ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ಚಾಕುವಿನಿಂದ ಹಲವು ಬಾರಿ ಇರಿದಿರುವ ಆರೋಪ ಹೊತ್ತಿರುವ ಬಾಂಗ್ಲಾದೇಶಿಗನ ಪೊಲೀಸ್ ಕಸ್ಟಡಿಯನ್ನು ಮುಂಬೈ ನ್ಯಾಯಾಲಯ ಶುಕ್ರವಾರ ಜನವರಿ 29ರವರೆಗೆ ವಿಸ್ತರಿಸಿದೆ. ಕಳ್ಳತನಕ್ಕೆಂದು ಸೈಫ್ ಕರೀನಾ ನಿವಾಸಕ್ಕೆ ನುಗ್ಗಿದ ವ್ಯಕ್ತಿ, ನಟನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ.
ಆರೋಪಿ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ (30) ಎಂಬಾತನನ್ನು ಪೊಲೀಸರು ಬಾಂದ್ರಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಎದುರು ಹಾಜರುಪಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ನಿರ್ಣಾಯಕ ಅಂಶಗಳ ಕುರಿತು ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ವಾದಿಸಿ, ನ್ಯಾಯಾಲಯದಿಂದ ಇನ್ನೂ ಏಳು ದಿನಗಳ ಕಾಲ ಆರೋಪಿಯನ್ನು ಕಸ್ಟಡಿಗೆ ಕೋರಿದರು. ಪೊಲೀಸರ ಮನವಿಗೆ ಸ್ಪಂದಿಸಿದ ನ್ಯಾಯಾಲಯ, ಜನವರಿ 29ರವರೆಗೆ ಆರೋಪಿಯ ಕಸ್ಟಡಿ ವಿಸ್ತರಿಸಿತು.
ಮುಂಬೈನ ಥಾಣೆ ನಗರದಲ್ಲಿ ಭಾನುವಾರದಂದು ಬಂಧನಕ್ಕೊಳಗಾದ ಆರೋಪಿ ಬಾಂಗ್ಲಾದೇಶದವನಾಗಿದ್ದು, ಕಳೆದ ವರ್ಷ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ನಂತರ ತನ್ನ ಹೆಸರನ್ನು ವಿಜಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದಾನೆ ಎಂದು ಪೊಲೀಸರು ಈ ಹಿಂದೆ ತಿಳಿಸಿದ್ದರು.
ಕಳೆದ ಗುರುವಾರ (ಜನವರಿ 16) ಮುಂಜಾನೆ ಬಾಂದ್ರಾದಲ್ಲಿರುವ ಅಪಾರ್ಟ್‌ಮೆಂಟ್ ಒಂದರ 12ನೇ ಮಹಡಿಯಲ್ಲಿರುವ ಸೈಫ್ ನಿವಾಸಕ್ಕೆ ನುಗ್ಗಿದ ವ್ಯಕ್ತಿ, 54ರ ಹರೆಯದ ನಟನ ಮೇಲೆ ಚಾಕುವಿನಿಂದ ಹಲವು ಬಾರಿ ಇರಿದಿದ್ದನು. ಈ ದಾಳಿ ಭದ್ರತೆ ಮತ್ತು ಸೆಲೆಬ್ರಿಟಿ ಜೀವನದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿತು.
ದಾಳಿ ನಡೆದ ಕೂಡಲೇ ನಟನನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಕುತ್ತಿಗೆ ಮತ್ತು ಬೆನ್ನುಮೂಳೆ ಸೇರಿದಂತೆ ಹಲವೆಡೆ ಗಂಭೀರ ಗಾಯಗಳಾಗಿದ್ದ ಹಿನ್ನೆಲೆ ಆ ಕೂಡಲೇ ಎರಡು ಶಸ್ತ್ರಚಿಕಿತ್ಸೆಗೆ ಒಳಗಾದರು. ಜನವರಿ 21ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆ ತಲುಪಿದರು.
ಇದನ್ನೂ ಓದಿ: ಕೊಲೆ ಬೆದರಿಕೆ ಬೆನ್ನಲ್ಲೇ ಮತ್ತೊಂದು ಆಘಾತ: ನಟ ರಾಜ್‌ಪಾಲ್ ಯಾದವ್ ತಂದೆ ನೌರಂಗ್ ನಿಧನ
ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಎರಡು ದಿನಗಳ ನಂತರ, ಮುಂಬೈ ಕ್ರೈಂ ಬ್ರ್ಯಾಂಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟನ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಜನವರಿ 16ರಂದು ನಡೆದ ಘಟನೆ ಬಗ್ಗೆ ನಟ ಸಂಪೂರ್ಣವಾಗಿ ವಿವರಿಸಿದರು.
ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ: ದರ್ಶನ್ ಸೇರಿ 7 ಆರೋಪಿಗಳ ಜಾಮೀನು ರದ್ದುಗೊಳಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್
ನಟನ ಹೇಳಿಕೆಗಳು, ತಮ್ಮ ಪುತ್ರ ಜಹಾಂಗೀರ್‌ನನ್ನು ದುಷ್ಕರ್ಮಿಯಿಂದ ಹೇಗೆ ರಕ್ಷಿಸಿದರೆಂಬುದನ್ನು ಮತ್ತು ತಮ್ಮ ಮೇಲಾದ ಹಲ್ಲೆ ಬಗ್ಗೆ ತಿಳಿಸಿದೆ. ಸೈಫ್ ಹೇಳಿಕೆಯ ಪ್ರಕಾರ, ಸೈಫ್ ಹಾಗೂ ಕರೀನಾ ತಮ್ಮ ರೂಮ್ನಲ್ಲಿದ್ದರು. ಕಿರಿಯ ಮಗ ಜಹಾಂಗೀರ್ ಅಲಿ ಖಾನ್‌ನನ್ನು ನೋಡಿಕೊಳ್ಳುವ ಎಲಿಯಾಮಾ ಫಿಲಿಪ್‌ನ (Eliama Philip) ಅವರ ಕಿರುಚಾಟ ಕೇಳಿಸಿತು. ಆ ಕೂಡಲೇ ಜಹಾಂಗೀರ್‌ನ ಕೋಣೆಗೆ ಧಾವಿಸಿದ ಸೈಫ್, ದುಷ್ಕರ್ಮಿಯು ತಮ್ಮ ಮಗ ಮತ್ತು ಫಿಲಿಪ್ ಮೇಲೆ ದಾಳಿ ಮಾಡಲು ಮುಂದಾಗಿದ್ದನ್ನು ಕಂಡುಕೊಂಡರು. ಅವರನ್ನು ರಕ್ಷಿಸೋ ಭರದಲ್ಲಿ ಸ್ವತಃ ಗಂಭೀರ ಗಾಯಕ್ಕೊಳಗಾದರು.