ಭಂಡಾರಾ, ಮಹಾರಾಷ್ಟ್ರ: ಭಂಡಾರಾ ಜಿಲ್ಲೆಯ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ 8 ಜನ ಮೃತಪಟ್ಟ ಘಟನೆ ನಡೆದಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಬಗ್ಗೆ ಖಚಿತಪಡಿಸಿದ್ದಾರೆ. ನಾಗ್ಪುರದಲ್ಲಿ ಕೈಗಾರಿಕಾ ಅಭಿವೃದ್ಧಿ ಸಂಘ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು.
ಪ್ರಾಥಮಿಕ ಮಾಹಿತಿ ಪ್ರಕಾರ ಘಟನೆಯಲ್ಲಿ 8 ಜನ ಮೃತಪಟ್ಟಿರುವ ಮಾಹಿತಿ ಇದ್ದು, ಏಳು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದ ತೀವ್ರತೆಗೆ ಘಟಕದ ಮೇಲ್ಛಾವಣಿ ಕುಸಿದಿರುವುದಾಗಿ ಹಾಗೂ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಗಳು ನಡೆಯುತ್ತಿರುವುದಾಗಿ ಜಿಲ್ಲಾ ಹಿರಿಯ ಅಧಿಕಾರಿಯೊಬ್ಬರು ತಮಗೆ ಮಾಹಿತಿ ನೀಡಿರುವುದಾಗಿ ಗಡ್ಕರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.
#WATCH | Nagpur | Blast at Ordnance Factory in Bhandara, Union Minister Nitin Gadkari says, " a big blast has occurred in the ordnance factory in bhandara. in the incident, 8 people have died and 7 people are injured, as per preliminary information."
— ANI (@ANI) January 24, 2025
union minister nitin gadkari… pic.twitter.com/fnn9n3YmJV
ಸ್ಫೋಟದ ತೀವ್ರತೆ ಸುಮಾರು 5 ಕಿಲೋಮೀಟರ್‌ಗಳವರೆಗೆ ಶಬ್ದ ಕೇಳಿ ಬಂದಿದ್ದು, ಘಟನೆ ನಡೆದ ಪ್ರದೇಶದಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡಿತ್ತು. ಸ್ಫೋಟದ ಸಮಯದಲ್ಲಿ 14 ಜನರಿದ್ದು, ಕೆಲವರನ್ನು ರಕ್ಷಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಭಂಡಾರದಲ್ಲಿರುವ ಆರ್ಡನೆನ್ಸ್ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದ ಬಗ್ಗೆ ತಿಳಿದು ತೀವ್ರ ದುಃಖವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ ಸೂಚಿಸಿದ್ದಾರೆ.
ಬೆಳಗ್ಗೆ 10.30ರ ಸುಮಾರಿಗೆ ಕಾರ್ಖಾನೆಯ ಎಲ್‌ಟಿಪಿ ವಿಭಾಗದಲ್ಲಿ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆ ಎಷ್ಟು ಹೆಚ್ಚಾಗಿತ್ತೆಂದರೆ 5 ಕಿ.ಮೀ ದೂರದಿಂದ ಅದು ಕೇಳಿಸಿತು. ದೂರದಿಂದ ಸೆರೆಹಿಡಿಯಲಾದ ವಿಡಿಯೋದಲ್ಲಿ ಕಾರ್ಖಾನೆಯಿಂದ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಸಂಜಯ್ ಕೋಲ್ಟೆ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಎಸ್ಡಿಆರ್ಎಫ್ ಮತ್ತು ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್ ತಂಡವನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಜಿಲ್ಲಾಡಳಿತವು ಬಹು ತಂಡಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಮಾಹಿತಿ ನೀಡಿದ್ದಾರೆ.
ಭಂಡಾರ ಜಿಲ್ಲೆಯ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟ ದುರದೃಷ್ಟಕರ ಎಂದು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜಮ್ಮು - ಕಾಶ್ಮೀರದಲ್ಲಿ ನೆಲಬಾಂಬ್ ಸ್ಫೋಟ: 6 ಸೈನಿಕರಿಗೆ ಗಾಯ, ಆಸ್ಪತ್ರೆಗೆ ದಾಖಲು - SIX ARMY SOLDIERS INJURED