ಬೆಂಗಳೂರು: ಇಲ್ಲಿನ ರಾಜಾಜಿನಗರದ ಪೊಲೀಸ್ ಠಾಣಾ ವ್ಯಾಪ್ತಿಯ ಎಲೆಕ್ಟ್ರಿಕಲ್ ವಾಹನಗಳ ಶೋ ರೂಮ್ನಲ್ಲಿ ಬೆಂಕಿ ಕಾಣಿಸಿಕೊಂಡು, ಸುಮಾರು 30ಕ್ಕೂ ಹೆಚ್ಚು ದ್ವಿಚಕ್ರವಾಹನಗಳು ಅಗ್ನಿಗೆ ಆಹುತಿಯಾಗಿರುವ ಮಾಹಿತಿ ಲಭ್ಯವಾಗಿದೆ.
ಡಾ.ರಾಜ್ಕುಮಾರ್ ರಸ್ತೆಯಲ್ಲಿರುವ ಒಕಿನೋವಾ ಎಲೆಕ್ಟ್ರಿಕಲ್ ಬೈಕ್ ಶೂ ರೂಮ್ನಲ್ಲಿ ಇಂದು ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಕ್ಷರ್ಣಾಧದಲ್ಲಿ ಅಗ್ನಿ ವ್ಯಾಪ್ತಿಸಿ ಅನಾಹುತ ಸಂಭವಿಸಿದ್ದು, ಮಾಹಿತಿ ಆಧರಿಸಿ ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಬೈಕ್ ಶೋ ರೂಮ್ನಲ್ಲಿ ಎಂದಿನಂತೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಜ್ವಾಲೆ ಹೆಚ್ಚಾಗುತ್ತಿದ್ದಂತೆ ಸಿಬ್ಬಂದಿ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ. ಅಗ್ನಿಶಾಮಕ ಸಿಬ್ಬಂದಿಗಳು ಅಗ್ನಿ ನಂದಿಸಿ, ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ವಾರವಷ್ಟೇ ಆರ್ಟಿಓ ಅಧಿಕಾರಿಗಳು ಶೋ ರೂಮ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ತಪಾಸಣೆ ವೇಳೆ ಲೋಪದೋಷಗಳು ಕಂಡುಬಂದಿದ್ದವು. 250 ವ್ಯಾಟ್ ಬ್ಯಾಟರಿ ಬಳಕೆಯ 25 ಕೀ.ಮೀ ವೇಗದ ವಾಹನಗಳಿಗೆ ಮಾತ್ರ ಪರವಾನಗಿ ಪಡೆಯಲಾಗಿತ್ತು. ಆದರೆ ಶೋ ರೂಮ್ನಲ್ಲಿ ನಿಗದಿಗಿಂತ ಹೆಚ್ಚ ಸಾಮರ್ಥ್ಯ ಬಳಕೆ ಬ್ಯಾಟರಿ ಬಳಸುತ್ತಿದ್ದು ಕಂಡುಬಂದಿದೆ ಎನ್ನಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಗ್ನಿಶಾಮಕ ಅಧಿಕಾರಿ ಹೇಳಿದ್ದೇನು?: ಘಟನೆ ಸಂಬಂಧ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಕಿಶೋರ್ ಮಾತನಾಡಿ, ''ಘಟನೆ ಬಗ್ಗೆ 2 ಗಂಟೆ ಸುಮಾರಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ಬಂದು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ. ದುರಂತದ ವೇಳೆ ನಾಲ್ವರು ಸಿಬ್ಬಂದಿ ಹೊರಬಂದಿದ್ದರಿಂದ ಸಾವು-ನೋವು ಕಂಡುಬಂದಿಲ್ಲ'' ಎಂದರು.

''ಶೋ ರೂಮ್ನಲ್ಲಿ 74 ದ್ವಿಚಕ್ರವಾಹನಗಳಿದ್ದು, ಈ ಪೈಕಿ 19 ವಾಹನಗಳು ಸಂಪೂರ್ಣ ಹಾನಿಯಾಗಿವೆ. 9 ಇವಿ ಬೈಕ್ ಭಾಗಶಃ ಸುಟ್ಟಿವೆ. ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಜೊತೆಗೆ, ಬ್ಯಾಟರಿ ಸ್ಫೋಟಗೊಂಡಿರಬಹುದು ಎಂಬ ಆಯಾಮದಲ್ಲಿಯೂ ಪರಿಶೀಲನೆ ನಡೆಸಲಾಗುತ್ತಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ'' ಎಂದು ಕಿಶೋರ್ ತಿಳಿಸಿದರು.
ಮೂರು ತಿಂಗಳ ಅಂತರದಲ್ಲಿ ಎರಡನೇ ದುರ್ಘಟನೆ: ಕಳೆದ ವರ್ಷ ನ.19ರಂದು ರಾಜ್ಕುಮಾರ್ ರಸ್ತೆಯಲ್ಲಿರುವ ಮೈ ಇವಿ ಬೈಕ್ ಶೋ ರೂಮ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅನಾಹುತ ಸಂಭವಿಸಿತ್ತು. ದುರ್ಘಟನೆಯಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಸೇಲ್ಸ್ ಗರ್ಲ್ ಪ್ರಿಯಾ ಸಜೀವ ದಹನವಾಗಿದ್ದರು. ದುರಂತದಲ್ಲಿ ಹತ್ತಾರು ಇವಿ ಬೈಕ್ಗಳು ಬೆಂಕಿಗೆ ಆಹುತಿಯಾಗಿದ್ದವು. ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಶಿವಮೊಗ್ಗ: ಎಟಿಎಂ ಕಳ್ಳತನಕ್ಕೆ ಯತ್ನ, ಸೈರನ್ನಿಂದ ಪರಾರಿಯಾದ ಕಳ್ಳರು