How to make Brinjal chutney at Home: ಬದನೆಕಾಯಿ ಪಲ್ಯ ಅಂದ್ರೆ ಬಹುತೇಕರು ಇಷ್ಟಪಟ್ಟು ಸೇವಿಸುತ್ತಾರೆ. ಈಗಾಗಲೇ ನೀವು ವಿವಿಧ ಬಗೆಯ ಚಟ್ನಿಗಳನ್ನು ಸಿದ್ಧಪಡಿಸಿರಬಹುದು. ಇದೀಗ ನಾವು ನಿಮಗಾಗಿ 'ಬದನೆಕಾಯಿ ಚಟ್ನಿ' ರೆಸಿಪಿಯನ್ನು ತಂದ್ದಿದ್ದೇವೆ. ನೀವು ಒಮ್ಮೆಯಾದರೂ ಈ ರೆಸಿಪಿಯನ್ನು ಪ್ರಯತ್ನಿಸಿ. ಇದರ ರುಚಿಯು ಕೂಡ ತುಂಬಾ ಚೆನ್ನಾಗಿರುತ್ತದೆ.
ಒಮ್ಮೆ ರುಚಿ ನೋಡಿದರೆ ಸಾಕು ಪದೇ ಪದೆ ತಿನ್ನಬೇಕು ಅನಿಸುತ್ತದೆ. ಈ ಚಟ್ನಿಯು ಹುಳಿ ಹಾಗೂ ಖಾರವನ್ನು ಒಳಗೊಂಡಿದೆ. ಈ ರೆಸಿಪಿಯು ಗ್ರಾಮೀಣ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಬಿಸಿ ಅನ್ನದೊಂದಿದೆ ಬದನೆಕಾಯಿ ಚಟ್ನಿ ಸೇವಿಸಿದರೆ ರುಚಿ ಅದ್ಭುತವಾಗಿರುತ್ತದೆ. ಸೂಪರ್ ರುಚಿಯ ರೆಸಿಪಿಗೆ ಬೇಕಾಗುವ ಪದಾರ್ಥಗಳೇನು ಹಾಗೂ ಸಿದ್ಧಪಡಿಸುವುದು ಹೇಗೆ ಎಂಬುದನ್ನು ನೋಡೋಣ.
ಬದನೆಕಾಯಿ ಚಟ್ನಿಗೆ ಬೇಕಾಗಿರುವ ಪದಾರ್ಥಗಳೇನು?:
- ಬಿಳಿ ಬದನೆಕಾಯಿ - 4
- ಈರುಳ್ಳಿ - 1
- ಹಸಿಮೆಣಸಿನಕಾಯಿ - 2
- ಕೊತ್ತಂಬರಿ ಸೊಪ್ಪು - ಸ್ವಲ್ವ
- ಶುಂಠಿ - ಅರ್ಧ ಇಂಚಿನ ಪೀಸ್
- ಉಪ್ಪು - ರುಚಿಗೆ ಬೇಕಾಗುವಷ್ಟು
- ಅರಿಶಿನ - ಅರ್ಧ ಟೀಸ್ಪೂನ್
- ಹುಣಸೆ ಹಣ್ಣು - ನಿಂಬೆ ರಸ
- ಪಡಿ ಮಾಡಿದ ಬೆಲ್ಲ - 2 ಟೀಸ್ಪೂನ್
ಒಗ್ಗರಣೆಗೆ ಬೇಕಾದ ಸಾಮಗ್ರಿಗಳು:
- ಎಣ್ಣೆ - 2 ಟೀಸ್ಪೂನ್
- ಸಾಸಿವೆ - ಅರ್ಧ ಟೀಸ್ಪೂನ್
- ಮೆಂತ್ಯ - ಅರ್ಧ ಟೀಸ್ಪೂನ್
- ಕಡಲೆಕಾಯಿ - 1 ಟೀಸ್ಪೂನ್
- ಒಣಮೆಣಸಿನಕಾಯಿ - 2
- ಬೆಳ್ಳುಳ್ಳಿ ಎಸಳು - 6
- ಕರಿಬೇವು - 2 ಎಲೆಗಳು
- ಇಂಗು - ಒಂದು ಚಿಟಿಕೆ
ಬದನೆಕಾಯಿ ಚಟ್ನಿ ಸಿದ್ಧಪಡಿಸುವ ವಿಧಾನ:
- ಮೊದಲು ಹುಣಸೆಹಣ್ಣನ್ನು ತೊಳೆದು ಸಣ್ಣ ಬಟ್ಟಲಿನಲ್ಲಿ ನೆನೆಸಿ ಇಡಬೇಕು. ನೀವು ಮಧ್ಯಮ ಗಾತ್ರದ ಬಿಳಿ ಬದನೆಕಾಯಿ ತೆಗೆದುಕೊಳ್ಳಿ. ಅವುಗಳಿಗೆ ಸ್ವಲ್ಪ ಎಣ್ಣೆ ಹಚ್ಚಬೇಕಾಗುತ್ತದೆ.
- ಬಳಿಕ, ಒಲೆಯ ಮೇಲೆ ಗ್ರಿಲ್ ಇಡಬೇಕು. ಅದರ ಮೇಲೆ ಎಣ್ಣೆ ಸವರಿದ ಬದನೆಕಾಯಿಗಳನ್ನು ಇಡಿ. ಅವುಗಳನ್ನು ಕಡಿಮೆ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿ. ಇವು ತೊಗಟೆ ಕಪ್ಪಾಗುವವರೆಗೆ ತಿರುಗಿಸುತ್ತಾ ಫ್ರೈ ಮಾಡಬೇಕು.
- ಹುರಿದ ಬಳಿಕ ಇವೆಲ್ಲವುಗಳನ್ನು ಒಂದು ಪ್ಲೇಟ್ಯಲ್ಲಿ ತೆಗೆದುಕೊಂಡು ಸ್ವಲ್ಪ ನೀರು ಸಿಂಪಡಿಸಿ. ಬದನೆಕಾಯಿಗಳ ಮೇಲಿನ ಕಪ್ಪಾದ, ಸುಟ್ಟ ತೊಗಟೆಯನ್ನು ತೆಗೆದುಹಾಕಬೇಕು.
- ಅವುಗಳನ್ನು ಫೋರ್ಕ್ ಇಲ್ಲವೇ ಚಮಚದಿಂದ ನಿಧಾನವಾಗಿ ಮ್ಯಾಶ್ ಮಾಡಿಕೊಂಡು ಪಕ್ಕಕ್ಕೆ ಇಡಿ. ಅಡುಗೆಗೆ ಬೇಕಾದ ಈರುಳ್ಳಿ ಹಾಗೂ ಹಸಿ ಮೆಣಸಿನಕಾಯಿಗಳನ್ನು ಸಣ್ಣಗೆ ಕಟ್ ಮಾಡಿ ಪಕ್ಕಕ್ಕೆ ಇಟ್ಟುಕೊಳ್ಳಬೇಕಾಗುತ್ತದೆ.
- ಒಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದರೊಳಗೆ ಅವೆಲ್ಲವನ್ನೂ ಹುರಿದ ಬದನೆಕಾಯಿ, ಸಣ್ಣಗೆ ಕಟ್ ಮಾಡಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಸಣ್ಣಗೆ ಹೆಚ್ಚಿದ ಶುಂಠಿ ಪೀಸ್ಗಳು, ಉಪ್ಪು, ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ.
- ಈ ಹಿಂದೆ ನೆನೆಸಿ ಇಟ್ಟಿರುವ ಹುಣಸೆಹಣ್ಣಿನಿಂದ ರಸ ಹೊರತೆಗೆದು ಸಿದ್ಧವಾಗಿ ಇಟ್ಟುಕೊಳ್ಳಿ.
- ಇದೀಗ ಚಟ್ನಿಗಾಗಿ ಒಗ್ಗರಣೆಗೆ ನೀಡಬೇಕಾಗುತ್ತದೆ. ಈಗ ಒಲೆಯ ಮೇಲೆ ಪ್ಯಾನ್ ಇಟ್ಟು ಎಣ್ಣೆ ಹಾಕಿ. ಎಣ್ಣೆ ಸ್ವಲ್ಪ ಬಿಸಿಯಾದ ಬಳಿಕ ಸಾಸಿವೆ, ಮೆಂತ್ಯ, ಕಡಲೆ, ಒಣ ಮೆಣಸಿನಕಾಯಿ ಹಾಕಿ ಕೆಂಪಗಾಗುವವರೆಗೆ ಫ್ರೈ ಮಾಡಿ.
- ಬೆಂದ ನಂತರ ಜಜ್ಜಿರುವ ಬೆಳ್ಳುಳ್ಳಿ ಎಸಳು, ಕರಿಬೇವು ಮತ್ತು ಇಂಗು ಸೇರಿಸಿ ಸ್ವಲ್ಪ ಹೊತ್ತು ಫ್ರೈ ಮಾಡಿ. ಬಳಿಕ ಒಲೆಯಿಂದ ಹೊರಗೆ ತೆಗೆಯಿರಿ.
- ಈಗ ಒಂದು ಪ್ಯಾನ್‌ನಲ್ಲಿ ಹುಣಸೆ ರಸ, ಬದನೆಕಾಯಿ ಮಿಶ್ರಣ ಮತ್ತು ತುರಿದ ಬೆಲ್ಲವನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕಾಗುತ್ತದೆ. ಇದೀಗ ರುಚಿಕರವಾದ ಬದನೆಕಾಯಿ ಚಟ್ನಿ ಸಿದ್ಧ!