ಕೀವ್(ಉಕ್ರೇನ್): ತಮ್ಮನ್ನು ಸರ್ವಾಧಿಕಾರಿ ಎಂದು ಟೀಕಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ತಿರುಗೇಟು ನೀಡಿದ್ದಾರೆ. "ನಾನು ಶಾಶ್ವತವಾಗಿ ಅಧ್ಯಕ್ಷ ಸ್ಥಾನದಲ್ಲಿ ಕೂರಲು ಬಯಸುವುದಿಲ್ಲ. 'ನ್ಯಾಟೋ'(NATO)ದಲ್ಲಿ ಉಕ್ರೇನ್‌ಗೆ ಸ್ಥಾನ ನೀಡಿದರೆ, ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಾನು ಸಿದ್ಧ" ಎಂದು ಹೇಳಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧ ಮೂರನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಝೆಲೆನ್ಸ್ಕಿ, "ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸಲು ತಾನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಸಿದ್ಧ. ದಶಕಗಳ ಕಾಲ ಅಧಿಕಾರಕ್ಕೆ ಅಂಟಿಕೊಂಡು ಉಳಿಯಲು ನಾನು ಬಯಸುವುದಿಲ್ಲ" ಎಂದರು.
NATO is the most cost-effective option for preventing another war. It is the simplest and most logical solution.
— Volodymyr Zelenskyy / Володимир Зеленський (@ZelenskyyUa) February 23, 2025
If Ukraine does not join NATO, we will have to create NATO within Ukraine, which means maintaining an army strong enough to repel aggression, financing it, producing…
"ನನಗೆ ಅಧಿಕಾರವಲ್ಲ, ಉಕ್ರೇನ್ನ ಭದ್ರತೆ ಪ್ರಮುಖ ವಿಷಯ. ಮೊದಲು ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಿ. ದೇಶದಲ್ಲಿ ಶಾಂತಿ ಮರಳಿದರೆ, ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಸಿದ್ಧ. ಇದರ ಬದಲಿಗೆ, ಉಕ್ರೇನ್‌ಗೆ ನ್ಯಾಟೋ ಸದಸ್ಯತ್ವ ನೀಡಬೇಕು" ಎಂದು ಅವರು ಬೇಡಿಕೆ ಇಟ್ಟರು.
"ಯುದ್ಧ ಕೊನೆಗೊಳ್ಳಲು ಅಮೆರಿಕ ಮಧ್ಯಸ್ಥಿಕೆ ವಹಿಸಲಿ. ಆದರೆ, ಉಕ್ರೇನಿಯನ್ ನಾಗರಿಕರಿಗೆ ನಷ್ಟ ಉಂಟುಮಾಡುವ ಭದ್ರತಾ ಒಪ್ಪಂದವನ್ನು ಒಪ್ಪಿಕೊಳ್ಳುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ಜೊತೆ ಖನಿಜ ಒಪ್ಪಂದ: "ಉಕ್ರೇನ್‌ಗೆ ಅಮೆರಿಕ ಮಿಲಿಟರಿ ಸಹಾಯ ಮಾಡಿದೆ. ಅದು ಈವರೆಗೂ ಕೊಟ್ಟಿದ್ದು ಸಾಲವಲ್ಲ, ಅನುದಾನ. ಇದಕ್ಕೆ ಪ್ರತಿಯಾಗಿ ನಮ್ಮ ದೇಶದಲ್ಲಿ ಖನಿಜ ಸಂಪತ್ತನ್ನು ಯಾಚಿಸುತ್ತಿದೆ. ಯುದ್ಧ ನಿಲುಗಡೆ ಬಳಿಕ ಈ ಬಗ್ಗೆ ಒಪ್ಪಂದ ಮಾಡಿಕೊಳ್ಳೋಣ. ಅದಕ್ಕೂ ತುರ್ತಾಗಿ ಮೊದಲು ಯುದ್ಧ ಕೊನೆಗಾಣಬೇಕು" ಎಂದು ಅವರು ತಿಳಿಸಿದ್ದಾರೆ.
ಯುದ್ಧ ಆರಂಭವಾಗಿದ್ದು ಹೀಗೆ..: ಉಕ್ರೇನ್-ರಷ್ಯಾ ನಡುವೆ 2014ರಿಂದಲೂ ಸಂಬಂಧ ಹಳಸಿದೆ. ದೇಶದ ಭದ್ರತೆಗೆ 'ನ್ಯಾಟೋ' ಸದಸ್ಯತ್ವ ಅಗತ್ಯ ಎಂಬ ಝೆಲೆನ್ಸ್ಕಿ ಬೇಡಿಕೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಕೆರಳಿಸಿತು. ನ್ಯಾಟೊ ವಿರೋಧಿಯಾದ ರಷ್ಯಾ ತನ್ನ ಗಡಿಯಲ್ಲಿ ಅದರ ವಿಸ್ತರಣೆ ಬಯಸದೆ, 2022ರ ಫೆಬ್ರವರಿ 24ರಂದು ಉಕ್ರೇನ್ ಮೇಲೆ ಯುದ್ಧ ಘೋಷಿಸಿತ್ತು.
ಉಕ್ರೇನ್ ಕೆಲವೇ ದಿನಗಳಲ್ಲಿ ಶರಣಾಗಲಿದೆ ಎಂದು ಅಧ್ಯಕ್ಷ ಪುಟಿನ್ ಭಾವಿಸಿದ್ದರು. ಆದರೆ, ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನೆರವಿನಿಂದ ಉಕ್ರೇನ್ ಕಳೆದ ಮೂರು ವರ್ಷಗಳಿಂದ ರಷ್ಯಾ ವಿರುದ್ಧ ಸೆಣಸಾಡುತ್ತಿದೆ. ಅಮೆರಿಕ ಮಾಜಿ ಅಧ್ಯಕ್ಷ ಜೋ ಬೈಡನ್ ಸರ್ಕಾರವು ಶಸ್ತ್ರಾಸ್ತ್ರಗಳ ಸಹಾಯ ನೀಡಿತ್ತು. ಆದಾಗ್ಯೂ, ರಷ್ಯಾವು ಅನೇಕ ಉಕ್ರೇನಿಯನ್ ಪ್ರದೇಶಗಳನ್ನು ವಶಪಡಿಸಿಕೊಂಡಿದೆ.
ಉಕ್ರೇನ್‌ಗೆ ನೆರವು ನಿಲ್ಲಿಸಿ, ಷರತ್ತು ಹಾಕಿದ ಟ್ರಂಪ್: ಕಳೆದ ಮೂರು ವರ್ಷಗಳಲ್ಲಿ ಎರಡೂ ಕಡೆಗಳಲ್ಲಿ ಅಪಾರ ಜೀವ ಮತ್ತು ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಇದೀಗ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದಿದ್ದು, ಉಕ್ರೇನ್‌ಗೆ ನೀಡುತ್ತಿದ್ದ ನೆರವನ್ನು ನಿಲ್ಲಿಸಿದ್ದಾರೆ. ನೆರವು ಬೇಕಾದಲ್ಲಿ ತಮ್ಮೊಂದಿಗೆ ಖನಿಜ ಒಪ್ಪಂದಕ್ಕೆ ಸಹಿ ಹಾಕಬೇಕೆಂದು ಷರತ್ತು ವಿಧಿಸಿದ್ದಾರೆ.
ಇದನ್ನೂ ಓದಿ: 'ಝೆಲೆನ್ಸ್ಕಿ ಪಾತ್ರವಿಲ್ಲದೆಯೇ ಉಕ್ರೇನ್ ಯುದ್ಧ ನಿಲ್ಲಿಸಬಲ್ಲೆ': ಟ್ರಂಪ್ ಬೆದರಿಕೆ
ರಷ್ಯಾ ಮೇಲೆ ಉಕ್ರೇನ್ 9/11 ಮಾದರಿ ಡ್ರೋನ್ ದಾಳಿ: ಬಹುಮಹಡಿ ಕಟ್ಟಡಗಳಿಗೆ ಹಾನಿ