ಕೊಪ್ಪಳ: ತಾಲೂಕಿನ ಅಲ್ಲಾನಗರ ಗ್ರಾಮದ ಬಳಿಯ ಕಾಮಿನಿ ಇಸ್ಫಾತ್ ಐರನ್ ಅಂಡ್ ಸ್ಪಾಂಜ್ ಕಾರ್ಖಾನೆಯ ಅನಿಲ ಸೋರಿಕೆಯಾಗಿ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಮಂಗಳವಾರ ಜರುಗಿದೆ.
ಮೃತನನ್ನು ತಾಲೂಕಿನ ಅಲ್ಲಾನಗರ ಗ್ರಾಮದ ನಿವಾಸಿ ಮಾರುತಿ ಕೊರಗಲ್(24) ಎಂದು ಗುರುತಿಸಲಾಗಿದೆ. ಏಳು ಜನರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. ಗಾಯಾಳು ಕಾರ್ಮಿಕರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಕಾರ್ಬನ್ ಮೋನಾಕ್ಸೈಡ್ ಟ್ಯಾಂಕ್ ಸೋರಿಕೆಯಾಗಿ ಘಟನೆ ಸಂಭವಿಸಿದ್ದು, ಸಾವಿಗೀಡಾದ ಯುವಕನನ್ನು ನಗರದ ಜಿಲ್ಲಾಸ್ಪತ್ರೆಯ ಹಿಂಭಾಗದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಇರಿಸಲಾಗಿದೆ. ಎಎಸ್ಪಿ ಹೇಮಂತ್ ಕುಮಾರ, ಸಿಪಿಐ ಮೌನೇಶ್ವರ ಪಾಟೀಲ್ ಭೇಟಿ ನೀಡಿ, ಪರಿಶೀಲಿಸಿದರು. ಈ ಕುರಿತು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ತುಮಕೂರಿನಲ್ಲಿ ಆಯಿಲ್ ಟ್ಯಾಂಕ್ ಬ್ಲಾಸ್ಟ್ ; ಇಬ್ಬರು ಕಾರ್ಮಿಕರು ಸಾವು - OIL TANKER EXPLOSION