ನವದೆಹಲಿ: ಭಾರತದ ಹೆದ್ದಾರಿ ವಲಯದಲ್ಲಿ ಮಾಡಿದ ಹೂಡಿಕೆಗಳು ದೇಶದ ಜಿಡಿಪಿಗೆ ಆ ಹೂಡಿಕೆಗಳಿಗಿಂತಲೂ ಮೂರು ಪಟ್ಟು ಹೆಚ್ಚು ಆದಾಯ ತಂದು ಕೊಟ್ಟಿವೆ ಎಂದು ಬೆಂಗಳೂರಿನ ಐಐಎಂ ಅಧ್ಯಯನ ವರದಿ ಹೇಳಿದೆ. ಹೆದ್ದಾರಿ ವಲಯದಲ್ಲಿನ ಹೂಡಿಕೆಗಳಿಂದಾಗಿ ಹೆಚ್ಚಿನ ಉದ್ಯೋಗಗಳು ಮತ್ತು ಆದಾಯಗಳ ಸೃಷ್ಟಿಯ ಪರಿಣಾಮದಿಂದ ಉಂಟಾಗುವ ಗುಣಕ ಪರಿಣಾಮದಿಂದಾಗಿ ಆದಾಯ ಮೂರು ಪಟ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ಹೆದ್ದಾರಿ ನಿರ್ಮಾಣಕ್ಕೆ ಮಾಡಲಾದ ಪ್ರತಿಯೊಂದು ಯುನಿಟ್ ವೆಚ್ಚವು ದೇಶದ ಒಟ್ಟು ದೇಶೀಯ ಉತ್ಪನ್ನದಲ್ಲಿ (ಜಿಡಿಪಿ) 3.21 ಯುನಿಟ್ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸಂಶೋಧನಾ ಅಧ್ಯಯನ ತಿಳಿಸಿದೆ.
2013ರಿಂದ 2022ರವರೆಗೆ ನಡೆಸಿದ ಅಧ್ಯಯನದ ಪ್ರಕಾರ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯು ಕುಟುಂಬ ಆದಾಯದಲ್ಲಿ ಶೇಕಡಾ 9ರಷ್ಟು ಹೆಚ್ಚಳ, ಗೃಹ ಖರ್ಚಿನಲ್ಲಿ ಶೇಕಡಾ 6ರಷ್ಟು ಹೆಚ್ಚಳ ಮತ್ತು ಕಾರು ಮಾರಾಟದಲ್ಲಿ ಶೇಕಡಾ 10.4ರಷ್ಟು ಎರಡಂಕಿ ಏರಿಕೆಗೆ ಕಾರಣವಾಗಿದೆ.
ದೇಶದಲ್ಲಿ ಹೆದ್ದಾರಿಗಳ ಅಭಿವೃದ್ಧಿಯಿಂದಾಗಿ ಕಾರ್ಖಾನೆಗಳು ಮತ್ತು ಕಚ್ಚಾ ವಸ್ತುಗಳನ್ನು ಪೂರೈಸುವ ಮೂಲಗಳ ನಡುವಿನ ಸಾರಿಗೆ ವೆಚ್ಚವು ಶೇಕಡಾ 3 ರಷ್ಟು ಕಡಿಮೆಯಾಗಿವೆ ಹಾಗೂ ಕಾರ್ಖಾನೆಗಳು ಮತ್ತು ಸಿದ್ಧಪಡಿಸಿದ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರ ನಡುವಿನ ವೆಚ್ಚಗಳು ಶೇಕಡಾ 1.33ರಷ್ಟು ಕಡಿಮೆಯಾಗಿವೆ. ಇದು ಪೂರೈಕೆ ಸರಪಳಿಯಲ್ಲಿ ಸುಧಾರಿತ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ ಎಂದು ವರದಿ ಉಲ್ಲೇಖಿಸಿದೆ.
ಹೊಸ ಹೆದ್ದಾರಿಗಳು ಕೃಷಿ ವಲಯ ಮತ್ತು ಎಂಎಸ್ಎಂಇಗಳ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಬೆಳವಣಿಗೆಗೆ ಉತ್ತೇಜನ ನೀಡಿವೆ ಎಂದು ಅಧ್ಯಯನವು ಗಮನಸೆಳೆದಿದೆ.
ಐಐಎಂ ಬೆಂಗಳೂರಿನ ಸಪ್ಲೈ ಚೈನ್ ಮ್ಯಾನೇಜ್ ಮೆಂಟ್ ಸೆಂಟರ್ ಮತ್ತು ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾ (ಎನ್ಎಚ್ಎಐ) ಸಹಯೋಗದೊಂದಿಗೆ ನಡೆಸಲಾದ ಅಧ್ಯಯನದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ಸಾಮಾಜಿಕ-ಆರ್ಥಿಕ ಪರಿಣಾಮವನ್ನು ಮೌಲ್ಯಮಾಪನ ಮಾಡಲಾಗಿದೆ.
ಹೆದ್ದಾರಿ ಜಾಲದ ವಿಸ್ತರಣೆಯಿಂದಾಗಿ ಸಾರ್ವಜನಿಕರಿಗೆ ಶಾಲೆಗಳು, ಉನ್ನತ ಶಿಕ್ಷಣ ಸಂಸ್ಥೆಗಳು, ಅಗತ್ಯ ಆರೋಗ್ಯ ಸೇವೆಗಳು ಮತ್ತು ಸಮುದಾಯ ಸೇವೆಗಳನ್ನು ಪಡೆಯಲು ಸಹಾಯಕವಾಗಿದೆ ಎಂದು ವರದಿ ತಿಳಿಸಿದೆ. ಇದಲ್ಲದೆ, ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಿದ ಪ್ರದೇಶಗಳಲ್ಲಿ ಅಪರಾಧ ಪ್ರಮಾಣ, ಅಪಘಾತಗಳು, ಮಾಲಿನ್ಯ, ಶಬ್ದದ ಮಟ್ಟ ಮತ್ತು ಸಂಚಾರ ದಟ್ಟಣೆಯಲ್ಲಿ ಇಳಿಕೆ ಕಂಡುಬಂದಿದೆ.
ಈ ಅಧ್ಯಯನವು ವಿವಿಧ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು ಸೇರಿದಂತೆ 100ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನಡೆಸಿದ ಸಮಗ್ರ ಸಮೀಕ್ಷೆಗಳು ಮತ್ತು ವಿಶ್ಲೇಷಣೆಗಳನ್ನು ಆಧರಿಸಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 2023-24ರಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕಾಗಿ ದಾಖಲೆಯ 2.07 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಇದು ಇದುವರೆಗಿನ ಅತಿ ಹೆಚ್ಚು ಬಂಡವಾಳ ವೆಚ್ಚವಾಗಿದೆ ಮತ್ತು 2022-23ರಲ್ಲಿ ಖರ್ಚು ಮಾಡಿದ 1.73 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ ಶೇಕಡಾ 20ರಷ್ಟು ಏರಿಕೆಯಾಗಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ಭಾರತದ ರಾಷ್ಟ್ರೀಯ ಹೆದ್ದಾರಿ ಜಾಲದ ಉದ್ದವು ಕಳೆದ 10 ವರ್ಷಗಳಲ್ಲಿ ಶೇಕಡಾ 60ರಷ್ಟು ಹೆಚ್ಚಾಗಿದೆ, ಇದು 2014 ರಲ್ಲಿ ಇದ್ದ 91,287 ಕಿ.ಮೀ ನಿಂದ 2024 ರಲ್ಲಿ 1,46,195 ಕಿ.ಮೀ.ಗೆ ಏರಿದೆ. ಇದು ವಿಶ್ವದ ಎರಡನೇ ಅತಿದೊಡ್ಡ ರಸ್ತೆ ಜಾಲವಾಗಿದೆ. ರಾಷ್ಟ್ರೀಯ ಹೈಸ್ಪೀಡ್ ಕಾರಿಡಾರ್ಗಳ ಉದ್ದ 2014ರಲ್ಲಿದ್ದ ಕೇವಲ 93 ಕಿ.ಮೀ ನಿಂದ 2024 ರಲ್ಲಿ 2,474 ಕಿ.ಮೀ.ಗೆ ಏರಿಕೆಯಾಗಿದೆ. ಇದು ದೇಶದ ಮೂಲಸೌಕರ್ಯದಲ್ಲಿನ ಗಣನೀಯ ಸುಧಾರಣೆಯನ್ನು ಪ್ರತಿಬಿಂಬಿಸುತ್ತದೆ.
ಇದನ್ನೂ ಓದಿ: ನೀತಿ ಆಯೋಗದ ಹಣಕಾಸು ಸೂಚ್ಯಂಕ: 10ನೇ ಸ್ಥಾನದಲ್ಲಿ ಕರ್ನಾಟಕ, ರ್ಯಾಂಕಿಂಗ್ ಕುಸಿತ - FISCAL HEALTH INDEX