ಬೆಂಗಳೂರು: ಪರೀಕ್ಷಾ ಅಕ್ರಮಗಳನ್ನು ತಡೆಯುವುದು ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಣೆ ಮಾಡುವ ಸಂಬಂಧ ಹೊಸ ಮಾರ್ಗಸೂಚಿಗಳನ್ನು ರಚಿಸುವಂತೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ (ಕೆಎಸ್‌ಎಲ್‌ಯು) ಹೈಕೋರ್ಟ್ ನಿರ್ದೇಶನ ನೀಡಿದೆ.
ಆನೇಕಲ್ ಮೂಲಕದ ಕಾನೂನು ವಿದ್ಯಾರ್ಥಿ ರಾಹುಲ್ ಹೆಚ್.ಎಂ. ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ.
ಹೊಸ ಮಾರ್ಗ ಸೂಚಿಯಲ್ಲಿ ಪರೀಕ್ಷಾ ಮೇಲ್ವಿಚಾರಕರು ಬಾಡಿ ವೋರ್ನ್ ಕ್ಯಾಮರಾ ಧರಿಸಬೇಕು. ಪಾರದರ್ಶಕ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಲು ಗರಿಷ್ಠ ಪ್ರಮಾಣದಲ್ಲಿ ತಂತ್ರಜ್ಞಾನ ಬಳಸಿಕೊಳ್ಳಬೇಕು ಮತ್ತು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಗುಣಮಟ್ಟದ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಅಂಶಗಳಿರಬೇಕು ಎಂದು ಪೀಠ ಸೂಚಿಸಿದೆ.
ಅಲ್ಲದೆ, ಪರೀಕ್ಷಾ ಪಾವಿತ್ರ್ಯತೆಯನ್ನು ಎತ್ತಿಹಿಡಿಯಬೇಕು, ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಅಕ್ರಮ ತಡೆಯಲು ಅಗತ್ಯ ನಿಯಮಗಳನ್ನು ರೂಪಿಸಬೇಕು. ಆ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ವೇದಿಕೆ ಕಲ್ಪಿಸಿಕೊಡಬೇಕು. ಹೊಸ ಮಾರ್ಗಸೂಚಿಗಳನ್ನು ವಿಶ್ವವಿದ್ಯಾಲಯದ ಜೊತೆ ಸಂಯೋಜನೆ ಹೊಂದಿರುವ ಎಲ್ಲಾ ಕಾನೂನು ಕಾಲೇಜುಗಳಲ್ಲಿ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.
ಜೊತೆಗೆ, ಪರೀಕ್ಷೆಗಳಲ್ಲಿಅಕ್ರಮ ನಡೆಯುವುದು ಅತ್ಯಂತ ಗಂಭೀರ ವಿಷಯವಾಗಿದೆ. ಕೆಲ ವಿದ್ಯಾರ್ಥಿಗಳು ಅಕ್ರಮಗಳನ್ನು ಎಸಗಿ ಲಾಭ ಮಾಡಿಕೊಳ್ಳಲು ಯತ್ನಿಸುತ್ತಾರೆ. ಇದರಿಂದ ಇತರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ. ಪರೀಕ್ಷೆಗಳಲ್ಲಿ ಅಕ್ರಮ ಎಸಗಲು ಯಾವುದೇ ವಿದ್ಯಾರ್ಥಿಗಳಿಗೆ ಅವಕಾಶ ಕೊಡಬಾರದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ನಡುವೆ ಭಾರಿ ಸ್ಪರ್ಧೆ ಇರುತ್ತದೆ. ಹಾಗಾಗಿ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ನ್ಯಾಯಪೀಠದ ನಿರ್ದೇಶನಗಳು:
- ಪರೀಕ್ಷೆಗಳನ್ನು ಪಾರದರ್ಶಕ ರೀತಿಯಲ್ಲಿ ನಡೆಸಲು ವಿಶ್ವವಿದ್ಯಾಲಯ ಲಭ್ಯವಿರುವ ಎಲ್ಲಾ ತಂತ್ರಜ್ಞಾನಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಬೇಕು.
- ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಬೇಕು. ಇಡೀ ಪರೀಕ್ಷಾ ಪ್ರಕ್ರಿಯೆ ರೆಕಾರ್ಡ್ ಮಾಡಬೇಕು. ಯಾವುದೇ ವಿದ್ಯಾರ್ಥಿ ಅಕ್ರಮ ಎಸಗಲು ಆಸ್ಪದ ನೀಡದಂತೆ ನೋಡಿಕೊಳ್ಳಬೇಕು.
- ವಿದ್ಯಾರ್ಥಿಗಳು ಅಕ್ರಮ ಎಸಗಿದರೆ ಅಂತಹ ಸಂದರ್ಭದಲ್ಲಿ ಸಿಸಿಟಿವಿ ಕ್ಯಾಮರಾ ದೃಶ್ಯ ಬಳಸಿಕೊಂಡು, ತಪ್ಪೆಸಗಿರುವುದನ್ನು ದೃಢಪಡಿಸಿಕೊಂಡು ಶಿಸ್ತು ಕ್ರಮ ಜರುಗಿಸಬೇಕು.
- ಪರೀಕ್ಷಾ ಮೇಲ್ವಿಚಾರಕರು ಪರೀಕ್ಷಾ ಕೊಠಡಿಗಳಲ್ಲಿ ಬಾಡಿ ವೋರ್ನ್ ಕ್ಯಾಮರಾಗಳನ್ನು ಧರಿಸಬೇಕು ಮತ್ತು ಅವುಗಳ ದೃಶ್ಯಾವಳಿಯನ್ನು ರಿಯಲ್ ಟೈಮ್ ಆಧಾರದಲ್ಲಿ ರೆಕಾರ್ಡ್ ಮಾಡಿ ಸರ್ವರ್ನಲ್ಲಿಅಪ್ಲೋಡ್ ಮಾಡಿ ಆರೋಪಗಳು ಬಂದಾಗ ಪರಿಶೀಲನೆ ನಡೆಸಬೇಕು.
- ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್‌ಗಳನ್ನು ಅಳವಡಿಸಬೇಕು ಮತ್ತು ವಿದ್ಯಾರ್ಥಿಗಳು ಮೊಬೈಲ್ ಫೋನ್ ಅಥವಾ ಇನ್ನಿತರೆ ಮಾಧ್ಯಮಗಳನ್ನು ಬಳಕೆ ಮಾಡದಂತೆ ಜಾಮರ್ ಅಳವಡಿಸಿ ಎಲ್ಲಾ ರೀತಿಯ ಜಾಗರೂಕತೆ ವಹಿಸಬೇಕು.
- ಫೈಯಿಂಗ್ ಸ್ಕ್ಯಾಡ್‌ಗಳ ಅಧಿಕಾರಿಗಳು ಪರೀಕ್ಷೆಗಳ ಪ್ರಗತಿಯ ಮೇಲ್ವಿಚಾರಣೆ ನಡೆಸುವಾಗ ಅವರಿಗೂ ಬಾಡಿ ಕ್ಯಾಮರಾಗಳನ್ನು ಒದಗಿಸಬೇಕು ಮತ್ತು ಆ ದತ್ತಾಂಶವನ್ನು ಸಂಗ್ರಹಿಸಿಡಬೇಕು.
- ಅಕ್ರಮ ಎಸಗುವ ಅಧಿಕಾರಿಗಳ ಹೇಳಿಕೆಯನ್ನು ಪರೀಕ್ಷಾ ಕೇಂದ್ರದಲ್ಲಿಯೇ ವಿಡಿಯೋ ರೂಪದಲ್ಲಿ ದಾಖಲಿಸಿಕೊಳ್ಳಬೇಕು. ಅದನ್ನು ನ್ಯಾಯಾಲಯಕ್ಕೆ ಸಾಕ್ಷಿಯನ್ನಾಗಿ ಒದಗಿಸಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ: 384 ಕೆಎಎಸ್ ಹುದ್ದೆಗಳ ನೇಮಕ: ಫಲಿತಾಂಶ ಪ್ರಕಟಿಸಲು ಕೆಪಿಎಸ್ಸಿಗೆ ಕೆಎಟಿ ನಿರ್ದೇಶನ