ತಿರುನೆಲ್ವೇಲಿ (ತಮಿಳುನಾಡು) : ಮಂಗಳೂರು ಸಹಕಾರಿ ಬ್ಯಾಂಕ್ನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲ್ಲೈ ಮೂಲದ ಮೂವರನ್ನು ಬಂಧಿಸಲಾಗಿದ್ದು, ಅವರಿಂದ 15 ಕೆಜಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕೆ. ಸಿ ರೋಡ್ನಲ್ಲಿರುವ ಕೃಷಿ ಸಹಕಾರಿ ಬ್ಯಾಂಕ್ಗೆ ಇದೇ ತಿಂಗಳ 17ರಂದು ಬೆಳಗ್ಗೆ 11.30ರ ಸುಮಾರಿಗೆ ಮುಸುಕುಧಾರಿ ತಂಡವೊಂದು ಪಿಸ್ತೂಲ್ ಹಾಗೂ ಚಾಕುಗಳೊಂದಿಗೆ ನುಗ್ಗಿತ್ತು. ಅಲ್ಲಿದ್ದ ಬ್ಯಾಂಕ್ ನೌಕರರನ್ನು ಬೆದರಿಸಿ ಸುಮಾರು 4 ಕೋಟಿ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಆರೋಪಿಗಳ ಬಂಧನಕ್ಕೆ 6ಕ್ಕೂ ಹೆಚ್ಚು ವಿಶೇಷ ತಂಡಗಳನ್ನು ರಚಿಸಿ ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು.
ಮೂವರ ಬಂಧನ : ನೆಲ್ಲೈ ಜಿಲ್ಲೆಯ ಕಳಕ್ಕಾಡು ಸಮೀಪದ ಪದ್ಮನೇರಿ ಗ್ರಾಮದ ಮುರುಗಂಡಿ (36) ಮತ್ತು ಜೋಶುವಾ ಎಂಬಿಬ್ಬರನ್ನು ಈ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 2 ದಿನಗಳ ಹಿಂದೆ ಮಂಗಳೂರು ವಿಶೇಷ ಪೊಲೀಸರು ಬಂಧಿಸಿದ್ದರು.
ಅವರನ್ನು ಅಂಬಾಸಮುದ್ರಂ ಕ್ರಿಮಿನಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಅವರಿಂದ 2 ಕೆಜಿ ಚಿನ್ನ, 3 ಲಕ್ಷ ರೂ ನಗದು, ಮುಂಬೈ ನೋಂದಣಿ ಸಂಖ್ಯೆಯ ಕಾರು, ಎರಡು ದೇಶಿ ನಿರ್ಮಿತ ಬಂದೂಕುಗಳು ಮತ್ತು 3 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ನೆಲ್ಲೈ ಜಿಲ್ಲೆಯವರಾದ ಕಣ್ಣನ್ ಮಣಿ ಎಂಬುವವರನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಮೂವರು ಹೆಚ್ಚುವರಿ ಚಿನ್ನಾಭರಣಗಳನ್ನು ನೆಲ್ಲೈಯಲ್ಲಿ ಬಚ್ಚಿಟ್ಟಿರುವುದಾಗಿ ಕರ್ನಾಟಕ ವಿಶೇಷ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದರು.
15 ಕೆಜಿ ಚಿನ್ನಾಭರಣ ವಶ : ಹೀಗಾಗಿ ನಿನ್ನೆ ಇನ್ಸ್ ಪೆಕ್ಟರ್ ರಾಜೇಂದ್ರನ್ ನೇತೃತ್ವದ ಪೊಲೀಸರ ತಂಡ ನೆಲ್ಲೈಗೆ ಆಗಮಿಸಿದ್ದರು. ಮುರುಗಂಡಿ ಅವರ ಮನೆಯಲ್ಲಿ ಬಚ್ಚಿಟ್ಟಿದ್ದ ಸುಮಾರು 15 ಕೆಜಿ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮುರುಗಂಡಿ ಅವರ 65 ವರ್ಷದ ತಂದೆ ಷಣ್ಮುಗ ಸುಂದರಂ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರೂ ನೆಲ್ಲೈ ಜಿಲ್ಲೆಯವರಾಗಿದ್ದು, ಹಲವು ವರ್ಷಗಳಿಂದ ಅವರು ಮುಂಬೈನಲ್ಲಿ ನೆಲೆಸಿದ್ದರು. ವಿಶೇಷ ಪೊಲೀಸರು ಮೊದಲು ಮುಂಬೈನಲ್ಲಿ ಕಣ್ಣನ್ ಮಣಿಯನ್ನು ಬಂಧಿಸಿದರು. ಆತ ನೀಡಿದ ಮಾಹಿತಿ ಮೇರೆಗೆ ನೆಲ್ಲೈಯಲ್ಲಿ ತಲೆಮರೆಸಿಕೊಂಡಿದ್ದ ಮುರುಗಂಡಿ ಹಾಗೂ ಜೋಶುವಾ ಇಬ್ಬರನ್ನೂ ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ರಾಜಸ್ಥಾನ, ಉತ್ತರಪ್ರದೇಶದಂತಹ ಇತರ ರಾಜ್ಯಗಳ ಹಲವರು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ : ತಮಿಳುನಾಡಿನಲ್ಲಿ ಮೂವರು ಅರೆಸ್ಟ್ - KOTEKARU BANK ROBBERY CASE