ಚಾಮರಾಜನಗರ: ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ, ಬಳಿಕ ನಾಪತ್ತೆ ನಾಟಕವಾಡಿರುವ ಘಟನೆ ತಾಲೂಕಿನ ಜನ್ನೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಜನ್ನೂರು ಗ್ರಾಮದ ರಮೇಶ್(45) ಮೃತರು. ಇವರ ಪತ್ನಿ ಗೀತಾ(38) ಹಾಗೂ ಈಕೆಯ ಪ್ರಿಯಕರ ಗುರುಪಾದಸ್ವಾಮಿ(40) ಕೊಲೆ ಆರೋಪಿಗಳು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಮಚ್ಚಿನಿಂದ ಕೊಲೆ ಮಾಡಿ ಬೈಕ್ನಲ್ಲಿ ಶವ ಸಾಗಾಟ: ಮಚ್ಚಿನ ಹಿಂಭಾಗದಿಂದ ರಮೇಶ್‌ಗೆ ಬಲವಾಗಿ ತಲೆಗೆ ಹೊಡೆದು, ಬಳಿಕ ದಿಂಬಿನಲ್ಲಿ ಉಸಿರುಗಟ್ಟಿಸಿ ಸಾಯಿಸಿದ್ದಾರೆ. ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಬೈಕ್ನಲ್ಲಿ ಹೊತ್ತು ಕುಪ್ಪೇಗಾಲದ ಕಪಿಲಾ ನದಿಯಲ್ಲಿ ಬಿಸಾಡಿದ್ದಾರೆ.
ಜ.14ರಂದೇ ಆರೋಪಿಗಳಿಬ್ಬರು ಕೃತ್ಯ ಎಸಗಿದ್ದರು. ಜ.21ರಂದು ಆರೋಪಿ ಪತ್ನಿ ಕುದೇರು ಪೊಲೀಸ್ ಠಾಣೆಗೆ ಬಂದು, ಪತಿ ಮನೆಯಿಂದ ಹೊರಹೋದವರು ಕಾಣೆಯಾಗಿದ್ದಾರೆ ಎಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಗೀತಾ ಮಾತಿನ ಬಗ್ಗೆ ಅನುಮಾನಗೊಂಡ ಪೊಲೀಸರು ಭಾನುವಾರ ಹೆಚ್ಚಿನ ವಿಚಾರಣೆ ನಡೆಸಿದ ಬಳಿಕ ಕೊಲೆ ಪ್ರಕರಣ ಬೇಧಿಸಿದ್ದಾರೆ. ಸಂತೇಮರಹಳ್ಳಿ ವೃತ್ತ ನಿರೀಕ್ಷಕ ಬಸವರಾಜು ನೇತೃತ್ವದಲ್ಲಿ ಕುದೇರು ಠಾಣೆ ಪೊಲೀಸರು ನಾಪತ್ತೆ ನಾಟಕವಾಡಿದ್ದ ಪತ್ನಿ ಹಾಗೂ ಪ್ರಿಯಕರನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎಸ್ಪಿ ಹೇಳಿದ್ದೇನು?: ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ''ಜ.14ರಂದು ರಮೇಶ್ ಕುಡಿದು ಬಂದು ಗೀತಾ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಇದರಿಂದ ಭಯಗೊಂಡ ಗೀತಾ, ಮನೆಯ ಹೊರಗಡೆ ಮಲಗಿದ್ದಳು. ಇದಾದ ನಂತರ, ತಡರಾತ್ರಿ ಪ್ರಿಯಕರ ಗುರುಪಾದಸ್ವಾಮಿ ಜೊತೆ ಸೇರಿಕೊಂಡು ಮಚ್ಚಿನ ಹಿಂಭಾಗದಿಂದ ತಲೆಗೆ ಹೊಡೆದು ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದರು. 25 ಕಿ.ಮೀ ದೂರದ ಕುಪ್ಪೇಗಾಲ ನಾಲೆಗೆ ಶವ ಎಸೆದು ಜ.21 ರಂದು ಕುದೇರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರಿಂದ ಪೊಲೀಸರು ತನಿಖೆ ಕೈಗೊಂಡಿದ್ದರು. ಫೆ.2ರಂದು ರಮೇಶನ ಅಕ್ಕ ಸುವರ್ಣ ಠಾಣೆಗೆ ಬಂದು, ಅನೈತಿಕ ಸಂಬಂಧದ ಕಾರಣದಿಂದ ತಮ್ಮನನ್ನು ಪತ್ನಿಯೇ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ದೂರು ಕೊಟ್ಟಿದ್ದರು. ಹೀಗಾಗಿ, ಇಬ್ಬರನ್ನು ಕರೆತಂದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಶವವನ್ನು ಕಿರಗಸೂರು ಸಮೀಪ ಮೇಲಕ್ಕೆತ್ತಿ ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗಿದೆ'' ಎಂದು ಹೇಳಿದರು.
ಇದನ್ನೂ ಓದಿ: ಶಿವಮೊಗ್ಗ: ಪತ್ನಿಗೆ ಸ್ಕ್ರೂ ಡ್ರೈವರ್ನಿಂದ ಚುಚ್ಚಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ - LIFE IMPRISONMENT FOR WIFE MURDER