ವಾಷಿಂಗ್ಟನ್, ಅಮೆರಿಕ: ಯುಎಸ್ ಅಧ್ಯಕ್ಷ ಜಾನ್ ಎಫ್ ಕೆನಡಿ, ಸೆನೆಟರ್ ರಾಬರ್ಟ್ ಎಫ್ ಕೆನಡಿ ಮತ್ತು ರೆವರೆಂಡ್ ಡಾ.ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಹತ್ಯೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಈ ಹತ್ಯೆಗಳ ಬಗೆಗಿನ ಸತ್ಯ ಅಮೆರಿಕದ ಜನರಿಗೆ ತಿಳಿಯಲಿ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಶ್ವೇತಭವನ, ಆರು ದಶಕಗಳ ರಹಸ್ಯದ ನಂತರ ಅಮೆರಿಕನ್ನರಿಗೆ ಸತ್ಯ ತಿಳಿಸಲಾಗುತ್ತಿದೆ ಎಂದು ಹೇಳಿದೆ. ಈ ಹತ್ಯೆಗಳು ನಡೆದು 50 ವರ್ಷಗಳೇ ಕಳೆದು ಹೋಗಿದ್ದು, ಹತ್ಯೆಗೀಡಾದವರ ಕುಟುಂಬಸ್ಥರು ಮತ್ತು ಅಮೆರಿಕದ ಜನ ಈ ಕುರಿತಾದ ಸತ್ಯಗಳನ್ನು ತಿಳಿಯಲು ಕಾರ್ಯನಿರ್ವಾಹಕ ಆದೇಶವು ಅನುವು ಮಾಡಿಕೊಡಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 15 ದಿನಗಳೊಳಗೆ ರಹಸ್ಯ ದಾಖಲೆಗಳನ್ನು ಬಹಿರಂಗ ಪಡಿಸುವ ಪ್ರಕ್ರಿಯೆಯನ್ನು ತಯಾರಿಸಬೇಕೆಂದು ಆದೇಶದಲ್ಲಿ ಅಧಿಕಾರಿಗಳಿಗೆ ತಿಳಿಸಲಾಗಿದೆ.
1963ರಲ್ಲಿ ನಡೆದಿತ್ತು ಜಾನ್ ಎಫ್ ಕೆನಡಿ ಹತ್ಯೆ: ಅಧ್ಯಕ್ಷ ಜಾನ್ ಎಫ್ ಕೆನಡಿ ಅವರನ್ನು 1963 ರಲ್ಲಿ ಡಲ್ಲಾಸ್ನಲ್ಲಿ ಹತ್ಯೆಗೈಯಲಾಗಿತ್ತು. ಅಮೆರಿಕದ ಅತ್ಯಂತ ಪ್ರಸಿದ್ಧ ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರು ಟೆನ್ನೆಸ್ಸಿಯ ಮೆಂಫಿಸ್ನಲ್ಲಿ 1968ರಲ್ಲಿ ಕೊಲೆಗೀಡಾಗಿದ್ದರು. ಇದಾಗಿ ಎರಡು ತಿಂಗಳ ನಂತರ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಾನ್ ಎಫ್ ಕೆನಡಿ ಅವರ ಸಹೋದರ ರಾಬರ್ಟ್ ಎಫ್ ಕೆನಡಿ ಅವರನ್ನು 1968ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಹತ್ಯೆ ಮಾಡಲಾಗಿತ್ತು.
ನಿರ್ದಿಷ್ಟವಾಗಿ ಜಾನ್ ಎಫ್ ಕೆನಡಿ ಅವರ ಹತ್ಯೆಗೆ ಸಂಬಂಧಿಸಿದ ದಾಖಲೆಗಳನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಲು 15 ದಿನಗಳಲ್ಲಿ ಯೋಜನೆಯನ್ನು ಪ್ರಸ್ತುತಪಡಿಸುವಂತೆ ಮತ್ತು ರಾಬರ್ಟ್ ಎಫ್ ಕೆನಡಿ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಹತ್ಯೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತಕ್ಷಣ ಪರಿಶೀಲಿಸುವಂತೆ ಮತ್ತು 45 ದಿನಗಳಲ್ಲಿ ಅವರ ಹತ್ಯೆ ಕುರಿತಾದ ಸಂಪೂರ್ಣ ಮಾಹಿತಿ ಬಿಡುಗಡೆಗೆ ಯೋಜನೆಯನ್ನು ಪ್ರಸ್ತುತ ಪಡಿಸುವಂತೆ ರಾಷ್ಟ್ರೀಯ ಗುಪ್ತಚರ ನಿರ್ದೇಶಕರು ಮತ್ತು ಸಂಬಂಧಿಸಿದ ಇತರ ಅಧಿಕಾರಿಗಳಿಗೆ ಆದೇಶದಲ್ಲಿ ನಿರ್ದೇಶಿಸಲಾಗಿದೆ.
ಮೊದಲ ಅವಧಿಯಲ್ಲೂ ಆದೇಶಿಸಿದ್ದ ಟ್ರಂಪ್: ಜಾನ್ ಎಫ್ ಕೆನಡಿ ಹತ್ಯೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸುವಂತೆ ಟ್ರಂಪ್ ತಮ್ಮ ಮೊದಲ ಅಧಿಕಾರಾವಧಿಯಲ್ಲಿಯೂ ಗುಪ್ತಚರ ಇಲಾಖೆಗಳಿಗೆ ಆದೇಶಿಸಿದ್ದರು.
ಶ್ವೇತಭವನದ ಪ್ರಕಾರ, 1992 ರ ಅಧ್ಯಕ್ಷ ಜಾನ್ ಎಫ್ ಕೆನಡಿ ಹತ್ಯೆ ದಾಖಲೆಗಳ ಸಂಗ್ರಹ ಕಾಯ್ದೆಯ ಪ್ರಕಾರ ಹತ್ಯೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು 25 ವರ್ಷಗಳಲ್ಲಿ ಬಿಡುಗಡೆ ಮಾಡಬೇಕಾಗಿತ್ತು. ಆದರೆ, ಮಿಲಿಟರಿ ಹಿತಾಸಕ್ತಿ, ಗುಪ್ತಚರ ಕಾರ್ಯಾಚರಣೆಗಳು, ಕಾನೂನು ಜಾರಿ ಅಥವಾ ವಿದೇಶಾಂಗ ಸಂಬಂಧಗಳ ವಿಚಾರದಲ್ಲಿ ಗುರುತಿಸಬಹುದಾದ ಹಾನಿಯುಂಟಾಗಬಹುದು ಎಂಬ ಕಾರಣ ನೀಡಿ ದಾಖಲೆಗಳ ಬಹಿರಂಗಪಡಿಸುವಿಕೆಯನ್ನು ಅಧ್ಯಕ್ಷರು ಮುಂದೂಡಿದರೆ, ಅಂಥ ಸಂದರ್ಭದಲ್ಲಿ ದಾಖಲೆಗಳನ್ನು ಬಹಿರಂಗಪಡಿಸುವಂತಿಲ್ಲ ಎಂದು ಕಾಯ್ದೆಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ : ಪರಿಹಾರ ಸಾಮಗ್ರಿ ಹೊತ್ತ 1,000 ಟ್ರಕ್ ಗಾಜಾ ಪ್ರವೇಶ: ವಿಶ್ವಸಂಸ್ಥೆಯಿಂದ ನೆರವು ಕಾರ್ಯ ಪುನಾರಂಭ - UN AID TO GAZA