ದಾವಣಗೆರೆ: ನೀರು ಕಾಯಿಸಲು ಅಳವಡಿಸಿದ್ದ ಬಾಯ್ಲರ್ ಡ್ರಮ್ ಹಠಾತ್ ಕುಸಿದು ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಬಾಲಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಹರಿಹರ ತಾಲೂಕಿನ ಜಿಗಳಿ ಗ್ರಾಮದ ರಂಗನಾಥ್ (11) ಮೃತ ಬಾಲಕ.
ದಾವಣಗೆರೆಯ ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಖಾಸಗಿ ವಸತಿಯುತ ಪ್ರಾಥಮಿಕ ಶಾಲೆಯಲ್ಲಿ ಮೃತ ರಂಗನಾಥ್ ಐದನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ವಸತಿ ಶಾಲೆಯಲ್ಲೇ ಈ ಘಟನೆ ನಡೆದಿದೆ ಎಂದು ಮೃತ ಬಾಲಕನ ಪೋಷಕರು ಆರೋಪ ಮಾಡುತ್ತಿದ್ದಾರೆ.
ಜಿಗಳಿ ಗ್ರಾಮದ ನಿವಾಸಿಗಳಾದ ರಮೇಶ್ ಅವರ ಕುಟುಂಬದ ರಂಗನಾಥ್ ಸೇರಿ ಕುಟುಂಬದ ಐವರು ಬಾಲಕರು ಇದೇ ವಸತಿಯುತ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಚಳಿ ಇದ್ದುದರಿಂದ ರಂಗನಾಥನು ತನ್ನ ಸ್ನೇಹಿತರು ಹಾಗೂ ಸಹೋದರರೊಂದಿಗೆ ಸೋಮವಾರ ಬೆಳಗ್ಗೆ ಮಹಡಿಗೆ ತೆರಳಿ ಬಾಯ್ಲರ್ ಒಲೆಯ ಸಮೀಪ ಬೆಂಕಿ ಕಾಯಿಸಿಕೊಳ್ಳುತ್ತಿದ್ದ. ಈ ವೇಳೆ ನೀರು ಕಾಯಿಸುವ ಬಾಯ್ಲರ್ ಡ್ರಮ್ ರಂಗನಾಥನ ಮೇಲೆ ಏಕಾಏಕಿ ಕುಸಿದು ಬಿದ್ದಿದೆ ವರದಿಯಾಗಿದೆ.
ಬಾಯ್ಲರ್ ಬಿದ್ದು ಬಾಲಕನಿಗೆ ಪಕ್ಕೆಲುಬುಗೆ ಬಲವಾದ ಏಟು ಬಿದ್ದಿದ್ದರೂ ವಾರ್ಡನ್ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿಲ್ಲ. ಪರಿಸ್ಥಿತಿ ಗಂಭೀರವಾದ ಬಳಿಕ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆ ತಂದಿದ್ದಾರೆ. ಆದರೆ, ಈ ವೇಳೆ ಚಿಕಿತ್ಸೆ ಫಲಿಸದೇ ನಮ್ಮ ಮಗ ಮೃತಪಟ್ಟಿದ್ದಾನೆ. ಆ ಬಳಿಕ ನಮಗೆ ತಿಳಿಸಿದ್ದಾರೆ ಎಂದು ವಸತಿ ಶಾಲೆಯ ವಾರ್ಡನ್ ವಿರುದ್ಧ ಮೃತ ಬಾಲಕನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಐದೂ ಮಕ್ಕಳು ಮಹಡಿ ಮೇಲೆ ಹೋಗಿ ಆಟ ಆಡುತ್ತಿದ್ದರು. ಮೊದಲೇ ಬಾಯ್ಲರ್ ವೀಕ್ ಇದ್ದುದರಿಂದ ಮಕ್ಕಳಿಗೆ ಅತ್ತಕಡೆ ಹೋಗದಂತೆ ಆಗಾಗ ಹೇಳುತ್ತಿದ್ದೆವು. ಇನ್ನೇನು ನಾನು ಹೋಗಿ ಬೀಗ ಹಾಕಬೇಕಿತ್ತು. ಅಷ್ಟರಲ್ಲೇ ಈ ದುರಂತ ಸಂಭವಿಸಿದೆ. ಪಕ್ಕದಲ್ಲಿದ್ದ ನಾಲ್ವರು ಮಕ್ಕಳು ಭಯದಲ್ಲಿ ಓಡಿ ಬಂದು ರಂಗನಾಥನ ಮೇಲೆ ಬಾಯ್ಲರ್ ಬಿದ್ದಿದೆ ಅಂತ ವಿಷಯ ತಿಳಿಸಿದರು. ತಕ್ಷಣ ಗಾಯಗೊಂಡ ರಂಗನಾಥನನ್ನು ಕೆಳಗೆ ತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದೆವು. ಆಗ ಚೆನ್ನಾಗಿಯೇ ಇದ್ದ. ಮತ್ತೆ ರಾತ್ರಿ ಚುಚ್ಚುಮದ್ದು ಕೊಡಿಸಿದೆವು. ರಾತ್ರಿ ಊಟ ಮಾಡಿ ಮಲಗಿದನು. ಬೆಳಗ್ಗೆ ಎದ್ದು ಅರ್ಧ ಗ್ಲಾಸ್ ಗಂಜಿ ಸಹ ಕುಡಿದ. ಊರಿಗೆ ಕಳಿಸಿದರಾಯಿತು ಅಂತ ನಾನೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದೆ. ಪಕ್ಕದಲ್ಲೇ ಕುಳಿತುಕೊಂಡಿದ್ದ. ಈ ವೇಳೆ ಆತನ ಹೃದಯ ಬಡಿತ ಜೋರಾಗಿತ್ತು. ತಕ್ಷಣ ಬಾಲಕನ ಕೈ-ಕಾಲು ತಣ್ಣಗಾದವು. ಏಕೆ ಅಂತ ಕೇಳುತ್ತಿದ್ದಂತೆ ಕುಸಿದು ಬಿದ್ದನು. ತಕ್ಷಣ ವಾರ್ಡ್ಗೆ ಕರೆದುಕೊಂಡು ಹೋಗಲಾಯಿತು. ಅಷ್ಟರಲ್ಲೇ ಹಲ್ಲು ಕಚ್ಚಿದ್ದು ಕಾಣಿಸಿತು. ಮಹದೇವಮ್ಮ, ಹಾಸ್ಟೆಲ್ ವಾರ್ಡನ್.