Impact of Digital Addiction on Mental Health: ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇವೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಮಾರುಕಟ್ಟೆಗೆ ಅನೇಕ ಸ್ಮಾರ್ಟ್ಫೋನ್ಗಳು ಲಗ್ಗೆಯಿಡುತ್ತಲೇ ಇವೆ. ಇದರಿಂದಾಗಿ ಜನ ತಾ ಮುಂದು.. ನಾ ಮುಂದು.. ಎಂದು ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುತ್ತಲೇ ಇದ್ದಾರೆ. ಅಷ್ಟೇ ಅಲ್ಲ, ನಮಗೆ ಸ್ಮಾರ್ಟ್‌ಫೋನ್ ಇಲ್ಲದಿದ್ರೇ ಜೀವನ ಮುಂದಕ್ಕೆ ಸಾಗುವುದಿಲ್ಲವೇನೋ ಎಂಬ ಭ್ರಮಾ ಲೋಕದಲ್ಲಿದ್ದೇವೆ.
ಹೌದು.. ನಾವು ಈಗ ಸ್ಮಾರ್ಟ್‌ಫೋನ್ ಯುಗದಲ್ಲಿದ್ದೇವೆ. ತಂತ್ರಜ್ಞಾನ ಮುಂದುವರೆದಂತೆ ಈಗ ಕಿರಿಯರು, ಹಿರಿಯರು ಎಂಬ ಭೇದಭಾವವಿಲ್ಲದೇ ಪ್ರತಿಯೊಬ್ಬರ ಬಳಿ ಸ್ಮಾರ್ಟ್ಫೋನ್ಗಳಿವೆ. ಬೆಳಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೂ ಫೋನ್ ಅತ್ಯಗತ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಿನ ಯುಗದಲ್ಲಿ ಫೋನ್ ಇಲ್ಲದೆ ಒಂದು ದಿನ ಕಳೆಯುವುದೇ ಕಷ್ಟದ ಪರಿಸ್ಥಿತಿಯಾಗಿ ಮಾರ್ಪಟ್ಟಿದೆ. ಪ್ರತಿಯೊಬ್ಬರು ಸ್ಮಾರ್ಟ್ಫೋನ್ಗೆ ಅಂಟಿಕೊಂಡಿದ್ದೇವೆ. ಇದರ ಹವ್ಯಾಸವೊಂದು ಚಟವಾಗಿ ಮಾರ್ಪಟ್ಟಿದೆ. ಆದರೂ, ಈ ವ್ಯಾಪಕವಾದ ಸ್ಮಾರ್ಟ್‌ಫೋನ್ ಬಳಕೆಯು ಅನೇಕ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಅಷ್ಟೇ ಅಲ್ಲ, ಇದು ಆತ್ಮಹತ್ಯೆಯಂತಹ ಆಲೋಚನೆಗಳಿಗೂ ಸಹ ಪ್ರಚೋದಿಸುತ್ತಿದೆ ಎಂಬುದನ್ನು ಸಮೀಕ್ಷೆಗಳು ತೋರಿಸುತ್ತವೆ.
ವಿಶ್ವದ ಅತಿದೊಡ್ಡ ಸಮಗ್ರ ಮಾನಸಿಕ ಆರೋಗ್ಯ ಪ್ರೊಫೈಲ್‌ಗಳ ಡೇಟಾಬೇಸ್ ಅನ್ನು ಹೊಂದಿರುವ ಗ್ಲೋಬಲ್ ಮೈಂಡ್ ಪ್ರಾಜೆಕ್ಟ್‌ನ ಡೇಟಾ ಪ್ರಕಾರ, ಸ್ಮಾರ್ಟ್‌ಫೋನ್ ಬಳಕೆ ಪ್ರಾರಂಭವಾದ ವಯಸ್ಸು ಮತ್ತು ಅವರ ವಯಸ್ಕರ ಮಾನಸಿಕ ಆರೋಗ್ಯದ ನಡುವೆ ಸಂಬಂಧವಿದೆ ಎಂದು ತೋರುತ್ತದೆ. ಈ ಸಮೀಕ್ಷೆಯು ನೀವು ಚಿಕ್ಕ ವಯಸ್ಸಿನಲ್ಲಿ ಸ್ಮಾರ್ಟ್‌ಫೋನ್ ಬಳಸಲು ಪ್ರಾರಂಭಿಸಿದರೆ ನೀವು ಹೆಚ್ಚು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತೀರಿ ಎಂದು ಸೂಚಿಸುತ್ತದೆ.
1997-2012 ರ ನಡುವೆ ಜನಿಸಿದ ಜನರೇಷನ್ Z, ಈ ಡಿಜಿಟಲ್ ನೆಟ್‌ವರ್ಕ್‌ಗೆ ವ್ಯಸನಿಯಾದ ಮೊದಲ ಗುಂಪು. ಈ ಡಿಜಿಟಲ್ ವ್ಯಸನವು 18 ರಿಂದ 24 ವರ್ಷ ವಯಸ್ಸಿನವರ ಮಾನಸಿಕ ಆರೋಗ್ಯದ ಮೇಲೆ (ಮೆಂಟಲ್ ವೆಲ್-ಬಿಯಿಂಗ್) ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಸಮೀಕ್ಷೆ ಹೇಳುತ್ತದೆ.
ಇಲ್ಲಿ ಮಾನಸಿಕ ಯೋಗಕ್ಷೇಮ ಎಂದರೆ ಜೀವನದ ಒತ್ತಡಗಳು ಮತ್ತು ಸವಾಲುಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಸಾಮರ್ಥ್ಯ. ಇದು ಮಾನಸಿಕ ಕಾರ್ಯವನ್ನು 47 ಆಯಾಮಗಳಲ್ಲಿ ಅಳೆಯುತ್ತದೆ. ಇದರ ಪ್ರಕಾರ, ಅವರು ಚಿಕ್ಕ ವಯಸ್ಸಿನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಳಸಲು ಪ್ರಾರಂಭಿಸಿದರೆ ಅವರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆ ಹೆಚ್ಚು. ಇವುಗಳಲ್ಲಿ ಆತ್ಮಹತ್ಯೆಯ ಆಲೋಚನೆಗಳು, ರಿಯಾಲಿಟಿ ಲೈಫ್ನಿಂದ ದೂರವಿರುವುದು ಮತ್ತು ಇತರರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವ ನಡವಳಿಕೆ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳು ಕಂಡು ಬರುತ್ತವೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.
ಡಿಜಿಟಲ್ ವ್ಯಸನ ಹೆಚ್ಚಾದಂತೆ ಮಾನಸಿಕ ಮತ್ತು ನಿದ್ರೆಯ ಸಮಸ್ಯೆಗಳು ಹೆಚ್ಚಾಗುತ್ತವೆ. ಅವರು ಡಿಜಿಟಲ್ ತಂತ್ರಜ್ಞಾನಕ್ಕೆ ಹೆಚ್ಚು ವ್ಯಸನಿಯಾಗುತ್ತಾ ಹೋದಂತೆ ಅವರ ಮಾನಸಿಕ ಆರೋಗ್ಯ ಪ್ರಮಾಣ (MHQ) ಅಷ್ಟೇ ಕೆಟ್ಟದಾಗುತ್ತಾ ಸಾಗುತ್ತದೆ. ಗ್ಲೋಬಲ್ ಮೈಂಡ್ ಪ್ರಾಜೆಕ್ಟ್ ಸಂಗ್ರಹಿಸಿದ ಡೇಟಾವು 2024ರ ವೇಳೆಗೆ ಭಾರತದಲ್ಲಿ 18-24 ವರ್ಷ ವಯಸ್ಸಿನ ಶೇಕಡ 12.5 ರಷ್ಟು ಜನರು ಡಿಜಿಟಲ್ ವ್ಯಸನದಿಂದ ಬಳಲುತ್ತಿದ್ದಾರೆ ಎಂದು ಸೂಚಿಸುತ್ತದೆ. ಇದು 2021 ರಲ್ಲಿ ಸುಮಾರು ಶೇ. 9.3 ರಷ್ಟಿತ್ತು.
ಗ್ಲೋಬಲ್ ಮೈಂಡ್ ಡೇಟಾ ಪ್ರಕಾರ, ಸುಮಾರು ಶೇಕಡಾ 40 ರಷ್ಟು ಭಾರತೀಯ ಯುವಕರು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಶೇಕಡಾ 90 ರಷ್ಟು ಜನರು ತೀವ್ರ ಡಿಜಿಟಲ್ ವ್ಯಸನಿಯಾಗಿದ್ದಾರೆ. ಈ ಗಂಭೀರ ವ್ಯಸನದ ವಿರುದ್ಧ ಮಾನಸಿಕ ಆರೋಗ್ಯ ಸಂಸ್ಥೆ ಹೋರಾಡುತ್ತಿದೆ.
ಆತ್ಮಹತ್ಯೆಯ ಆಲೋಚನೆಗಳು : ನಮ್ಮ ದೇಶದ ಯುವಕರಲ್ಲಿ ಡಿಜಿಟಲ್ ವ್ಯಸನವು ಆತ್ಮಹತ್ಯೆ ಆಲೋಚನೆಗಳನ್ನು ಕೂಡಾ ಹೊಂದಿದೆ. ಡಿಜಿಟಲ್ ನೆಟ್‌ವರ್ಕ್‌ಗಳಿಗೆ ವ್ಯಸನಿಯಾಗದವರಲ್ಲಿ ಶೇಕಡಾ 55 ರಷ್ಟು ಜನರು ಆತ್ಮಹತ್ಯೆ ಆಲೋಚನೆಗಳು ಅಥವಾ ಇನ್ಟೆನ್ಶನ್ ಫೀಲ್ ಅನ್ನು ಸಹ ಅನುಭವಿಸಿದ್ದಾರೆ. ಇದು ತುಂಬಾ ಚಿಂತಾಜನಕ. ಇನ್ನು ಡಿಜಿಟಲ್ ತಂತ್ರಜ್ಞಾನಕ್ಕೆ ತೀವ್ರವಾಗಿ ವ್ಯಸನಿಯಾಗಿರುವವರ ಸಂಖ್ಯೆ ಶೇ. 80ಕ್ಕೆ ಏರಿದೆ.
ನಿದ್ರಾಹೀನತೆಯ ಸಮಸ್ಯೆ : ಡಿಜಿಟಲ್ ವ್ಯಸನ ಹೊಂದಿರುವ ಜನರು ನಿದ್ರಾಹೀನತೆಯ ಸಮಸ್ಯೆಗಳನ್ನು ಹೊಂದಿರುವ ಸಾಧ್ಯತೆ ಹೆಚ್ಚು ಎಂದು ಹಿಂದಿನ ಸಂಶೋಧನೆಗಳು ತೋರಿಸಿವೆ. ಡಿಜಿಟಲ್ ತಂತ್ರಜ್ಞಾನಕ್ಕೆ ವ್ಯಸನಿಯಾಗದ ಸುಮಾರು ಶೇಕಡಾ 5 ರಷ್ಟು ಯುವಕರು ತಾವು ಅಪರೂಪಕ್ಕೆ ನಿದ್ರಿಸುತ್ತೇವೆ ಎಂದು ವರದಿ ಮಾಡಿದ್ದಾರೆ. ಆದಾಗ್ಯೂ, ತಂತ್ರಜ್ಞಾನಕ್ಕೆ ಹೆಚ್ಚು ವ್ಯಸನಿಯಾಗಿರುವವರಲ್ಲಿ ಶೇಕಡಾ 14 ರಷ್ಟು ಜನರು ತಾವು ವಿರಳವಾಗಿ ನಿದ್ರಿಸುತ್ತೇವೆ ಎಂದು ಹೇಳುತ್ತಾರೆ. ಇದರರ್ಥ ಡಿಜಿಟಲ್ ಸ್ಕ್ರೀನ್ಗಳಿಗೆ ವ್ಯಸನಿಯಾಗಿರುವವರು ನಿದ್ರಾಹೀನತೆಯನ್ನು ಅನುಭವಿಸುವ ಸಾಧ್ಯತೆ ಸುಮಾರು ಮೂರು ಪಟ್ಟು ಹೆಚ್ಚು. ಇದಲ್ಲದೆ ಈ ಚಟವು ಇತರ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆಯಿದೆ. ಏಕೆಂದರೆ ಒಳ್ಳೆಯ ನಿದ್ರೆ ಮೆದುಳಿನ ಆರೋಗ್ಯಕರ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ.
ಇದನ್ನು ತಡೆಯುವುದು ಹೇಗೆ? ಈ ಒಂದು ಬೆಳವಣಿಗೆಯನ್ನು ನಾವು ತಡೆಯಬಹುದು ಎಂಬುದರ ಕುರಿತು ಕೆಲವು ಒಳನೋಟಗಳನ್ನು ಅರಿತುಕೊಳ್ಳೋಣ..
ನೀವು ಚಿಕ್ಕ ವಯಸ್ಸಿನಲ್ಲಿ ಸ್ಮಾರ್ಟ್‌ಫೋನ್ ಬಳಸಲು ಪ್ರಾರಂಭಿಸಿದರೆ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಸಾಧ್ಯವಾದಷ್ಟು ಸ್ಮಾರ್ಟ್‌ಫೋನ್‌ಗಳನ್ನು ನೀಡದಿರುವುದು ಅಥವಾ ಒಂದು ನಿರ್ದಿಷ್ಟ ವಯಸ್ಸಿಗೆ ಬಂದಾಗ ನೀಡುವುದು ಉತ್ತಮ.
ಮಕ್ಕಳು ತಮ್ಮ ಗೆಳೆಯರ ಬಳಿ ಸ್ಮಾರ್ಟ್‌ಫೋನ್ ನೋಡಿದಾಗ ತಮಗೂ ಫೋನ್ ಬೇಕೆಂಬ ಆಲೋಚನೆ ಉದ್ಭವಿಸುತ್ತದೆ. ಈ ಹಿನ್ನೆಲೆ ಶಾಲೆಗಳಲ್ಲಿ ಚಿಕ್ಕ ಮಕ್ಕಳಿಗೆ ಸ್ಮಾರ್ಟ್‌ಫೋನ್‌ಗಳ ಬಳಕೆ ಮತ್ತು ಅನುಮತಿಯನ್ನು ನಿಷೇಧಿಸಲು ಸುಧಾರಣೆಗಳನ್ನು ತರುವುದು ಒಳ್ಳೆಯದು. ಅನೇಕ ದೇಶಗಳು ಈಗಾಗಲೇ ಶಾಲೆಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ನಿಷೇಧಿಸುವ ಬಗ್ಗೆ ಯೋಚಿಸುತ್ತಿವೆ. ಈ ಹಿನ್ನೆಲೆ ಕೆಲವು ಶಾಲೆಗಳು ಸ್ವಯಂಪ್ರೇರಿತವಾಗಿ ಶಾಲಾ ಆವರಣದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ನಿಷೇಧಿಸಲು ಪ್ರಾರಂಭಿಸಿರುವುದು ಗಮನಾರ್ಹ.
ಡಿಜಿಟಲ್ ತಂತ್ರಜ್ಞಾನದ ಅತಿಯಾದ ಬಳಕೆಯ ಹಾನಿಕಾರಕ ಪರಿಣಾಮಗಳ ಕುರಿತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕ. ಉದಾಹರಣೆಗೆ, ಧೂಮಪಾನ ನೀತಿಯನ್ನು ತೆಗೆದುಕೊಂಡರೆ, ನಮ್ಮ ದೇಶದ ಶಾಲೆಗಳಲ್ಲಿ ತಂಬಾಕು ವಿರೋಧಿ ಅಭಿಯಾನಗಳನ್ನು ಬೃಹತ್ ಪ್ರಮಾಣದಲ್ಲಿ ಪ್ರಾರಂಭಿಸಲಾಗಿದೆ. ಬೇಡಿಕೆಯನ್ನು ಕಡಿಮೆ ಮಾಡಲು ಸಿಗರೇಟ್ ತೆರಿಗೆಗಳನ್ನು ಬಳಸಲಾಗುತ್ತಿದೆ. ಈ ಪ್ರಯತ್ನಗಳು ಸಿಗರೇಟ್ ಸೇವನೆಯನ್ನು ಕಡಿಮೆ ಮಾಡಿವೆ.
ಅದೇ ರೀತಿ ಸೆಂಟ್ರಲ್ ಅಂಡ್ ಅಟಾನಮಸ್ ನರ್ವಸ್ ಸಿಸ್ಟಮ್ ನ್ಯೂರೋಬಯಾಲಾಜಿ ಅನ್ನು ನಿಯಂತ್ರಿಸುವ ಮೂಲಕ ಡಿಜಿಟಲ್ ವ್ಯಸನವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.
18 ವರ್ಷ ವಯಸ್ಸಿನವರೆಗಿನ ವಿಡಿಯೋ ಗೇಮ್‌ಗಳ ಮೇಲೆ ಚೀನಾ ವಿಧಿಸಿರುವ ನಿರ್ಬಂಧಗಳಂತೆಯೇ ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಯಂತ್ರಿಸುವುದು ಪ್ರಯೋಜನಕಾರಿಯಾಗಿದೆ. ಇತ್ತೀಚೆಗೆ ಅಮೆರಿಕ ಸರ್ಜನ್ ಜನರಲ್ ವಿವೇಕ್ ಮೂರ್ತಿ ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತಂಬಾಕು ಮತ್ತು ಆಲ್ಕೋಹಾಲ್ ಉತ್ಪನ್ನಗಳ ಮೇಲಿನ ಎಚ್ಚರಿಕೆ ಕುರಿತು ಮಾತನಾಡಿದರು.
ಭಾರತದಲ್ಲಿ 18-24 ವರ್ಷ ವಯಸ್ಸಿನವರಲ್ಲಿ ಡಿಜಿಟಲ್ ವ್ಯಸನವು ಮಾನಸಿಕ ಖಿನ್ನತೆ, ಆತ್ಮಹತ್ಯಾ ಪ್ರವೃತ್ತಿಗಳು ಮತ್ತು ನಿದ್ರಾಹಿನತೆ ಕುರಿತ ಸಂಬಂಧ ಹೊಂದಿದೆ. ಇದು ಆತಂಕದ ಸಂಗತಿ. ಏಕೆಂದರೆ ನಮ್ಮ ದೇಶದಲ್ಲಿ ನಿರೀಕ್ಷಿತ ಆರ್ಥಿಕ ಬೆಳವಣಿಗೆಯ ಬಹುಪಾಲು ಯುವ ಪೀಳಿಗೆಯ ಉತ್ಪಾದಕತೆಯನ್ನು ಅವಲಂಬಿಸಿದೆ.
2024 ರಲ್ಲಿ ಡಿಜಿಟಲ್ ವ್ಯಸನವು ಶೇಕಡಾ 12.5 ರಷ್ಟು ಆಗುವ ನಿರೀಕ್ಷೆಯಿದ್ದರೂ, ಅದು ಬೆಳೆಯುತ್ತಿದೆ. ಸ್ಮಾರ್ಟ್‌ಫೋನ್‌ಗಳ ವಯಸ್ಸನ್ನು ವಿಳಂಬಗೊಳಿಸುವುದರಿಂದ ಆತ್ಮಹತ್ಯಾ ಆಲೋಚನೆಗಳು ಮತ್ತು ಇನ್ಟೆನ್ಶನ್ ಕಡಿಮೆ ಮಾಡಬಹುದು. ಅಷ್ಟೇ ಅಲ್ಲ, ಮಾನಸಿಕ ಯೋಗಕ್ಷೇಮವನ್ನು ಸುಧಾರಿಸಬಹುದು ಎಂದು ಸಂಶೋಧನೆ ತೋರಿಸುತ್ತದೆ.
ಒಟ್ಟಾರೆಯಾಗಿ, ಶಾಲಾ ನೀತಿಗಳು, ಪೋಷಕರ ನಿಯಂತ್ರಣ, ಸಾರ್ವಜನಿಕ ಆರೋಗ್ಯ ಸಂದೇಶಗಳು ಮತ್ತು ನಿಯಂತ್ರಣ ಕಾರ್ಯಕ್ರಮಗಳ ಮೂಲಕ ನಾವು ಡಿಜಿಟಲ್ ತಂತ್ರಜ್ಞಾನದ ವ್ಯಸನದಿಂದ ದೂರ ಉಳಿಯಬಹುದಾಗಿದೆ.