ವಿಶೇಷ ವರದಿ: ಸಿದ್ದನಗೌಡ. ಎಸ್. ಪಾಟೀಲ್
ಬೆಳಗಾವಿ: ಕೃಷಿ ಎಂದರೆ ನಷ್ಟ, ರೈತ ಎಂದರೆ ಸಾಲಗಾರ ಅಂತಾ ಹೀಗಳಿಯುತ್ತಾರೆ. ಆದರೆ, ಇಲ್ಲೊಬ್ಬ ರೈತ ಕ್ಯಾಬೇಜ್ ಬೆಳೆದು ಸಾಲದಿಂದ ಮುಕ್ತರಾಗಿದ್ದಾರೆ. ಕ್ಯಾಬೇಜ್ ಅವರ ಇಡೀ ಬದುಕನ್ನೇ ಹಸನಾಗಿಸಿದೆ. ಹಾಗಾಗಿ, ತನ್ನ ಜೀವ ಹೋದರೂ ಕ್ಯಾಬೇಜ್ ಬೆಳೆಯೋದು ಬಿಡಲ್ಲ ಅಂತಿದ್ದಾರೆ. ಕ್ಯಾಬೇಜ್ ಪ್ರೇಮಿಯ ಯಶೋಗಾಥೆ ಕುರಿತು ಈಟಿವಿ ಭಾರತದ ವಿಶೇಷ ವರದಿ ಇಲ್ಲಿದೆ.

ಮನೆ, ಬೈಕ್ ಸೇರಿ ಪಾತ್ರೆ - ಪಗಡೆಗಳ ಮೇಲೆ "ಎಲ್ಲ ಕ್ಯಾಬೇಜ್ ಪುಣ್ಯದಫಲ" (ಸಗಳಿ ಕ್ಯಾಬೇಜಾಚಿ ಪುಣ್ಯಾಯಿ) ಅಂತಾ ಮರಾಠಿಯಲ್ಲಿ ಬರೆದಿರುವುದು. ಸಹೋದರನ ಮದುವೆ ಲಗ್ನಪತ್ರಿಕೆ, ಸಹೋದರನ ಮಗನ ಹುಟ್ಟು ಹಬ್ಬದ ಬ್ಯಾನರ್ ಮೇಲೂ ಕ್ಯಾಬೇಜ್ ಚಿತ್ರ. ಹೌದು, ಹೀಗೆ ಕ್ಯಾಬೇಜ್ ಪ್ರೇಮ ಮೆರೆದವರು ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಸಾಧಕ ರೈತ ನಾಗೇಶ ಚಂದ್ರಪ್ಪ ದೇಸಾಯಿ.
ತಂದೆ-ತಾಯಿ ಆಶೀರ್ವಾದ(ಪುಣ್ಯ) ಅಂತಾ ಮನೆ ಮೇಲೆ ಬರೆಸುವುದು ಕಾಮನ್ ಆಗಿ ಕಂಡು ಬರುವ ಸಂಗತಿ. ಆದರೆ, ತಮ್ಮ ಬದುಕನ್ನೇ ಬದಲಿಸಿದ ಕ್ಯಾಬೇಜ್ಗೆ ನಾಗೇಶ ಗೌರವ ಸಲ್ಲಿಸಿರುವುದು ಈಗಿನ ವಿಶೇಷತೆ.
ಎಸ್ಎಸ್ಎಲ್ಸಿಗೆ ಓದು ಅರ್ಧಕ್ಕೆ ನಿಲ್ಲಿಸಿದ ನಾಗೇಶ ಕೃಷಿ ಕಾಯಕದ ಕಡೆ ಮುಖ ಮಾಡಿದರು. 2010ಕ್ಕೂ ಮೊದಲು ನಾಗೇಶ ಅವರು ತಮ್ಮ 3 ಎಕರೆ ಜಮೀನಿನಲ್ಲಿ ಕಬ್ಬು, ಆಲೂಗಡ್ಡೆ, ಭತ್ತ ಸೇರಿ ಮತ್ತಿತರ ಬೆಳೆ ಬೆಳೆಯುತ್ತಿದ್ದರು. ಇವುಗಳಿಂದ ನಿರೀಕ್ಷಿತ ಆದಾಯಗಳಿಸದೇ ಕೈ ಸುಟ್ಟುಕೊಂಡಿದ್ದರು. ಲಕ್ಷಾಂತರ ರೂ. ಸಾಲವೂ ಆಗಿತ್ತು. ಆಗ ಚಿಂತಾಕ್ರಾಂತರಾಗಿದ್ದ ನಾಗೇಶ ಅವರ ತಲೆಗೆ ಹೊಳೆದಿದ್ದೆ ಕ್ಯಾಬೇಜ್. ಅಂದು ಕ್ಯಾಬೇಜ್ ಬೆಳೆಯಲು ಶುರು ಮಾಡಿದವರು, ಈಗಲೂ ಮುಂದುವರಿಸಿದ್ದಾರೆ. ಅವರೇ ಹೇಳುವಂತೆ ಕಳೆದ 15 ವರ್ಷಗಳಲ್ಲಿ ಕ್ಯಾಬೇಜ್ ಬೆಳೆದು 1 ಕೋಟಿ ರೂಪಾಯಿಗೂ ಅಧಿಕ ಲಾಭಗಳಿಸಿದ್ದಾರಂತೆ.

ಕ್ಯಾಬೇಜ್ ಲಾಭದಲ್ಲೇ ತಮ್ಮ, ತಂಗಿಯ ಮದುವೆ: ಸಾಲವೂ ಕಳೆದು, 80 ಲಕ್ಷ ರೂ. ಕೊಟ್ಟು ತಮ್ಮೂರಿನಲ್ಲೇ ಎರಡು ಎಕರೆ ಜಮೀನು ಖರೀದಿಸಿದ್ದಾರೆ. ಅಷ್ಟೇ ಅಲ್ಲ ನಾಗೇಶ ತಮ್ಮ ಮದುವೆ ಜೊತೆಗೆ ಸಹೋದರ ಮತ್ತು ತಂಗಿಯ ಮದುವೆಯನ್ನೂ ಕ್ಯಾಬೇಜದಿಂದ ಬಂದ ಹಣದಲ್ಲೇ ಮಾಡಿ ಮುಗಿಸಿದ್ದಾರೆ. 9 ವರ್ಷಗಳ ಹಿಂದೆ 6.5 ಲಕ್ಷ ರೂ. ಖರ್ಚು ಮಾಡಿ ಹೊಲದಲ್ಲಿ ಮನೆ ಕಟ್ಟಿಸಿರುವ ನಾಗೇಶ್ ಅವರು ಆ ಮನೆಗೆ "ಎಲ್ಲ ಕ್ಯಾಬೇಜ್ ಪುಣ್ಯದಫಲ" (ಸಗಳಿ ಕ್ಯಾಬೇಜಾಚಿ ಪುಣ್ಯಾಯಿ) ಅಂತಾ ಬರೆಸಿದ್ದಾರೆ. ಇನ್ನು ತಾವು ಓಡಾಡುವ ಬೈಕ್ ಮೇಲೂ ಅದೇ ರೀತಿ ಬರೆಸಿ ಎಲ್ಲರ ಗಮನ ಸೆಳೆದಿದ್ದಾರೆ.

ಸ್ವಂತ ನರ್ಸರಿ: ಕಳೆದ ಮೂರು ವರ್ಷಗಳಿಂದ ತಮ್ಮದೇ ಜಮೀನಿನ 2 ಗುಂಟೆ ಜಾಗದಲ್ಲಿ ನಾಗೇಶ ನರ್ಸರಿ ನಿರ್ಮಿಸಿದ್ದಾರೆ. ಬೀಜ - ಗೊಬ್ಬರ ಮಾರಾಟ ಅಂಗಡಿಯಿಂದ ಬೀಜವನ್ನು ತಂದು ನೆಡುತ್ತಾರೆ. 28 ದಿನಗಳಲ್ಲಿ ಸಸಿಗಳು ತಯಾರಾಗುತ್ತವೆ. ತಮಗೆ ಬೇಕಾದ 1 ಲಕ್ಷ 80 ಸಾವಿರ ಸಸಿಗಳನ್ನು ಅವರೇ ತಯಾರಿಕೊಳ್ಳುತ್ತಾರೆ. ಹೊರಗಡೆ 1 ಸಸಿಗೆ 60 ಪೈಸೆ ದರವಿದೆ. ನಾವು ತಯಾರಿಸಿದರೆ 1 ಸಸಿಗೆ 20 ಪೈಸೆ ದರ ಬೀಳುತ್ತದೆ. ಇದರಿಂದಲೂ ನಮಗೆ ಸಾಕಷ್ಟು ಹಣ ಉಳಿತಾಯ ಆಗುತ್ತದೆ ಎನ್ನುತ್ತಾರೆ ನಾಗೇಶ.

ಬೆಳೆಯುವ ವಿಧಾನ: ಮುಂಗಾರು ಹಂಗಾಮಿನಲ್ಲಿ ಭತ್ತದ ಕೊಯ್ಲು ನಂತರ ಭೂಮಿ ಹದ ಮಾಡಿಕೊಂಡು ಕ್ಯಾಬೇಜ್ ಸಸಿ ನೆಡುತ್ತೇವೆ. 1 ಎಕರೆಗೆ ಅಂದಾಜು 40 ಸಾವಿರ ಸಸಿ ಬೇಕಾಗುತ್ತವೆ. ಐದಾರು ಬಾರಿ ಕೀಟನಾಶಕ ಹೊಡೆಯಬೇಕಾಗುತ್ತದೆ. ಮೂರು ಬಾರಿ ರಸ ಗೊಬ್ಬರ ಹಾಕಲಾಗುತ್ತದೆ. 8 ದಿನಗಳಿಗೊಮ್ಮೆ ನೀರು ಬಿಡುತ್ತೇವೆ. 8 ಸಾಲುಗಳಂತೆ ನೀರು ಹಾಯಿಸುತ್ತೇವೆ. ಕ್ಯಾಬೇಜ್ ಬೆಳೆ ಕೈಗೆ ಬರೋವರೆಗೆ 8 - 9 ಬಾರಿ ನೀರು ಬಿಡಬೇಕಾಗುತ್ತದೆ. ಮೂರು ತಿಂಗಳಲ್ಲಿ ಕ್ಯಾಬೇಜ್ ಕಟಾವಿಗೆ ಬರುತ್ತದೆ. 1 ಎಕರೆಗೆ ಏನಿಲ್ಲ ಅಂದರೂ 25-30 ಟನ್ ಇಳುವರಿ ಬರುತ್ತದೆ.

ಬೆಂಗಳೂರು, ಘಟಪ್ರಭಾ ಮತ್ತು ಬೆಳಗಾವಿ ವ್ಯಾಪಾರಿಗಳು ನಮ್ಮ ಹೊಲಕ್ಕೆ ಬಂದು ತಾವೇ ಕಟಾವು ಮಾಡಿಕೊಂಡು, ಆಗಿನ ದರದಂತೆ ದುಡ್ಡು ಕೊಟ್ಟು ಕ್ಯಾಂಟರ್ ವಾಹನದಲ್ಲಿ ಕ್ಯಾಬೇಜ್ ತುಂಬಿಕೊಂಡು ಒಯ್ಯುತ್ತಾರೆ. ಇನ್ನು 1 ಎಕರೆಗೆ ಅಂದಾಜು 40 ಸಾವಿರ ರೂ. ಖರ್ಚು ಆಗುತ್ತದೆ. ಆರು ತಿಂಗಳಲ್ಲಿ ಹಂತ ಹಂತವಾಗಿ ಮೂರು ಬಾರಿ, 5 ಎಕರೆಯಲ್ಲಿ ಕ್ಯಾಬೇಜ್ ಬೆಳೆಯುತ್ತೇವೆ ಎಂದು ನಾಗೇಶ ದೇಸಾಯಿ ವಿವರಿಸಿದರು.

ತರಕಾರಿ ಬೆಳೆ ಎಂದರೆ ಅದು ಲಾಟರಿ ಇದ್ದಂತೆ - 10 ಕೆಜಿಗೆ 15 ರೂ. ದರ:- "ಕ್ಯಾಬೇಜ್ ಎಂದರೆ ಲಾಟರಿ ಇದ್ದಂತೆ. ಹಾವು - ಏಣಿಯಾಟದಂತೆ ದರ ಏರುಪೇರು ಆಗುತ್ತಿರುತ್ತದೆ. ಸದ್ಯ ಮಾರುಕಟ್ಟೆಯಲ್ಲಿ 10 ಕೆಜಿಗೆ 15 ರೂ. ದರವಿದೆ. ಇದರಿಂದ 1 ಎಕರೆಗೆ 20 ಸಾವಿರ ರೂ. ನಷ್ಟ ಆಗಲಿದೆ. ಕನಿಷ್ಠ 100-150 ರೂ. ಆದರೂ ದರ ಸಿಗಬೇಕು. 2 ವರ್ಷದ ಹಿಂದೆ 10 ಕೆಜಿಗೆ 250 ರೂ. ದರ ಸಿಕ್ಕಿತ್ತು. ಆಗ 1 ಎಕರೆಗೆ 7 ಲಕ್ಷ ರೂ. ಲಾಭವಾಗಿತ್ತು. ಹಾಗಾಗಿ, ದರದ ಬಗ್ಗೆ ಯಾವುದೇ ಖಚಿತತೆ ಇಲ್ಲ. ಆದರೆ, ನಾನು ಲಾಭ ಆಗಲಿ, ನಷ್ಟವಾಗಲಿ ಕ್ಯಾಬೇಜ್ ಬೆಳೆಯೋದು ಬಿಟ್ಟಿಲ್ಲ" ಎಂಬುದು ರೈತ ನಾಗೇಶ ದೇಸಾಯಿ ಅಭಿಪ್ರಾಯ.

ಸಹೋದರ ಇಂಜಿನಿಯರ್: ಬೆಳಗಾವಿ ತಾಲೂಕಿನಾದ್ಯಂತ ಕ್ಯಾಬೇಜ್ ನಾಗಣ್ಣ ಅಂತಾನೇ ಪ್ರಸಿದ್ಧಿ ಪಡೆದ ಅವರಿಗೆ ತಂದೆ ಚಂದ್ರಪ್ಪ, ತಾಯಿ ಮಂಗಲ್, ಪತ್ನಿ ಪ್ರಿಯಾ ಕೂಡ ಸಾಥ್ ಕೊಡುತ್ತಾರೆ. ಸಹೋದರ ಕಲ್ಲಪ್ಪ ಸಾಫ್ಟವೇರ್ ಇಂಜಿನಿಯರ್ ಆಗಿದ್ದು, ಅವರ ಪತ್ನಿ ಶಶಿಕಲಾ ಕೂಡ ಇಂಜಿನಿಯರ್. ಇವರಿಬ್ಬರೂ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ತಿಂಗಳಿಗೆ ಲಕ್ಷ ಲಕ್ಷ ಸಂಬಳ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಕವಣಿ, ಲಡ್ ಕಣ್ಮರೆ: ಆಧುನಿಕತೆಯ ನಡುವೆ ಪಾರಂಪರಿಕ ವಿಧಾನವನ್ನು ಕೈ ಬಿಡದ ಉತ್ತರ ಕರ್ನಾಟಕ ರೈತ
ಈಟಿವಿ ಭಾರತ ಜೊತೆ ಮಾತನಾಡಿದ ನಾಗೇಶ ದೇಸಾಯಿ ಅವರು, "ಆರಂಭದಲ್ಲಿ ಕ್ಯಾಬೇಜ್ನಿಂದ 1 ಲಕ್ಷ ರೂ. ಲಾಭ ಬಂತು. ನಂತರ ವರ್ಷಕ್ಕೆ 10, 12, 13 ಲಕ್ಷ ರೂ. ಅಂತೆ ಲಾಭ ಗಳಿಸುತ್ತಾ ಬಂದಿದ್ದೇವೆ. ಅದು ಈಗ 1 ಕೋಟಿ ರೂ. ದಾಟಿದೆ. ಒಮ್ಮೊಮ್ಮೆ ಒಳ್ಳೆಯ ದರ ಸಿಗುವುದಿಲ್ಲ. ಆದರೂ ಕ್ಯಾಬೇಜ್ ಮಾತ್ರ ಬಿಟ್ಟಿಲ್ಲ. ಸಾಲದ ಕೂಪದಲ್ಲಿ ಬಿದ್ದಿದ್ದ ನಮ್ಮನ್ನು ಕ್ಯಾಬೇಜ್ ಕೋಟ್ಯಧೀಶರನ್ನಾಗಿ ಮಾಡಿದೆ. ಹಾಗಾಗಿ, ಮನೆ, ಬೈಕ್ ಮೇಲೆ "ಎಲ್ಲಾ ಕ್ಯಾಬೇಜ್ ಪುಣ್ಯದಫಲ" (ಸಗಳಿ ಕ್ಯಾಬೇಜಾಚಿ ಪುಣ್ಯಾಯಿ) ಎಂದು ಬರೆಸಿದ್ದೇನೆ. ಕ್ಯಾಬೇಜ್ ನಮ್ಮ ಪ್ರಾಣ. ನಮ್ಮ ಮನೆಯಲ್ಲಿ ಮದುವೆ ಸೇರಿ ಯಾವುದೇ ಕಾರ್ಯಕ್ರಮ ಇದ್ದರೂ ಊಟದಲ್ಲಿ ಕ್ಯಾಬೇಜ್ ಪಲ್ಲೆ ಮಾಡಿಸುತ್ತೇವೆ" ಎಂದು ವಿವರಿಸಿದರು.
ನಾಗೇಶ್ ತಾಯಿಯ ಹರ್ಷ: "ಕ್ಯಾಬೇಜ್ನಿಂದ ಮಗಳನ್ನು ಒಳ್ಳೆಯ ಮನೆತನಕ್ಕೆ ಮದುವೆ ಮಾಡಿ ಕೊಟ್ಟೆವು. ನಮ್ಮ ಸಣ್ಣ ಮಗ ಸಾಫ್ಟವೇರ್ ಇಂಜಿನಿಯರ್ ಆದ. ಇಂಜಿನಿಯರ್ ಸೊಸೆ ಸಿಕ್ಕಳು. 2 ಎಕರೆ ಹೊಲ ಖರೀದಿಸಿದೆವು. ಕ್ಯಾಬೇಜ್ನಿಂದಲೇ ನಮ್ಮ ಮನೆತನ ಮೇಲೆ ಬಂತು. ಕೋಟ್ಯಧೀಶರೂ ಆಗಿದ್ದು, ನಾವೆಲ್ಲಾ ತುಂಬಾ ಖುಷಿಯಿಂದ ಬಾಳುತ್ತಿದ್ದೇವೆ. ಹಾಗಾಗಿ, ಮನೆಯ ಪಾತ್ರೆಗಳು ಸೇರಿ ಎಲ್ಲಾ ಸಾಮಾನುಗಳ ಮೇಲೂ ಸಗಳಿ ಕ್ಯಾಬೇಜಾಚಿ ಪುಣ್ಯಾಯಿ ಅಂತಾನೇ ಬರೆಸಿದ್ದೇವೆ" ಎಂದು ನಾಗೇಶ ತಾಯಿ ಮಂಗಲ್ ದೇಸಾಯಿ ಹರ್ಷ ವ್ಯಕ್ತಪಡಿಸಿದರು.
ನಾವೆಲ್ಲ ಇವರನ್ನ ಕ್ಯಾಬೇಜ್ ನಾಗಣ್ಣ ಅಂತಾನೇ ಕರೆಯುತ್ತೇವೆ; ರೈತ ಮುಖಂಡ ಅಪ್ಪಾಸಾಹೇಬ್ ದೇಸಾಯಿ ಮಾತನಾಡಿ, "ಇಡೀ ಊರು ಕ್ಯಾಬೇಜ್ ನಾಗಣ್ಣ ಅಂತಾನೇ ಕರೆಯುತ್ತದೆ. ರಾತ್ರಿ - ಹಗಲು ಎನ್ನದೇ ಮಣ್ಣಿನ ಜೊತೆ ಮಣ್ಣಾಗಿ ದುಡಿಯುತ್ತಾರೆ. ನಿರಂತರ ಕಷ್ಟಪಟ್ಟು ದುಡಿಯುವುದರಿಂದ ಅವರಿಗೆ ಒಳ್ಳೆಯ ಪ್ರತಿಫಲ ಸಿಕ್ಕಿದೆ. ಎಲ್ಲ ರೈತರಿಗೂ ನಾಗೇಶ ಮಾದರಿ ಆಗಿದ್ದಾರೆ" ಎಂದು ಅಭಿಪ್ರಾಯಪಟ್ಟರು.
ಒಟ್ಟಿನಲ್ಲಿ ಕೃಷಿಯಲ್ಲೂ ಕೋಟಿ ಕೋಟಿ ಆದಾಯಗಳಿಸಬಹುದು ಎಂಬುದನ್ನು ನಿರೂಪಿಸಿರುವ ಕ್ಯಾಬೇಜ್ ನಾಗೇಶ ಅವರು ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಕ್ಯಾಬೇಜ್ ಬೆಳೆಯುವ ಬಗ್ಗೆ ಯಾರಿಗಾದ್ರೂ ಮಾಹಿತಿ ಬೇಕಿದ್ದರೆ ನಾಗೇಶ ದೇಸಾಯಿ ಅವರ ಮೊ.ನಂ-9886059041 ಸಂಪರ್ಕಿಸಬಹುದು.