಪರ ವಾದ ಮಂಡಿಸಿ ಸುಪ್ರೀಂಕೋರ್ಟ್ ಹಿರಿಯ ವಕೀಲ, ಕಪಿಲ್ ಸಿಬಲ್ ಅವರು ಎಲ್ಲ ಪ್ರಕರಣಗಳು ಸಿಬಿಐಗೆ ವಹಿಸಬೇಕು ಎಂದರೆ ಲೋಕಾಯುಕ್ತ ಕಾರ್ಯ ನಿರ್ವಹಿಸುವುದಾದರೂ ಏಕೆ? ರಾಜ್ಯದ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಲೋಕಾಯುಕ್ತಕ್ಕೆ ಅಧಿಕಾರವಿದೆ. ಆ ಅಧಿಕಾರವನ್ನು ಅಸಾಂವಿಧಾನಿಕ ಎಂದು ಘೋಷಣೆ ಮಾಡಬೇಕು ಎಂದು ಪೀಠಕ್ಕೆ ತಿಳಿಸಿದರು.
ಸಿದ್ದರಾಮಯ್ಯ ಪತ್ನಿ ಪರ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಹಾಗೂ ಪ್ರೊ.ರವಿವರ್ಮ ಕುಮಾರ್ ವಾದ ಮಂಡಿಸಿದರು.
ಎಲ್ಲರ ವಾದ ಮಂಡನೆ ಬಳಿಕ ಮತ್ತೆ ವಾದ ಸ್ನೇಹಮಯಿ ಕೃಷ್ಣ ಪರ ವಕೀಲ ಮಣೀಂದ್ರ ಸಿಂಗ್, ಸುಪ್ರೀಂಕೋರ್ಟ್ ಹಲವು ಪ್ರಕರಣಗಳನ್ನು ಉಲ್ಲೇಖಿಸಿ, ಈ ರೀತಿಯ ಪ್ರಕರಣಗಳು ಸಾರ್ವಜನಿಕ ಹಿತದೃಷ್ಠಿಯಿಂದ ಕೂಡಿದ್ದು, ಸ್ವಾತಂತ್ರ್ಯ ಸಂಸ್ಥೆಯಿಂದ ತನಿಖೆ ನಡೆಸುವುದು ಅತ್ಯಗತ್ಯವಾಗಿದೆ. ಆರೋಪಿಗಳು ಯಾವ ರೀತಿಯ ತನಿಖೆ ನಡೆಸಬೇಕು ಎಂಬುದನ್ನು ಪ್ರಶ್ನೆ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಪೀಠಕ್ಕೆ ವಿವರಿಸಿದರು.
ಇದೇ ವೇಳೆ, ತೀರ್ಪು ಪ್ರಕಟಿಸುವವರೆಗೆ ಲೋಕಾಯುಕ್ತ ಪೊಲೀಸರಿಂದ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಕೆಗೆ ನ್ಯಾಯಾಲಯ ಕಾಲಾವಕಾಶ ವಿಸ್ತರಿಸಿತು. ವಿಚಾರಣೆ ವೇಳೆ, ಲೋಕಾಯುಕ್ತ ಪರ ವಕೀಲ ವೆಂಕಟೇಶ್ ಅರಬಟ್ಟಿ ಅವರು ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿ ಸಲ್ಲಿಸಿದ್ದು, ಅದನ್ನೂ ನ್ಯಾಯಾಲಯ ದಾಖಲಿಸಿಕೊಂಡಿತು.
ಇದನ್ನೂ ಓದಿ: ಮುಡಾ ಪ್ರಕರಣ; ಪಾರ್ವತಿ ಸಿದ್ದರಾಮಯ್ಯ, ಸಚಿವ ಬೈರತಿ ಸುರೇಶ್ಗೆ ಇ.ಡಿ ನೋಟಿಸ್