ರಾಮನಗರ: ಚನ್ನಪಟ್ಟಣ ತಾಲೂಕಿನ ಗೌಡಗೆರೆಯ ಚಾಮುಂಡೇಶ್ವರಿ ದೇವಾಲಯಕ್ಕೆ ಇಂದು ನಟ ದರ್ಶನ್ ಅವರ ತಾಯಿ ಮೀನಾ ತೂಗುದೀಪ ಭೇಟಿ ನೀಡಿ, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಕುಟುಂಬಸ್ಥರೊಂದಿಗೆ ಆಗಮಿಸಿದ್ದ ಮೀನಾ ತೂಗುದೀಪ, ಪುತ್ರ ದರ್ಶನ್ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿದರು. ಸಂಕಷ್ಟಗಳನ್ನು ಪರಿಹರಿಸುವಂತೆ ಬಸಪ್ಪನ ಬಳಿ ಪ್ರಾರ್ಥಿಸಿದರು. ಮೀನಾ ತೂಗುದೀಪ ಅವರಿಗೆ ಬಸಪ್ಪ ತನ್ನ ಬಲಗಾಲಿನಿಂದ ಆಶೀರ್ವಾದ ಮಾಡಿತು.
ವಿಶ್ವದಲ್ಲೇ ಅತಿ ಎತ್ತರದ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹ: ವಿಶ್ವದಲ್ಲೇ ಅತಿ ಎತ್ತರದ ಪಂಚಲೋಹದ ಚಾಮುಂಡೇಶ್ವರಿ ತಾಯಿಯ ವಿಗ್ರಹವನ್ನು ರಾಮನಗರ ಜಿಲ್ಲೆಯ ಚನ್ನಪಟ್ಟಣದ ಗೌಡಗೆರೆ ಗ್ರಾಮದಲ್ಲಿ 2021ರಲ್ಲಿ ನಿರ್ಮಿಸಲಾಗಿತ್ತು. 60 ಅಡಿ ಎತ್ತರದ ವಿಗ್ರಹ ಇದಾಗಿದೆ. ದೇಶದ ಮೊದಲ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹವೂ ಹೌದು. ದೇವಿಗೆ 18 ಕೈಗಳಿರುವುದು ಮತ್ತೊಂದು ವಿಶೇಷ.
ಮುಸ್ಲಿಂ ಕಲಾವಿದರಿಂದ ತಯಾರಾಗಿದ್ದ ಪಂಚಲೋಹದ ವಿಗ್ರಹ: ಸುಮಾರು 35,000 ಕೆ.ಜಿಗೂ ಹೆಚ್ಚು ತೂಕವಿರುವ ಈ ವಿಗ್ರಹವನ್ನು ಚಿನ್ನ, ಬೆಳ್ಳಿ, ಹಿತ್ತಾಳೆ, ಕಂಚು ಮತ್ತು ತಾಮ್ರಗಳಿಂದ ತಯಾರಿಸಲಾಗಿದೆ. ವಿಗ್ರಹವನ್ನು ಮುಸ್ಲಿಂ ಸಮುದಾಯದ 20 ಜನರು ಕಳೆದ ಮೂರು ವರ್ಷಗಳಲ್ಲಿ ತಯಾರು ಮಾಡಿದ್ದಾರೆ. ಸುಮಾರು ಮೂರು ವರ್ಷಗಳ ಕಾಲ ವಿಗ್ರಹವನ್ನು ಸಿದ್ಧಪಡಿಸಲಾಗಿದೆ.
ಗೌಡಗೆರೆ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಮಕ್ಕಳಿಲ್ಲದವರು ಇಲ್ಲಿಗೆ ಬಂದು ದೇವಿಯ ದರ್ಶನ ಪಡೆದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ಇದನ್ನೂ ಓದಿ: ಗೌಡಗೆರೆ ಚಾಮುಂಡೇಶ್ವರಿ ಸನ್ನಿಧಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ & ಏಷ್ಯಾ ಬುಕ್ ಆಫ್ ರೆಕಾರ್ಡ್ ಗೌರವ