'ಕೆಜಿಎಫ್' ಫ್ರ್ಯಾಂಚೈಸಿ ಮೂಲಕ ಗ್ಲೋಬಲ್ ಸ್ಟಾರ್ ಆಗಿ ಬೆಳೆದಿರುವ ಯಶ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್' ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪುವ ಗುರಿಯನ್ನು ಹೊಂದಿರುವಂತೆ ತೋರುತ್ತಿದೆ. ಅಷ್ಟರ ಮಟ್ಟಿಗೆ ನಿರ್ಮಾಣಗೊಳ್ಳುತ್ತಿದೆ ಈ ಸಿನಿಮಾ. ಬಿಗ್ ಬಜೆಟ್ ಪ್ರಾಜೆಕ್ಟ್ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಏಕಕಾಲದಲ್ಲಿ ಚಿತ್ರೀಕರಣಗೊಳ್ಳುತ್ತಿದ್ದು, ದೀರ್ಘಾವಧಿಯ ಶೂಟಿಂಗ್ ವೇಳಾಪಟ್ಟಿಯನ್ನು ಹೊಂದಿದೆ ಎಂದು ತಿಳಿದುಬಂದಿದೆ.
ಮನರಂಜನಾ ಮಾಧ್ಯಮವೊಂದು ಈ ವಿಷಯವನ್ನು ಖಚಿತಪಡಿಸಿದೆ. ಹೌದು, ಭಾರತೀಯ ಹಾಗೂ ಗ್ಲೋಬಲ್ ಆಡಿಯನ್ಸ್ಗೆ ಕನೆಕ್ಟ್ ಆಗುವ ರೀತಿ ಚಿತ್ರದ ನಿರೂಪಣೆಯನ್ನು ರಚಿಸಲಾಗಿದೆ ಎಂದು ಟಾಕ್ಸಿಕ್ಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಗೀತು ಮೋಹನ್ ದಾಸ್ ತಿಳಿಸಿದ್ದಾರೆ. ಕೆಜಿಎಫ್ ಮೂಲಕ ವಿಶ್ವದಾದ್ಯಂತ ಸಖತ್ ಸದ್ದು ಮಾಡಿ ಜಾಗತಿಕ ಮಟ್ಟದಲ್ಲೂ ಅಭಿಮಾನಿಗಳನ್ನು ಸಂಪಾದಿಸಿರುವ ಯಶ್ ಅವರ ಯಶಸ್ಸನ್ನು ದ್ವಿಗುಣಗೊಳಿಸುವ ಗುರಿ ಹೊಂದಿರುವ ಸಿನಿಮಾ ಇದಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪೋದು ಚಿತ್ರತಂಡದ ಪ್ರಮುಖ ಧ್ಯೇಯವಾಗಿದೆ. ಮನರಂಜನೆ ಒದಗಿಸುವುದು ಮಾತ್ರವಲ್ಲದೇ ಪ್ರಪಂಚದಾದ್ಯಂತ ಪ್ರೇಕ್ಷಕರ ಹೃದಯದೊಂದಿಗೆ ಸಂಪರ್ಕ ಸಾಧಿಸುವ ಕಥೆಯನ್ನು ರಚಿಸುತ್ತಿದ್ದೇವೆ ಎಂದು ಸಹ ನಿರ್ದೇಶಕರು ತಿಳಿಸಿದ್ದಾರೆ.
ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿ ರಾಕಿಂಗ್ ಸ್ಟಾರ್ ಹಾಗೂ ವೆಂಕಟ್ ಕೆ ನಾರಾಯಣ್ ಅವರ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿರುವ ಈ ಚಿತ್ರ ಕನ್ನಡ, ಇಂಗ್ಲಿಷ್‌ನಲ್ಲಿ ಚಿತ್ರೀಕರಣಗೊಳ್ಳುತ್ತಿದ್ದು, ಹಿಂದಿ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಿದೆ ಚಿತ್ರತಂಡ. ಚಿತ್ರ ಬಿಗ್ ಬಜೆಟ್ನಲ್ಲಿ ನಿರ್ಮಾಣಗೊಳ್ಳುತ್ತಿದೆ ಎಂದು ವರದಿಯಾಗಿದೆ.
ಭಾರತದ ಖ್ಯಾತ ಸಿನಿಮಾ ವಿಮರ್ಷಕ ತರಣ್ ಆದರ್ಶ್ ಪೋಸ್ಟ್ ಶೇರ್ ಮಾಡಿ, "ಇದು ಅಧಿಕೃತ. ಯಶ್ ಅವರ ಮುಂದಿನ ಚಿತ್ರ 'ಟಾಕ್ಸಿಕ್' ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಯಶ್ ಮುಖ್ಯಭೂಮಿಕೆಯ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಏಕಕಾಲದಲ್ಲಿ ಪರಿಕಲ್ಪನೆ, ಬರವಣಿಗೆ ಮತ್ತು ಚಿತ್ರೀಕರಣಗೊಂಡ ಮೊದಲ ಭಾರತೀಯ ಚಲನಚಿತ್ರವಾಗಿದ್ದು, ಜಾಗತಿಕ ಮಟ್ಟದಲ್ಲಿ ಒಂದೊಳ್ಳೆ ಸಿನಿ ಅನುಭವಕ್ಕೆ ದಾರಿ ಮಾಡಿಕೊಡಲಿದೆ. ಈ ಚಿತ್ರವನ್ನು ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಭಾರತೀಯ ಮತ್ತು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಡಬ್ ಮಾಡಲಾಗುವುದು. ಗೀತು ಮೋಹನ್ ದಾಸ್ ನಿರ್ದೇಶನದ ಸಿನಿಮಾವನ್ನು ವೆಂಕಟ್ ಕೆ ನಾರಾಯಣ್ ಮತ್ತು ಯಶ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ.
IT'S OFFICIAL... YASH'S NEXT FILM 'TOXIC' BEING SHOT IN KANNADA & ENGLISH… #Toxic: A Fairy Tale For Grown Ups - starring #Yash - is the first big-scale #Indian movie to be conceptualized, written and filmed simultaneously in both #English and #Kannada, paving the way for a truly… pic.twitter.com/5sJLoOg58o
— taran adarsh (@taran_adarsh) February 24, 2025
ಇದನ್ನೂ ಓದಿ: Ind vs Pak: ಸ್ಟೇಡಿಯಂನಲ್ಲಿ ಊರ್ವಶಿ ರೌಟೇಲಾ ಬರ್ತ್ಡೇ ಸೆಲೆಬ್ರೇಷನ್; ನಟಿಯೊಂದಿಗೆ 'ಪುಷ್ಪ' ಡೈರೆಕ್ಟರ್
ಕಳೆದ ತಿಂಗಳು ರಾಕಿಂಗ್ ಸ್ಟಾರ್ನ 39ನೇ ಹುಟ್ಟುಹಬ್ಬದ ಸಂದರ್ಭ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್'ನ ನಿರ್ಮಾಪಕರು ಗ್ಲಿಂಪ್ಸ್ ಒಂದನ್ನು ಅನಾವರಣಗೊಳಿಸಿದ್ದರು. ಈ ವಿಡಿಯೋ ನಾಯಕ ನಟನ ಒಂದು ನೋಟವನ್ನು ಅಭಿಮಾನಿಗಳಿಗೆ ಒದಗಿಸಿತ್ತು. ಒಂದೇ ಒಂದು ಡೈಲಾಗ್ ಇರದ ಈ ವಿಡಿಯೋ ಅದ್ಭುತ ಹಿನ್ನೆಲೆ ಸಂಗೀತ ಹೊಂದಿದ್ದು, ಕೆಜಿಎಫ್ ಸ್ಟಾರ್ನ ಟಾಕ್ಸಿಕ್ ಅವತಾರ ಫ್ಯಾನ್ಸ್ ಅನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.
ಇದನ್ನೂ ಓದಿ: ಛಾವಾ: 10 ದಿನಗಳಲ್ಲಿ 326 ಕೋಟಿ ಕಲೆಕ್ಷನ್ ಮಾಡಿದ ಸಂಭಾಜಿ ಮಹಾರಾಜರ ಜೀವನಾಧಾರಿತ ಚಿತ್ರ
2025ರ ಬಹುನಿರೀಕ್ಷಿತ 'ಟಾಕ್ಸಿಕ್' ಚಂದನವನದ ಬಹುಬೇಡಿಕೆ ತಾರೆ ನಟಿಸುತ್ತಿರುವ 19ನೇ ಚಿತ್ರ. ಕೆಜಿಎಫ್ 2 ಎಂಬ ಬ್ಲಾಕ್ಬಸ್ಟರ್ ಚಿತ್ರ 2022ರಲ್ಲಿ ತೆರೆಕಂಡಿತ್ತು. ಬಹಳ ಗ್ಯಾಪ್ ತೆಗೆದುಕೊಂಡಿದ್ದಾರೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾದ್ರೂ ಯಶ್ ಸಿನಿಪ್ರಿಯರಿಗೆ ಭರ್ಜರಿ ಸಿನಿಮೀಯ ಅನುಭವ ಒದಗಿಸುವ ಪಣ ತೊಟ್ಟಿದ್ದಾರೆ. "ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್" ಏಪ್ರಿಲ್ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಈ ಹಿಂದೆ ತಿಳಿಸಿದರಾದರೂ ಬಿಡುಗಡೆಗೆ ಸಮಯ ಹಿಡಿಯಬಹುದು ಎಂದು ತೋರುತ್ತಿದೆ.