ಬೆಂಗಳೂರು: ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖಾ ನೌಕರರ ಸಂಘ 15 ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಗುರುವಾರ(ಫೆ.27) ಹಮ್ಮಿಕೊಂಡಿದ್ದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಮುಂದೂಡಿದೆ.
ಇಲಾಖಾ ಅಧಿಕಾರಿ, ನೌಕರ ಸಂಘದ ಗಮನಕ್ಕೆ ತರದೆ ನೋಂದಣಿ ಅಧಿನಿಯಮಕ್ಕೆ ತಿದ್ದುಪಡಿ ತರುವುದು, ಕಚೇರಿ ಸಮಯ ವಿಸ್ತರಣೆ, ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಕೋರುವ ನೆಪದಲ್ಲಿ ಕಿರುಕುಳ, ಸಿಬ್ಬಂದಿ ಕೊರತೆ ಸೇರಿದಂತೆ 15 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖಾ ನೌಕರರ ಸಂಘ ಫೆ.27ರಂದು ಸಾರ್ವಜನಿಕ ಸೇವೆ ಬಂದ್ ಮಾಡಿ ರಾಜ್ಯವ್ಯಾಪಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿತ್ತು.
ಮಂಗಳವಾರ ಸಂಘದ ಮನವಿಗೆ ಸ್ಪಂದಿಸಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ಎ.ದಯಾನಂದ್, ಲಿಖಿತ ಭರವಸೆ ನೀಡಿದ್ದಾರೆ. ಅಲ್ಲದೆ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ, ರಾಜ್ಯ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ ಮತ್ತು ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖಾ ನೌಕರರ ಸಂಘದ ಅಧ್ಯಕ್ಷ ಬಿ.ಎಚ್.ಶಂಕರೇಗೌಡ, ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಮಹದೇವ್, ಸಿಎಂ ವಿಶೇಷ ಅಧಿಕಾರಿ ತಿರ್ಲಾಪುರ ನೇತೃತ್ವದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿ ಇಲಾಖೆಯ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಬಗೆಹರಿಸುವಂತೆ ಮನವಿ ಮಾಡಿದರು.
ಬಹುತೇಕ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಸಿಎಸ್ ಶಾಲಿನಿ ರಜನೀಶ್, ಆಶ್ವಾಸನೆ ನೀಡಿದ್ದಾರೆ. ಅಲ್ಲದೆ, ಇಲಾಖೆಯ ಅಧಿಕಾರಿ, ಸಿಬ್ಬಂದಿ ಸಂಬಂಧಿಸಿದಂತೆ ಪ್ರತಿಯೊಂದು ಸಮಸ್ಯೆಗಳ ಪಟ್ಟಿ ಮಾಡಿ ದಾಖಲೆಸಮೇತ ಸಲ್ಲಿಸುವಂತೆ ಸೂಚಿಸಿದ್ದಾರೆ.
ಆದ್ದರಿಂದ ಗುರುವಾರ ಕೈಗೊಂಡಿದ್ದ ಅನಿಷ್ಟಾವಧಿ ಮುಷ್ಕರವನ್ನು ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಇಲಾಖೆ ಅಧಿಕಾರಿ, ಸಿಬ್ಬಂದಿಯ ಸಮಸ್ಯೆ ಬಗೆಹರಿಸದೆ ಇದ್ದರೆ ಮತ್ತೆ ಮುಷ್ಕರಕ್ಕೆ ಕರೆ ನೀಡುವುದಾಗಿ ಸಂಘದ ಅಧ್ಯಕ್ಷ ಬಿ.ಎಚ್.ಶಂಕರೇಗೌಡ ಮಾಹಿತಿ ನೀಡಿದ್ದಾರೆ.