ಮಹಾಕುಂಭ ನಗರ(ಉತ್ತರ ಪ್ರದೇಶ): ಸನಾತನ ಧರ್ಮವನ್ನು ನಿಮ್ಮ ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳಬೇಡಿ ಎಂದು ಸಂತರು, ವಿವಿಧ ಮಠದ ಪೀಠಾಧಿಪತಿಗಳು ರಾಜಕಾರಣಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಇಂದು (ಸೋಮವಾರ) ವಸಂತ ಪಂಚಮಿ ಪ್ರಯುಕ್ತ ಮೂರನೇ ಅಮೃತ ಸ್ನಾನದಲ್ಲಿ ಸಂತರು, ಸನ್ಯಾಸಿಗಳು, ಸಾಧುಗಳು, ಕೋಟ್ಯಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಕೃತಾರ್ಥರಾದರು.
ಇದೇ ವೇಳೆ, ರಾಜ್ಯ ಸರ್ಕಾರವು ಪಂಚ ನಿರ್ವಾಣಿ ಅಖಾಡದ ಮಹಾಂತ ಸಂತೋಷ್ ದಾಸ್ ಸತ್ತುವಾ ಬಾಬಾ ಮಹಾರಾಜ್ ಅವರು ರಾಜಕೀಯ ನಾಯಕರನ್ನು ತರಾಟೆಗೆ ತೆಗೆದುಕೊಂಡ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
"ರಾಜಕೀಯ ನಾಯಕರು ಸನಾತನ ಧರ್ಮವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು. ಮಹಾ ಕುಂಭಮೇಳದ ಬಗ್ಗೆ ವದಂತಿಗಳನ್ನು ಹಬ್ಬಿಸಬಾರದು. ಇದನ್ನೆಲ್ಲಾ ಹಿಂದುಗಳು ಸಹಿಸುವುದಿಲ್ಲ. ನೀವು ಪಾಲಿಸದ ಧರ್ಮವನ್ನು ದುರುಪಯೋಗ ಮಾಡಿಕೊಳ್ಳಬೇಡಿ" ಎಂದು ಮಹಾರಾಜರು ಎಚ್ಚರಿಕೆ ನೀಡಿದ್ದಾರೆ.
ಧರ್ಮ ಪಾಲಿಸದವರಿಂದ ಟೀಕೆ ಯಾಕೆ?: "ನೀವು ಎಂದಿಗೂ ಸನಾತನ ಧರ್ಮವನ್ನು ಪಾಲಿಸಿಲ್ಲ ಮತ್ತು ಗೌರವಿಸಿಲ್ಲ. ಈಗ ಅದರ ಲಾಭ ಪಡೆಯಲು ಪ್ರಯತ್ನಿಸಬೇಡಿ. ನಿಮ್ಮ ಪಕ್ಷವು ಅಧಿಕಾರದಲ್ಲಿದ್ದಾಗ ಸನಾತನಿಗಳನ್ನು ಹೇಗೆ ನಡೆಸಿಕೊಂಡಿದ್ದೀರಿ ಎಂಬುದನ್ನು ನಾವು ನೋಡಿದ್ದೇವೆ. ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ವದಂತಿಗಳನ್ನು ಹರಡಬೇಡಿ. ನಿಮ್ಮಂತಹವರನ್ನು ನಾವು ಬೇರು ಸಮೇತ ಕಿತ್ತು ಹಾಕುತ್ತೇವೆ" ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜುನಪೀಠಾಧೀಶ್ವರ ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜರು ಮಾತನಾಡಿ, "ಕುಂಭಮೇಳದಲ್ಲಿ ಆಧ್ಯಾತ್ಮಿಕ ಏಕತೆ ಮೇಳೈಸುತ್ತಿದೆ. ವಿಭಿನ್ನ ಚಿಂತನೆಗಳು ಮತ್ತು ಧರ್ಮಗಳ ಜನರು ಗಂಗಾ ನದಿಯ ದಡದಲ್ಲಿ ಸೇರುತ್ತಿದ್ದಾರೆ. ಜಗತ್ತು ಭಯ ಮತ್ತು ಅಶಾಂತಿಯಿಂದ ತೊಳಲಾಡುತ್ತಿದ್ದರೆ, ಭಾರತವು ಶಾಂತಿ ಮತ್ತು ಸಮೃದ್ಧಿಯಿಂದ ಮಿನುಗುತ್ತಿದೆ" ಎಂದು ಹೇಳಿದ್ದಾರೆ.
"ಮಹಾ ಕುಂಭಮೇಳದ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮದಲ್ಲಿ ದೇಶ-ವಿದೇಶದಿಂದ ಬಂದ ಸನಾತನಿಗಳು ಪುಣ್ಯ ಸ್ನಾನ ಮಾಡಲು ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವು ಸಕಲ ವ್ಯವಸ್ಥೆಗಳನ್ನು ಮಾಡಿಕೊಟ್ಟಿದೆ. ಸನಾತನಿಗಳನ್ನು ಹೇಗೆ ಗೌರವಿಸಬೇಕು ಎಂಬುದನ್ನು ಇವರನ್ನು ನೋಡಿ ಕಲಿಯಿರಿ" ಎಂದಿದ್ದಾರೆ.
ಅಖಿಲೇಶ್ ಯಾದವ್ ಹೇಳಿದ್ದೇನು?: ಜನವರಿ 29ರಂದು ನಡೆದ ಕಾಲ್ತುಳಿತವು ಸರ್ಕಾರದ ವೈಫಲ್ಯವಾಗಿದೆ. ಸೂಕ್ತ ವ್ಯವಸ್ಥೆ ಮಾಡದೇ ಇರುವುದು ದುರಂತಕ್ಕೆ ಕಾರಣ. ಕುಂಭಮೇಳವನ್ನು ಸರ್ಕಾರದ ಬದಲಿಗೆ ದೇಶದ ಸೇನೆಯು ನಿರ್ವಹಿಸಬೇಕು ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದರು.