ಹಾವೇರಿ : ಕೆರೆಗೆ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಅತ್ತಿಗೇರಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಪ್ರಜ್ವಲ್ ದೇವರಮನಿ (15) ಮತ್ತು ಸನತ್ ಭೂಸರೆಡ್ಡಿ (14) ಎಂದು ಗುರುತಿಸಲಾಗಿದೆ.
ಸೈಕಲ್ ತೆಗೆದುಕೊಂಡು ಕೆರೆಗೆ ಈಜಲು ಹೋಗಿದ್ದ ಬಾಲಕರು ಈಜಲು ಬಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕೆರೆಯ ದಡದಲ್ಲಿ ಸೈಕಲ್ ಹಾಗೂ ಬಟ್ಟೆಗಳು ಇರುವುದನ್ನು ಗಮನಿಸಿದ ಸ್ಥಳೀಯರು ಕೆರೆಯಲ್ಲಿ ಬಾಲಕರು ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಬಾಲಕರ ಮೃತದೇಹಗಳನ್ನ ಕೆರೆಯಿಂದ ಹೊರತೆಗೆದಿದ್ದಾರೆ. ಸ್ಥಳಕ್ಕೆ ಶಿಗ್ಗಾಂವಿ ತಹಶೀಲ್ದಾರ್, ಹುಲಗೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಮೃತ ಬಾಲಕರ ಶವ ಸಿಗುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.
ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು : ಬಯಲು ಬಹಿರ್ದೆಸೆ ಮುಗಿಸಿ ಕೈಕಾಲು ತೊಳೆಯಲು ಕೆರೆಗೆ ಹೋಗಿದ್ದ ಇಬ್ಬರು ಬಾಲಕರು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ (ಫೆ- 23-2025) ನಡೆದಿತ್ತು. ಜಗದೀಶ್ ನಾಗೋಜಿ ಎಂಬವರ ಪುತ್ರ ನಿಖಿಲ್ ನಾಗೋಜಿ (11) ಮತ್ತು ಪ್ರಕಾಶ್ ಚೋಳಪ್ಪನವರ್ ಎಂಬವರ ಪುತ್ರ ಧನುಷ್ ಚೋಳಪ್ಪನವರ್ (13) ಮೃತ ಬಾಲಕರು.
ಬಾಲಕರು ಗ್ರಾಮದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಬಳಿಕ ಬಯಲು ಬಹಿರ್ದೆಸೆ ಮುಗಿಸಿ ಕೈಕಾಲು ತೊಳೆಯಲು ದೊಡ್ಡಕೆರೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಬಾಲಕರು ಕಾಲುಜಾರಿ ಕೆರೆಗೆ ಬಿದ್ದಿದ್ದು, ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬಾಲಕರು ಕೆರೆಯಲ್ಲಿ ಮುಳುಗಿರುವ ಬಗ್ಗೆ ವಿಷಯ ತಿಳಿದ ಸ್ಥಳೀಯರು ಅವರನ್ನು ಕೆರೆಯಿಂದ ಮೇಲೆತ್ತಿದ್ದಾರೆ. ಆನಂತರ ಬಾಲಕರನ್ನು ಹಾನಗಲ್ ತಾಲೂಕು ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದು, ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಘಟನೆ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ನಿಖಿಲ್ ತಂದೆ ಜಗದೀಶ್ ನಾಗೋಜಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ : ಹಾವೇರಿ: ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು - TWO BOYS DIED