ಬೆಂಗಳೂರು: ಬೆಂಗಳೂರು ಅರಮನೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬುಧವಾರ ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ 472 ಎಕರೆ ಮತ್ತು 16 ಗುಂಟೆ ಬೆಂಗಳೂರು ಅರಮನೆಯ ಭೂಮಿ ಬಳಕೆ ಹಾಗೂ ನಿಯಂತ್ರಿಸುವ ಅಧಿಕಾರವನ್ನು ರಾಜ್ಯ ಸರ್ಕಾರ ಪಡೆದುಕೊಂಡಿದೆ.
ಕಳೆದ ಸಚಿವ ಸಂಪುಟ ಸಭೆಯಲ್ಲಿ ಟಿಡಿಆರ್ ನೀಡದಿರಲು ಸರ್ಕಾರ ತೀರ್ಮಾನಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅರಮನೆ ಭೂ ಕಬಳಿಕೆ ಮತ್ತು ನಿಯಂತ್ರಣ ಅಧ್ಯಾದೇಶ 2025ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
3 ಸಾವಿರ ಕೋಟಿ ರೂ. ಮೌಲ್ಯದ ಬೆಂಗಳೂರು ಅರಮನೆ ಮೈದಾನದ ಭೂಮಿಗೆ ಟಿಡಿಆರ್ ನೀಡುವ ವಿಚಾರದಲ್ಲಿ ಮೈಸೂರು ರಾಜಮನೆತನ ಮತ್ತು ರಾಜ್ಯ ಸರ್ಕಾರದ ನಡುವೆ ಹಗ್ಗಜಗ್ಗಾಟ ನಡೆದಿತ್ತು. ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಬೇಕಾದ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ನಿರ್ಣಯ ಕೈಗೊಳ್ಳಲಾಗಿತ್ತು.
![ಬೆಂಗಳೂರು ಅರಮನೆ ಆಸ್ತಿ, ಸುಗ್ರೀವಾಜ್ಞೆಗೆ ರಾಜ್ಯಪಾಲರ ಒಪ್ಪಿಗೆ, Ordinance](https://etvbharatimages.akamaized.net/etvbharat/prod-images/30-01-2025/kn-bng-11-governor-assent-to-state-government-ordinance-script-7208083_29012025224152_2901f_1738170712_1093.jpg)
1996ರಲ್ಲಿ ಬೆಂಗಳೂರು ಅರಮನೆ ವ್ಯಾಪ್ತಿಯ 472 ಎಕರೆ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆಯಲು ಒಟ್ಟು 11 ಕೋಟಿ ರೂ. ನಿಗದಿ ಪಡಿಸಿತ್ತು. ಅಂದು ಎಕರೆಗೆ 2.30 ಲಕ್ಷ ರೂ.ನಂತೆ ದರ ನಿಗದಿ ಮಾಡಲಾಗಿತ್ತು. ಆದರೆ ರಾಜಮನೆತನ ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿತ್ತು. ಇಂದಿನ ಮಾರುಕಟ್ಟೆ ದರ ಎಕರೆಗೆ 200 ಕೋಟಿ ರೂ. ಆಗುತ್ತದೆ. ರಸ್ತೆ ಅಗಲಿಕರಣಕ್ಕೆ ಬೇಕಾದ 15 ಎಕರೆ 36 ಗುಂಟೆ ಜಾಗವನ್ನೇ ವಶಕ್ಕೆ ಪಡೆಯುವುದಾದರೆ ಎಕರೆಗೆ 200 ಕೋಟಿ ಬೆಲೆ ಆಗುತ್ತದೆ. ಒಟ್ಟು 3,000 ಕೋಟಿ ರೂ. ಆಗಲಿದೆ. ಇದು ಅಭಿವೃದ್ಧಿ ದೃಷ್ಟಿಯಿಂದ ಕಾರ್ಯ ಸಾಧ್ಯವಿಲ್ಲ. ರಾಜ್ಯ ಸರ್ಕಾರ ಅರಮನೆಯ ಭೂಮಿಯನ್ನು ವಶಕ್ಕೆ ಪಡೆಯುವುದಾದರೆ ಟಿಡಿಆರ್ ಕೊಡಲು ಸಾಧ್ಯವಿಲ್ಲ. ಹಾಗಾಗಿ ಸುಗ್ರೀವಾಜ್ಞೆ ಮೂಲಕ ಜಾಗವನ್ನು ವಶಕ್ಕೆ ಪಡೆಯುವ ಮುಕ್ತ ಅವಕಾಶ ಸರ್ಕಾರ ಪಡೆದುಕೊಂಡಿದೆ.
ಸುಗ್ರೀವಾಜ್ಞೆ ವಿರುದ್ಧ ಕಾನೂನು ಹೋರಾಟ: ಬೆಂಗಳೂರು ಅರಮನೆ ರಸ್ತೆ ಟಿಡಿಆರ್ ತಪ್ಪಿಸಲು ಸುಗ್ರೀವಾಜ್ಞೆ ಹೊರಡಿಸಲು ಜ.24ರಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡ ಬೆನ್ನಲ್ಲೇ ರಾಜಮಾತೆ ಪ್ರಮೋದಾದೇವಿ ಒಡೆಯರ್ ಸುದ್ದಿಗೋಷ್ಠಿ ನಡೆಸಿ, ಕಾನೂನು ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದರು.
ಬೆಂಗಳೂರು ಅರಮನೆ ಜಾಗಕ್ಕೆ ಈಗಲೂ ಕೂಡ ನಾವೇ ಓನರ್ ಆಗಿದ್ದೇವೆ. ನಾನು ಸಂಪುಟ ನಿರ್ಧಾರದ ಬಗ್ಗೆ ನೋಡಿದೆ. 1996ರಲ್ಲಿ ಸ್ವಾಧೀನ ಹಾಗೂ ತಡೆ ಆರ್ಡರ್ ಕೂಡ ನಮ್ಮ ಬಳಿಯಿದೆ. ಸುಪ್ರೀಂಕೋರ್ಟ್ ಕೂಡ ಬೆಂಗಳೂರು ಅರಮನೆ ಜಾಗದ ಬಗ್ಗೆ ಅಭಿಪ್ರಾಯ ಹೇಳಿದೆ. ಕರ್ನಾಟಕದ ಸರ್ಕಾರದ ಅಣತಿಯಂತೆ ಇದುವರೆಗೂ ಅಲ್ಲಿ ಎಲ್ಲವೂ ನಡೆದಿದೆ. ಕಳೆದ 30 ವರ್ಷಗಳಿಂದಲೂ ಮಾಡುತ್ತಿರುವ ಕಾನೂನು ಸಮರವನ್ನು ಮುಂದುವರಿಸುವುದಾಗಿ ತಿಳಿಸಿದ್ದರು.
ಇದನ್ನೂ ಓದಿ: ದುಬಾರಿ ಅರಮನೆ ಮೈದಾನ ರಸ್ತೆ ಅಗಲೀಕರಣ ಬದಲು ಪರ್ಯಾಯ ಸುರಂಗ ರಸ್ತೆ ಮಾರ್ಗದತ್ತ ಸರ್ಕಾರದ ಚಿತ್ತ!
ಇದನ್ನೂ ಓದಿ: ಯಾರ ಮೇಲೂ ದ್ವೇಷ ಸಾಧಿಸುತ್ತಿಲ್ಲ, ಅಷ್ಟು ದೊಡ್ಡ ಪ್ರಮಾಣದ ಟಿಡಿಆರ್ ಕೊಡಲು ಸಾಧ್ಯವಿಲ್ಲ: ಸಿಎಂ
ಇದನ್ನೂ ಓದಿ: ಬೆಂಗಳೂರು ಅರಮನೆ ಜಾಗ ನಮ್ಮದೇ, ಸುಗ್ರೀವಾಜ್ಞೆ ವಿರುದ್ಧ ಕಾನೂನು ಹೋರಾಟ: ಪ್ರಮೋದಾದೇವಿ ಒಡೆಯರ್