ತುಮಕೂರು : ಆಯಿಲ್ ಟ್ಯಾಂಕ್ ಬ್ಲಾಸ್ಟ್ ಆಗಿ ಇಬ್ಬರು ಕಾರ್ಮಿಕರು ಮೃತಪಟ್ಟು, ಮೂವರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಗರದ ಹೊರವಲಯದ ಅಂತಸರನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಪರಿಮಳ ಆಗ್ರೋ ಫುಡ್ ಇಂಡಸ್ಟ್ರೀಸ್ನಲ್ಲಿ ಆಯಿಲ್ ಟ್ಯಾಂಕ್ ಸ್ಫೋಟಗೊಂಡ ಪರಿಣಾಮ ಬಿಹಾರ ಮೂಲದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರ್ಮಿಕ ಚಂದನ್ ಶರ್ಮಾ ಮತ್ತು ಸಂತೋಷ್ ಮೃತರು. ಭತ್ತದ ಹೊಟ್ಟಿನಿಂದ ಎಣ್ಣೆ ತೆಗೆಯುವ ಫ್ಯಾಕ್ಟರಿ ಇದಾಗಿದ್ದು, ಆಯಿಲ್ ಟ್ಯಾಂಕ್ ಬಳಿ ಐವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ.
ಸ್ಥಳಕ್ಕೆ ಭೇಟಿ ನೀಡಿದ್ದ ತುಮಕೂರು ಎಸ್ಪಿ ಅಶೋಕ್ ಕೆ ವೆಂಕಟ್ ಮಾತನಾಡಿ, ''ಅಂತಸರನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪರಿಮಳ ರೈಸ್ ಬ್ರಾಯಿನ್ ಆಯಿಲ್ ಪ್ಯಾಕ್ಟರಿಯಲ್ಲಿ ಆಯಿಲ್ ಟ್ಯಾಂಕರ್ ಬ್ಲಾಸ್ಟ್ ಆಗಿದೆ. ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸುಮಾರು 40 ಅಡಿ ಎತ್ತರದ ಟ್ಯಾಂಕರ್ನಿಂದ ಕೆಳಗೆ ಬಿದ್ದು ಮರಣ ಹೊಂದಿದ್ದಾರೆ. ಇಬ್ಬರು ಬಿಹಾರದ ಬೇಗುಸರಾಯ್ ಜಿಲ್ಲೆಯವರು ಎಂದು ತಿಳಿದು ಬಂದಿದೆ. ಇಬ್ಬರನ್ನ ಕೂಡಲೇ ಶ್ರೀ ದೇವಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಫ್ಐಆರ್ ದಾಖಲಿಸಲಾಗಿದೆ'' ಎಂದು ಹೇಳಿದರು.
''ಪ್ರತ್ಯಕ್ಷದರ್ಶಿ ಮಾಹಿತಿ ಪ್ರಕಾರ, ಇಬ್ಬರು ಒಂದು ಬಾಯ್ಲರ್ ಮೇಲೆ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಪಕ್ಕದಲ್ಲಿದ್ದ ಇನ್ನೊಂದು ಬಾಯ್ಲರ್‌ನಿಂದ ದೊಡ್ಡದಾಗಿ ಸೌಂಡ್ ಬಂದಿದೆ. ಆ ಸೌಂಡ್ ಎಫೆಕ್ಟ್ನಿಂದ ಇಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮೇಲಿಂದ ಕೆಳಗೆ ಬಿದ್ದಿರುವುದಿಂದ ಡೆತ್ ಆಗಿದ್ದಾರೆ ಎಂಬುದು ಕಂಡು ಬಂದಿದೆ. ಒಬ್ಬರ ಕೈ ಮೇಲೆ ಸುಟ್ಟಗಾಯಗಳಾಗಿವೆ. ಮರಣೋತ್ತರ ಪರೀಕ್ಷೆಯ ನಂತರ ನಿಖರ ಕಾರಣ ತಿಳಿದುಬರಲಿದೆ'' ಎಂದರು.
''ಇಬ್ಬರು ಸೂಪರ್ ವೈಸರ್ ಸಿಕ್ಕಿದ್ದಾರೆ. ಯಾವುದೇ ಸೇಫ್ಟಿ ಕ್ರಮಗಳನ್ನ ತೆಗೆದುಕೊಂಡಿಲ್ಲ. ಬರಿಗೈಯಲ್ಲಿ ವೆಲ್ಡಿಂಗ್ ಮಿಷನ್ ನಲ್ಲಿ ಕೆಲಸ ಮಾಡುತ್ತಿದ್ದರು. ತಪ್ಪಿತಸ್ಥರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವುದು'' ಎಂದು ಹೇಳಿದರು.
ಇದನ್ನೂ ಓದಿ : ಮದ್ದೂರಿನ ಶಿಂಷಾ ನದಿಯಲ್ಲಿ ಮಹಿಳೆ ಶವ ಪತ್ತೆ : ಕೊಲೆ ಮಾಡಿ ಚೀಲದಲ್ಲಿ ಕಟ್ಟಿ ಎಸೆದಿರುವ ಹಂತಕರು - A WOMAN FOUND DEAD