ಹಾವೇರಿ: ಸಾಲದಿಂದ ನೊಂದು ಕಿರಾಣಿ ಅಂಗಡಿಯ ಮಾಲೀಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು 36 ವರ್ಷದ ನಾಗಪ್ಪ ಗುಂಜಾಳ ಎಂದು ಗುರುತಿಸಲಾಗಿದೆ.
"ಕಿರಾಣಿ ಅಂಗಡಿ ನಡೆಸಲು ನಾಗಪ್ಪ ವಿವಿಧ ಪೈನಾನ್ಸ್ಗಳಿಂದ ಸುಮಾರು 15 ಲಕ್ಷ ಸಾಲ ಮಾಡಿಕೊಂಡಿದ್ದರು. ಮೈಕ್ರೋ ಫೈನಾನ್ಸ್ನವರು ಮನೆಯ ಮುಂದೆ ಹಾಗೂ ಅಂಗಡಿಯ ಮುಂದೆ ಬಂದು ನಿಂತು ಕಿರುಕುಳ ನೀಡುತ್ತಿದ್ದರು. ಅವರ ಕಿರುಕುಳ ತಾಳಲಾರದೇ ರಾತ್ರಿ ಮನೆಗೆ ಬಂದು ಊಟ ಮಾಡಿ ಹೋಗಿ ಬೇರೆ ಕಡೆ ಇರುತ್ತಿದ್ದರು. ಎರಡೂವರೆ ವರ್ಷದ ಮಗುವನ್ನು ನೋಡಲು ರಾತ್ರಿ ಬಂದು ಹೋಗುವ ಪರಿಸ್ಥಿತಿ ಬಂದಿತ್ತು. ಮೈಕ್ರೋ ಪೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ" ಎಂದು ನಾಗಪ್ಪನ ಪತ್ನಿ ಪಲ್ಲವಿ ಆರೋಪಿಸಿದ್ದಾರೆ.
ಕಳೆದ ಎಂಟು ವರ್ಷಗಳ ಹಿಂದೆ ನಾಗಪ್ಪ ಕಿರಾಣಿ ಅಂಗಡಿಗಾಗಿ ಸಣ್ಣಪುಟ್ಟ ಸಾಲ ಮಾಡಿಕೊಂಡಿದ್ದ. ಒಂದು ಸಾಲ ತೀರಿಸಲು ಹೋಗಿ ಇನ್ನೊಂದು ಸಾಲ ಮಾಡಿಕೊಂಡಿದ್ದ. ಹೀಗಾಗಿ ವಿವಿಧ ಮೈಕ್ರೋ ಪೈನಾನ್ಸ್ನಲ್ಲಿ 15 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ. ಸಾಲವನ್ನು ತೀರಿಸಲು ಪತ್ನಿ ಗಾರ್ಮೆಂಟ್ನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಪತ್ನಿ ಕೆಲಸಕ್ಕೆ ಹೋಗಿದ್ದ ವೇಳೆ ನಾಗಪ್ಪ ಆತ್ಮಹತ್ಯೆಗೆ ಶರಣಾಗಿದ್ದಾನೆ.
ನಾಗಪ್ಪನ ಆತ್ಮಹತ್ಯೆಯಿಂದ ಕಂಗಾಲಾಗಿರುವ ಕುಟುಂಬ ಸದಸ್ಯರು ಕಣ್ಣೀರು ಹಾಕುತ್ತಿದ್ದಾರೆ. ನಮ್ಮ ಕುಟುಂಬಕ್ಕೆ ಸರ್ಕಾರ ಸಹಾಯ ಮಾಡಬೇಕು ಎಂದು ತಾಯಿ ನೀಲವ್ವ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ನಿಂದ ಮನೆಗೆ ಬೀಗ: ಬಾಣಂತಿ ಮನೆಗೆ ವಾಪಸ್ - ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹಾಯಕ್ಕೆ ಕುಟುಂಬದಿಂದ ಧನ್ಯವಾದ