ವಾಷಿಂಗ್ಟನ್(ಅಮೆರಿಕ): 81 ವರ್ಷದ ಅಧ್ಯಕ್ಷ ಜೋ ಬೈಡನ್ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ. ನವೆಂಬರ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಉಮೇದುವಾರಿಕೆಯನ್ನು ತಾವು ಬೆಂಬಲಿಸುವುದಾಗಿ ಹೇಳಿದ್ದಾರೆ.
ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಬೈಡನ್, 'ಜನವರಿ 2025ರವರೆಗೆ ದೇಶದ ಅಧ್ಯಕ್ಷರಾಗಿ ಮತ್ತು ಸೇನಾಪಡೆಗಳ ಕಮಾಂಡರ್-ಇನ್-ಚೀಫ್ ಆಗಿ ಉಳಿಯುತ್ತೇನೆ. ಅಮೆರಿಕದ ಅಧ್ಯಕ್ಷನಾಗಿ ಸೇವೆ ಸಲ್ಲಿಸುವುದು ನನಗೆ ಹೆಮ್ಮೆಯ ಸಂಗತಿ. ದೇಶ ಮತ್ತು ಡೆಮಾಕ್ರಟಿಕ್ ಪಕ್ಷದ ಪರಮೋಚ್ಚ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾನು ಅಧ್ಯಕ್ಷೀಯ ಚುನಾವಣೆಯಿಂದ ಉಮೇದುವಾರಿಕೆಯನ್ನು ಹಿಂಪಡೆಯಲು ನಿರ್ಧರಿಸಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ಆರೋಗ್ಯ ಮತ್ತು ಸ್ಮರಣಶಕ್ತಿಯ ಕೊರತೆ ಎದುರಿಸುತ್ತಿರುವ ಬೈಡನ್ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಸ್ವಪಕ್ಷೀಯರಿಂದಲೇ ಒತ್ತಡವಿತ್ತು ಎಂಬುದು ಗಮನಾರ್ಹ.
ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಹಾಗು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ದೌರ್ಬಲ್ಯಗಳನ್ನು ಉಲ್ಲೇಖಿಸಿ ಬೈಡನ್ ಮೇಲೆ ಟೀಕಾಸಮರ ನಡೆಸಿದ್ದರು. ಈ ಕಾರಣದಿಂಲೂ ಅನೇಕ ಸಮೀಕ್ಷೆಗಳು ಬೈಡನ್ ಅವರು ಟ್ರಂಪ್‌ಗಿಂತ ದುರ್ಬಲ ಅಭ್ಯರ್ಥಿ ಎಂದು ಹೇಳಿದ್ದವು.
ಇತ್ತೀಚೆಗೆ, ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಬೈಡನ್ ಅವರ ಉಮೇದುವಾರಿಕೆಯ ಬಗ್ಗೆ ಪ್ರಶ್ನೆಗಳನ್ನೆತ್ತುವ ಮೂಲಕವೂ ಮುಂದಿನ ಅವಧಿಗೆ ಉಮೇದುವಾರಿಕೆ ತೊರೆಯುವಂತೆ ಸಲಹೆ ನೀಡಿದ್ದರು. ಒಬಾಮಾ ಅಭಿಪ್ರಾಯ ಹೆಚ್ಚು ಮಹತ್ವದ್ದಾಗಿತ್ತು. ಏಕೆಂದರೆ, ಬೈಡನ್ ಅವರು ಒಬಾಮಾ ಅವರೊಂದಿಗೆ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರು.
ಬೈಡನ್ ಅವರು ಚುನಾವಣಾ ಕಣದಿಂದ ಹಿಂದೆ ಸರಿದ ನಂತರ, ಭಾರತೀಯ ಮೂಲದ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆ ಬಲವಾಗಿದೆ. ಇನ್ನೊಂದೆಡೆ, ಚುನಾವಣೆಯಲ್ಲಿ ಮೊದಲ ಕಪ್ಪು ಮಹಿಳೆ ಸ್ಪರ್ಧಿಸುವ ಸಾಧ್ಯತೆಯೂ ಗೋಚರಿಸಿದೆ. ಒಬಾಮಾ ಅವರ ಪತ್ನಿ ಮಿಚೆಲ್ ಒಬಾಮಾ ಅವರ ಹೆಸರೂ ಕೂಡ ಚರ್ಚೆಯಲ್ಲಿದೆ. ಆದರೆ ಒಬಾಮಾ ಈ ಹಿಂದೆ ಇದನ್ನು ನಿರಾಕರಿಸಿದ್ದರು.
ಇದನ್ನೂ ಓದಿ:ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿಯಾಗಲಿದ್ದಾರಾ ಕಮಲಾ ಹ್ಯಾರಿಸ್? ಕುಗ್ಗುತ್ತಿದೆಯಾ ಬೈಡನ್ ವರ್ಚಸ್ಸು? - US Elections