ಕಪ್ಪು ಗಾಜಿನ ಕಾರೊಳಗೆ ಯುವತಿ ಮೇಲೆ ಗ್ಯಾಂಗ್‌ರೇಪ್; ಮಹಿಳಾ ಡಿಎಸ್ಪಿ ಕೈಗೆ ಸಿಕ್ಕಿಬಿದ್ದ ವಿದ್ಯಾವಂತರು! - ರಾಂಚಿಯಲ್ಲಿ ಯುವತಿಯನ್ನು ಅಪಹರಿಸಿ ಸಾಮೂಹಿ ಅತ್ಯಾಚಾರ
ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿದೆ. ಐವರು ಆರೋಪಿಗಳು ಪೊಲೀಸ್ ಅಧಿಕಾರಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ರಾಂಚಿ(ಜಾರ್ಖಂಡ್): ರಾಜಧಾನಿಯಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ರಾಂಚಿಯ ರಾತು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಐವರು ದುಷ್ಕರ್ಮಿಗಳು ಯುವತಿಯೊಬ್ಬಳನ್ನು ಅಪಹರಿಸಿ ದುಷ್ಕೃತ್ಯ ಎಸಗಿದ್ದಾರೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದು, ಐವರನ್ನು ಬಂಧಿಸಿದ್ದಾರೆ.
ಪ್ರಕರಣದ ವಿವರ: ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಹೇಳುವ ಪ್ರಕಾರ, ಗುರುವಾರ ರಾತ್ರಿ ಮನೆಗೆ ಮರಳುತ್ತಿದ್ದೆ. ಈ ವೇಳೆ ಕಾರಿನಲ್ಲಿ ಬಂದ ಕೆಲವರು ನನ್ನನ್ನು ಬಲವಂತವಾಗಿ ಎಳೆದೊಯ್ದರು. ಬಳಿಕ ರೆಸ್ಟೋರೆಂಟ್‌ವೊಂದರ ಹೊರಗೆ ಕಾರು ನಿಲ್ಲಿಸಿ ಅತ್ಯಾಚಾರ ಎಸಗಿದರು ಎಂದು ತಿಳಿಸಿದ್ದಾರೆ.
ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?: ರಾತ್ರಿ ಗಸ್ತಿನಲ್ಲಿದ್ದ ಡಿಎಸ್‌ಪಿ ಅಂಕಿತಾ ಅವರು ರೆಸ್ಟೋರೆಂಟ್‌ನ ಹೊರಗೆ ಕಾರೊಂದು ನಿಂತಿರುವುದನ್ನು ಗಮನಿಸಿದ್ದು, ಅನುಮಾನ ಮೂಡಿದೆ. ಕಾರು ಪರಿಶೀಲಿಸಿದಾಗ ಒಳಗೆ ಐವರು ಯುವಕರ ಮಧ್ಯೆ ಕುಳಿತಿದ್ದ ಯುವತಿ ರೋದಿಸುತ್ತಿದ್ದಳು. ವಿಷಯ ಅರ್ಥೈಸಿಕೊಂಡ ಡಿಎಸ್ಪಿ, ಸಮೀಪದ ಧುರ್ವಾ ಠಾಣೆಯ ಪ್ರಭಾರಿ ಪ್ರವೀಣ್ ಜಾ ಅವರನ್ನು ಸ್ಥಳಕ್ಕೆ ಬರುವಂತೆ ಹೇಳಿ ತಕ್ಷಣವೇ ಪೊಲೀಸ್ ಪಡೆಯನ್ನೂ ಕಳುಹಿಸುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ದಲಿತ ವಿವಾಹಿತೆಯ ಬೆತ್ತಲೆಗೊಳಿಸಿ ಸಾಮೂಹಿಕ ಅತ್ಯಾಚಾರ ಯತ್ನ!
ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಎಲ್ಲಾ ಆರೋಪಿಗಳನ್ನು ಬಂಧಿಸಿ ರಾತು ಪೊಲೀಸ್ ಠಾಣೆಗೆ ಕರೆದೊಯ್ದರು. ಡಿಎಸ್ಪಿ ಹೇಳುವ ಪ್ರಕಾರ, ಘಟನಾ ಸ್ಥಳವು ಧುರ್ವಾ ಪೊಲೀಸ್ ಠಾಣೆಗೆ ಸಮೀಪದಲ್ಲಿದೆ. ಆದ್ದರಿಂದ ಧುರ್ವಾ ಪೊಲೀಸ್ ಠಾಣೆಯಿಂದ ಪಡೆಯನ್ನು ಕರೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ಕಪ್ಪು ಗಾಜಿನ ಕಾರಿನೊಳಗೆ ಅತ್ಯಾಚಾರ: ಪೊಲೀಸ್ ವಿಚಾರಣೆಯಲ್ಲಿ ಬಂಧಿತ ಎಲ್ಲಾ ಆರೋಪಿಗಳು ಕೃತ್ಯ ಒಪ್ಪಿಕೊಂಡಿದ್ದಾರೆ. ಬಂಧಿತರಲ್ಲಿ ಹೆಚ್ಚಿನವರು ಹೊರ ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೆಲವರು ಎರಡು ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಯುವತಿ ರಸ್ತೆಯಲ್ಲಿ ಒಬ್ಬಳೇ ಹೋಗುತ್ತಿದ್ದಳು. ಆಕೆಗೆ ದಾರಿ ಕೇಳುವ ನೆಪದಲ್ಲಿ ಆರೋಪಿಗಳು ಕಾರಿನೊಳಗೆ ಎಳೆದೊಯ್ದಿದ್ದಾರೆ. ಬಳಿಕ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.