How Much Salt You Should Consume in a Day : ಅಡುಗೆಯ ರುಚಿ ಹೆಚ್ಚಿಸಲು ಎಷ್ಟು ಉಪ್ಪು ಬಳಕೆ ಮಾಡಬೇಕು ಎಂಬುದು ನಮಗೆ ತಿಳಿದಿದೆ. ಆದರೆ, ಅತಿಯಾಗಿ ಉಪ್ಪು ಸೇವಿಸುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ನಾವು ಸೇವಿಸುವ ತರಕಾರಿಗಳು, ಮಾಂಸ, ಹಣ್ಣುಗಳು ಹಾಗೂ ಧಾನ್ಯಗಳು ಸ್ವಲ್ಪ ಪ್ರಮಾಣದಲ್ಲಿ ಸೋಡಿಯಂ ಒಳಗೊಂಡಿರುತ್ತವೆ. ಅನೇಕ ಜನರು ತಮಗೆ ಅರಿವಿಲ್ಲದೆಯೇ ಉಪ್ಪನ್ನು ಅತಿಹೆಚ್ಚು ಸೇವಿಸುತ್ತಾರೆ.
ಇದರ ಪರಿಣಾಮ ಕಿಡ್ನಿ, ಬಿಪಿ ಸಮಸ್ಯೆ ಸೇರಿದಂತೆ ವಿವಿಧ ಆರೋಗ್ಯದ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ವೈದ್ಯರು ಉಪ್ಪು ಸೇವನೆ ಮಾಡುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಎನ್ನುತ್ತಾರೆ. ಹಲವು ಜನರಿಗೆ ಉಪ್ಪನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು ಎಂಬುದು ತಿಳಿದಿದ್ದರೂ ಕೂಡ ಈ ಬಗ್ಗೆ ಮುನ್ನಚ್ಚರಿಕೆ ವಹಿಸುವುದಿಲ್ಲ. ಇದರಿಂದ ತಜ್ಞರು ವಯಸ್ಸಿಗೆ ಅನುಗುಣವಾಗಿ ಎಷ್ಟು ಉಪ್ಪು ಸೇವಿಸಬೇಕು ಎನ್ನುವ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.
1 ವರ್ಷದೊಳಗಿನ ಮಕ್ಕಳ ಮೂತ್ರಪಿಂಡಗಳು ಬೆಳವಣಿಗೆ ಹಂತದಲ್ಲಿರುತ್ತವೆ. ಇದರಿಂದಾಗಿ ಮಕ್ಕಳು ಸೇವಿಸುವ ಆಹಾರದಲ್ಲಿ ಉಪ್ಪು ಸೇರಿಸಬಾರದು. ಆದರೆ, ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳಲ್ಲಿ ಸೋಡಿಯಂ ಅಗತ್ಯವಾಗಿಬೇಕಾಗುತ್ತದೆ. ತಾಯಿಯ ಎದೆ ಹಾಲಿನಲ್ಲಿ ಈ ಅಂಶವಿರುತ್ತದೆ. ಒಂದು ವರ್ಷದೊಳಗಿನ ಮಕ್ಕಳಿಗೆ ತಾಯಿಯ ಎದೆಹಾಲು ನೀಡುವುದು ಮುಖ್ಯವಾಗಿದೆ.
- 1 ರಿಂದ 3 ವರ್ಷದ ಮಕ್ಕಳು : ಈ ವಯಸ್ಸಿನ ಮಕ್ಕಳಿಗೆ ಪ್ರತಿದಿನ 0.8 ಗ್ರಾಂ ಸೋಡಿಯಂ ಅವಶ್ಯಕತೆ ಇರುತ್ತದೆ. ತಮ್ಮ ಆಹಾರದಲ್ಲಿ ಎರಡು ಗ್ರಾಂವರೆಗೆ ಉಪ್ಪನ್ನು ಬಳಕೆ ಮಾಡಬಹುದು ಎಂದು ತಜ್ಞರು ತಿಳಿಸುತ್ತಾರೆ.
- 5 ವರ್ಷದೊಳಗಿನ ಮಕ್ಕಳು : ದಿನಕ್ಕೆ ಈ ವಯಸ್ಸಿನವರು ಆಹಾರದ ಮೂಲಕ 3 ಗ್ರಾಂವರೆಗೆ ಉಪ್ಪನ್ನು ಸೇವಿಸಬಹುದು.
- 10 ರಿಂದ 18 ವರ್ಷದವರು : ಪ್ರತಿನಿತ್ಯ ಈ ವಯಸ್ಸಿನವರು ತಮ್ಮ ಆಹಾರದಲ್ಲಿ 5 ಗ್ರಾಂ ವರೆಗೆ ಉಪ್ಪು ಸೇವನೆ ಮಾಡಬಹುದು.
- 18 ವರ್ಷ ಮೇಲ್ಪಟ್ಟ ವಯಸ್ಸಿನವರು : ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ, 18 ವರ್ಷ ಮೇಲ್ಪಟ್ಟವರು ತಮ್ಮ ದೈನಂದಿನ ಆಹಾರದಲ್ಲಿ 7 ರಿಂದ 12 ಗ್ರಾಂ ಉಪ್ಪನ್ನು ತಿನ್ನಬಹುದು. ಇದಕ್ಕಿಂತ ಹೆಚ್ಚು ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
- 65 ವರ್ಷಕ್ಕಿಂತ ಮೇಲ್ಪಟ್ಟವರು : 65 ವರ್ಷಕ್ಕಿಂತ ಮೇಲ್ಪಟ್ಟ ಜನರು ತಮ್ಮ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ತಮ್ಮ ಆಹಾರದಲ್ಲಿ ಉಪ್ಪನ್ನು ಸೇವನೆ ಮಾಡಬೇಕಾಗುತ್ತದೆ. ಅತಿಯಾದ ಉಪ್ಪು ಸೇವನೆ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ನ ಸದಸ್ಯರ ತಂಡದಿಂದ ನಡೆದ ಸಂಶೋಧನೆಯ ಪ್ರಕಾರ, ತಮ್ಮ ಆಹಾರದಲ್ಲಿ ಪ್ರತಿದಿನ 3 ರಿಂದ 5 ಗ್ರಾಂ ಉಪ್ಪನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದಿದೆ (ಸಂಬಂಧಿತ ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ). ಈ ಪ್ರಮಾಣದಲ್ಲಿ ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ಸಂಶೋಧಕರು ತಿಳಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ವೀಕ್ಷಿಸಬಹುದು:
https://pubmed.ncbi.nlm.nih.gov/34579105/
ಓದುಗರಿಗೆ ಮುಖ್ಯ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.