ಮೈಸೂರು: ಜೆಡಿಎಸ್ನಿಂದ ನನ್ನನ್ನು ಉಚ್ಚಾಟನೆ ಮಾಡುವ ಧಮ್ ಇಲ್ಲ ಎಂಬ ಶಾಸಕ ಜಿ.ಟಿ.ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, "ಶಾಸಕ ಜಿ.ಟಿ.ದೇವೇಗೌಡರು ದೊಡ್ಡವರು. ಅವರ ಹೇಳಿಕೆಯ ಬಗ್ಗೆ ಪಾರ್ಟಿಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ಆ ನಂತರ ನಮ್ಮ ಶಕ್ತಿ ತೋರಿಸುತ್ತೇವೆ" ಎಂದು ಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಜನರು ಕುರ್ಚಿ ಕೊಟ್ಟಿದ್ದಾರೆ, ಜನರಿಗೆ ಏನು ಮಾಡುತ್ತಿದ್ದೀರಾ?: "ಯಾರಿಗೋಸ್ಕರ ಒಂದಾಗಿದ್ದಾರೆ. ಅಧಿಕಾರಕ್ಕೆ ಮತ್ತು ಕುರ್ಚಿಗಾಗಿ ಮಾತ್ರ ಒಂದಾಗುತ್ತಿದ್ದಾರೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದೆ. ಜನರು ಹಳ್ಳಿ ಬಿಟ್ಟು ಹೋಗುತ್ತಿದ್ದಾರೆ. ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿಲ್ಲ. ಜನರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ. ಕೇವಲ ಕುರ್ಚಿಗಾಗಿ ಚರ್ಚೆ ಆಗುತ್ತಿದೆ. ಎಷ್ಟು ದಿನ ಇರ್ತೀರಾ ಅನ್ನುವುದು ಮುಖ್ಯವಲ್ಲ. ದೇವರಾಜ ಅರಸು ಅವರಿಗೆ ಸರಿ ಸಮನಾಗಿ ಅಂಥ ಸಿದ್ದರಾಮಯ್ಯ ಹೇಳ್ತಾರೆ. ಇನ್ನೂ ಐದು ವರ್ಷ ನೀವೇ ಅಧಿಕಾರದಲ್ಲಿರಿ. ಮುಂದೆಯೂ ನೀವೆ ಇರಿ. ಜನರಿಗೆ ಕೊಡುತ್ತಿರುವ ಸಾಲದ ಹೊರೆಯನ್ನು ಕಡಿಮೆ ಮಾಡಿ. 2 ಸಾವಿರದಿಂದ ಬಡವರನ್ನು ಆರ್ಥಿಕವಾಗಿ ಬೆಳೆಸುತ್ತೇವೆ ಅಂತಿರುವುದು ಇದೇನಾ? ಮೈಕ್ರೋ ಫೈನಾನ್ಸ್ ಯಾವುದೇ ಅನುಮತಿ ಪಡೆಯದೇ ಅಣಬೆ ರೀತಿ ಹುಟ್ಟಿವೆ. ಯಾವ ರೀತಿ ಅವರ ಮೇಲೆ ಕಡಿವಾಣ ಹಾಕಿದ್ದೀರಿ?" ಎಂದು ಪ್ರಶ್ನಿಸಿದರು.
"ಎಲ್ಲರೂ ರಾಜ್ಯದ ಪ್ರಮುಖರು ದಾವೋಸ್ಗೆ ಹೋಗಿ ಬಂಡವಾಳ ತರುತ್ತಿದ್ದಾರೆ. ನೀವು ಏನ್ ಮಾಡುತ್ತಿದ್ದೀರಾ?" ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 2018ರಲ್ಲಿ ಖುಣಮುಕ್ತ ಕಾಯ್ದೆ ಜಾರಿಗೆ ತಂದಿದ್ದೇನೆ. ಆದರೆ ಬಿಲ್ ಏನಾಯ್ತು? ವಿಧಾನಸಭೆಯಲ್ಲಿ ಬಿಲ್ ಸಹ ಪಾಸ್ ಆಗಿದೆ. ರಾಷ್ಟ್ರಪತಿಗಳ ಬಳಿಗೆ ನಾನೇ ಹೋಗಿ ಅಂಕಿತ ತೆಗೆದುಕೊಂಡು ಬಂದೆ. ಬಂಡೆಪ್ಪ ಕಾಂಶಪೂರ ಅವರನ್ನು ಕೇರಳಕ್ಕೆ ಕಳುಹಿಸಿ ಈ ಬಗ್ಗೆ ಸಾಕಷ್ಟು ಮಾಹಿತಿ ಕೆಲ ಹಾಕಿದೆ." ಎಂದು ತಿಳಿಸಿದರು.
ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ: "ಶ್ರೀರಾಮಲು ಮತ್ತು ಜನಾರ್ದನ ರೆಡ್ಡಿ ಕಲಹ ಬಿಜೆಪಿಯ ಆಂತರಿಕ ಕಲಹ. ಮಾಜಿ ಸಚಿವ ಬಿ. ಶ್ರೀರಾಮಲು ಬಿಜೆಪಿ ಬಿಟ್ಟು ಕಾಂಗ್ರೆಸ್ಗೆ ಹೋಗುವುದಿಲ್ಲ. ಇಬ್ಬರ ಜಗಳವನ್ನು ಬಿಜೆಪಿಯ ನಾಯಕರೇ ಕುಳಿತು ಪರಿಹರಿಸಬೇಕು. ಇಬ್ಬರು ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರು. ಅಣ್ಣತಮ್ಮಂದಿರಕ್ಕಿಂತ ಚೆನ್ನಾಗಿದ್ದವರು. ಶ್ರೀರಾಮುಲು ನನ್ನ ಅಭಿಪ್ರಾಯದಲ್ಲಿ ಕಾಂಗ್ರೆಸ್ಗೆ ಹೋಗುವುದಿಲ್ಲ. ಈ ಬಗ್ಗೆ ನಾನು ಬಿಜೆಪಿ ನಾಯಕರಿಗೆ ಮನವಿ ಮಾಡುತ್ತೇನೆ" ಎಂದು ಹೇಳಿದರು.
ಇದನ್ನೂ ಓದಿ: ನಾಳಿನ ಜೆಡಿಎಸ್ ಸಭೆಯಲ್ಲಿ ಭಾಗವಹಿಸುವುದಿಲ್ಲ : ಶಾಸಕ ಜಿ. ಟಿ. ದೇವೇಗೌಡ