ನವದೆಹಲಿ: ಇಲ್ಲಿನ ಘಾಜಿಪುರ ಪ್ರದೇಶದಲ್ಲಿ ಅನಾಮಧೇಯ ಸೂಟ್‌ಕೇಸ್‌ನಲ್ಲಿ ಪತ್ತೆಯಾದ ಯುವತಿಯ ಮೃತದೇಹದ ನಿಗೂಢತೆ ಬಯಲಾಗಿದೆ. ಸಹಜೀವನ ನಡೆಸುತ್ತಿದ್ದ ಗೆಳೆಯನೇ ಗೆಳತಿಯನ್ನು ಕೊಂದು ಬಳಿಕ ಶವವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸಿ, ನಿರ್ಜನ ಪ್ರದೇಶದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶವ ಸಾಗಿಸಲು ಬಳಸಿದ ಕಾರಿನ ಜಾಡು ಹಿಡಿದು ತನಿಖೆ ನಡೆಸಿದಾಗ, ಲಿವ್ ಇನ್ ಗೆಳೆಯನೇ ಈ ಕೃತ್ಯ ನಡೆಸಿದ್ದಾನೆ ಎಂದು ತಿಳಿಯಿತು. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣದ ವಿವರ: ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಭಾನುವಾರ (ಜನವರಿ 26) ಬೆಳಗ್ಗೆ 4.10ರ ಸುಮಾರಿನಲ್ಲಿ ಘಾಜಿಪುರ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿತ್ತು. ಇದನ್ನು ಕಂಡ ಸ್ಥಳೀಯರು ಮಾಹಿತಿ ನೀಡಿದ್ದರು. ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ, ಅದಕ್ಕೆ ಬೆಂಕಿ ಹಚ್ಚಲಾಗಿತ್ತು. ಶವ ಗುರುತು ಹಿಡಿಯಲಾಗದಷ್ಟು ಸುಟ್ಟು ಹೋಗಿತ್ತು. ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಯಿತು. ಘಟನಾ ಸ್ಥಳದಲ್ಲಿ ಯಾವುದೇ ಸುಳಿವುಗಳು ಕಂಡು ಬಂದಿರಲಿಲ್ಲ. ಯುವತಿಯ ಮುಖವೂ ತೀವ್ರವಾಗಿ ಸುಟ್ಟುಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಘಾಜಿಪುರ ಠಾಣೆ ಪೊಲೀಸರು ಮತ್ತು ಎಟಿಎಸ್ ಜಂಟಿಯಾಗಿ ಪ್ರಕರಣದ ತನಿಖೆ ಆರಂಭಿಸಿತು. ಸುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕಾರೊಂದು ಘಟನಾ ಸ್ಥಳದ ಬಳಿ ಹಾದು ಹೋಗಿತ್ತು. ವಾಹನದ ಮಾಲೀಕರನ್ನು ವಿಚಾರಣೆ ನಡೆಸಲಾಯಿತು. ಬಳಿಕ ಆರೋಪಿಯ ಜಾಡು ಸಿಕ್ಕಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮದುವೆಗೆ ಒತ್ತಡ ಹೇರಿದ್ದಕ್ಕೆ ಕೊಲೆ: ವಾಹನದ ಗುರುತಿನ ಆಧಾರದ ಮೇಲೆ ಪೊಲೀಸರು ಗ್ರೇಟರ್ ನೋಯ್ಡಾದಲ್ಲಿದ್ದ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದರು. ಆತನ ವಿಚಾರಣೆ ನಡೆಸಿದಾಗ, ಕೊಲೆ ಬಗ್ಗೆ ಬಾಯ್ಬಿಟ್ಟಿದ್ದಾನೆ. 2024ರ ನವೆಂಬರ್ನಿಂದ ಇಬ್ಬರೂ ಲಿವ್ - ಇನ್ ಸಂಬಂಧ ಹೊಂದಿದ್ದರು. ಯುವತಿ ಆರೋಪಿಗೆ ಸಹೋದರಿ ಸಂಬಂಧಿಯಾಗಿದ್ದಳು. ಆಕೆ ಮದುವೆಗೆ ನಿರಂತರವಾಗಿ ಒತ್ತಡ ಹೇರುತ್ತಿದ್ದಳು. ಇದರಿಂದ ಜಗಳವೂ ಆಗುತ್ತಿತ್ತು. ಜನವರಿ 25 ರಂದು ರಾತ್ರಿ 8 ಗಂಟೆಗೆ ಕುಡಿದ ಮತ್ತಿನಲ್ಲಿದ್ದ ಆರೋಪಿ, ಯುವತಿಯೊಂದಿನ ಜಗಳದಲ್ಲಿ ಕತ್ತು ಹಿಸುಕಿ ಕೊಂದಿದ್ದಾನೆ.
ನಂತರ, ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು, ವಿಲೇವಾರಿ ಮಾಡಲು ತನ್ನ ಸ್ನೇಹಿತನಿಗೆ ಕರೆ ಮಾಡಿದ್ದಾರೆ. ಶವವನ್ನು ಕಾರಿನಲ್ಲಿ ಇರಿಸಿಕೊಂಡು ಘಾಜಿಪುರ ಪ್ರದೇಶದ ನಿರ್ಜನ ಸ್ಥಳದಲ್ಲಿ ಬಿಸಾಡಿ, ಅದರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಘಟನೆಯ ವಿವರ ನೀಡಿದ್ದಾರೆ.