ETV Bharat / state

ರಾಜ್ಯದಲ್ಲಿ ನಕ್ಸಲ್ ಹೋರಾಟ ಸಂಧ್ಯಾಕಾಲದೆಡೆಗೆ: ಮಾಜಿ ನಕ್ಸಲೀಯರಿಗೆ ಸಿಗಬೇಕಿದೆ ಸರ್ಕಾರದ ಪ್ಯಾಕೇಜ್ - NAXALISM IN KARNATAKA

ನಕ್ಸಲೀಯರನ್ನು ಮುಖ್ಯವಾಹಿನಿಗೆ ಕರೆತರಲು ಸರ್ಕಾರ ಘೋಷಿಸಿದ್ದ ವಿಶೇಷ ಪ್ಯಾಕೇಜ್ ಸರಿಯಾಗಿ ತಲುಪಿಲ್ಲ. ಈ ಸಂಬಂಧ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ವರದಿ ಭರತ್​ ರಾವ್​ ಎಂ.

NAXALISM IN KARNATAKA
ಸಾಂದರ್ಭಿಕ ಚಿತ್ರ (ANI)
author img

By ETV Bharat Karnataka Team

Published : Jan 3, 2025, 6:28 PM IST

ಬೆಂಗಳೂರು: ರಾಜ್ಯದ ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ನಿರಂತರ ಕಾರ್ಯಾಚರಣೆ ಫಲವಾಗಿ ನಕ್ಸಲ್ ನಾಯಕ ವಿಕ್ರಂಗೌಡ ಎನ್​ಕೌಂಟರ್ ಬಳಿಕ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಬಹುತೇಕ ಕ್ಷೀಣಿಸಿದೆ. ಬೆರಳಣಿಕೆ ಮಂದಿಯ ಹೋರಾಟದ ಹಾದಿ ಸಂಧ್ಯಾಕಾಲದಲ್ಲಿದೆ. ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಬಂದರೆ ಪರಿಷ್ಕೃತ ಶರಣಾಗತಿ ನೀತಿ ಹಾಗೂ ಪುನರ್ ವಸತಿ ಯೋಜನೆಯಡಿ ವಿವಿಧ ಸೌಲಭ್ಯ ಒದಗಿಸಲು ಬದ್ಧವಾಗಿರುವುದಾಗಿ ಸಿಎಂ ಸಿದ್ದರಾಮಯ್ಯ ಇತ್ತೀಚಿಗೆ ಪುನರುಚ್ಛರಿಸಿದ್ದರು.

ನಕ್ಸಲೀಯರು ಮುಖ್ಯವಾಹಿನಿಗೆ ಬರಲು ಮಾತುಕತೆ ನಡೆಸಲು ಮುಂದಾಗಿದ್ದರೆ, ಈ ಪ್ರಕ್ರಿಯೆಯನ್ನು ಸರ್ಕಾರ ಕಾನೂನಿನ ಚೌಕಟ್ಟಿನಲ್ಲಿ ಸ್ವಾಗತಿಸಿ, ಸಹಾನುಭೂತಿಯಿಂದ ನಡೆದುಕೊಳ್ಳುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದರು. ಇದರ ಬೆನ್ನಲೇ ಶಸ್ತ್ರಾಸ್ತ್ರ ತ್ಯಜಿಸಿ ನಾಗರಿಕ ಸಮಾಜದ ಮುಂದೆ ಶರಣಾಗತಿ ಬಯಸುವವರನ್ನು ಶರಣಾಗತಿ ನೀತಿ ಹಾಗೂ ಪುನರ್ ವಸತಿ ಸಮಿತಿ ಹಾಗೂ ಎಎನ್ಎಫ್ ಅರಣ್ಯ ಪ್ರದೇಶಗಳಲ್ಲಿ ನಿರಂತರ ತಿಳಿವಳಿಕೆ ಮೂಡಿಸುತ್ತಿವೆ. ಎರಡು ದಶಕಗಳ ಹಿಂದೆ 50ಕ್ಕೂ ಹೆಚ್ಚು ನಕ್ಸಲೀಯರು ರಾಜ್ಯದಲ್ಲಿ ನೆಲೆಯೂರಿದ್ದರು. ಇದೀಗ ಈ ಸಂಖ್ಯೆ 7ಕ್ಕೆ ಇಳಿದಿದೆ. ಇವರನ್ನು ಮುಖ್ಯವಾಹಿನಿಗೆ ಕರೆತಂದು ಯಶ ಸಾಧಿಸಿದರೆ ರಾಜ್ಯದಲ್ಲಿ ಸಂಪೂರ್ಣವಾಗಿ ನಕ್ಸಲ್ ಚಟುವಟಿಕೆ ನಿರ್ಮೂಲನೆ ಮಾಡಲು ಸಾಧ್ಯವಾಗಲಿದೆ.

ರಾಜ್ಯದಲ್ಲಿ 2005ರಲ್ಲೇ ನಡೆದಿತ್ತು ನಕ್ಸಲರನ್ನು ಮುಖ್ಯವಾಹಿನಿಗೆ ಕರೆ ತರುವ ಪ್ರಯತ್ನ: ನಕ್ಸಲರನ್ನು ಮುಖ್ಯವಾಹಿನಿಗೆ ಕರೆ ತರಲು ಕರ್ನಾಟಕ ಸರ್ಕಾರ 2005ರಲ್ಲೇ ಆರಂಭಿಕ ಪ್ರಯತ್ನಗಳನ್ನು ಮಾಡಿತ್ತು. ವಿಶೇಷವಾಗಿ ಇಬ್ಬರು ಶಂಕಿತ ಮಹಿಳಾ ನಕ್ಸಲರಾದ ಪಾರ್ವತಿ ಮತ್ತು ಹಾಜಿಬಾ ಅವರನ್ನು ಉಡುಪಿ ಅರಣ್ಯದಲ್ಲಿ ಪೊಲೀಸರು ಗುಂಡಿಕ್ಕಿ ಕೊಂದಿದ್ದರು. ಇದು ಉಡುಪಿ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹರಡಿರುವ ಪಶ್ಚಿಮ ಘಟ್ಟದಲ್ಲಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ನಕ್ಸಲೀಯರ ಪ್ರಭಾವ ಹೆಚ್ಚುತ್ತಿರುವುದನ್ನು ತೋರಿಸಿದೆ. ಅಲ್ಲಿಯವರೆಗೂ ಎಡಪಂಥೀಯವಾದವು ಅಂದಿನ ಅಖಂಡ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ರಾಯಚೂರು ಮತ್ತು ತುಮಕೂರು ಜಿಲ್ಲೆಗಳ ಕೆಲ ಭಾಗಗಳಲ್ಲಿ ಮಾತ್ರ ಕಾಣಿಸಿಕೊಂಡಿತ್ತು.

ನಕ್ಸಲರಿಗೆ ಶರಣಾಗತಿ ಮತ್ತು ಪುನವರ್ಸತಿ ಯೋಜನೆಯಡಿ ಷರತ್ತುಬದ್ದ ಪ್ರೋತ್ಸಾಹ ಧನ
ನಕ್ಸಲರಿಗೆ ಶರಣಾಗತಿ ಮತ್ತು ಪುನವರ್ಸತಿ ಯೋಜನೆಯಡಿ ಷರತ್ತುಬದ್ದ ಪ್ರೋತ್ಸಾಹ ಧನ (ETV Bharat)

ನಕ್ಸಲ್​ ಪುನರ್​​​​​​ವಸತಿ ಯೋಜನೆ: ನಕ್ಸಲ್ ಚಟುವಟಿಕೆಯಿಂದ ದೂರವಾಗಿ ಶರಣಾಗತಿಯಾಗಿ ನಾಗರಿಕ ಸಮಾಜದಲ್ಲಿ ಬದುಕು ಕಟ್ಟಿಕೊಂಡಿರುವ ಮಾಜಿ ನಕ್ಸಲೀಯರಿಗೆ ಸರ್ಕಾರ ಘೋಷಿಸಿದ ವಿಶೇಷ ಪ್ಯಾಕೇಜ್ ಸಿಕ್ಕಿದೆಯಾ ಎಂಬುದನ್ನ ಪ್ರಶ್ನಿಸಿದರೆ ಬಹುತೇಕರಿಂದ ಪೂರ್ಣ ಪ್ರಮಾಣದಲ್ಲಿ ಸಿಕ್ಕಿಲ್ಲ ಎಂಬ ಉತ್ತರ ಬರುತ್ತದೆ. ನಕ್ಸಲೀಯರ ಮೇಲಿನ ಪ್ರಕರಣಗಳ ತ್ವರಿತ ವಿಚಾರಣೆ, ಗುರುತರವಲ್ಲದ ಅಪರಾಧ ಪ್ರಕರಣಗಳಿಂದ ವಜಾ, ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರದ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯಿದೆ.

ಈ ನಿಟ್ಟಿನಲ್ಲಿ ನಕ್ಸಲೀಯರ ವಿರುದ್ಧ ದಾಖಲಾದ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚನೆ ಕೋರಿ ಇತ್ತೀಚೆಗೆ ನಕ್ಸಲ್ ಶರಣಾಗತಿ ಹಾಗೂ ಪುನರ್ ವಸತಿ ಸಮಿತಿಯು ಸರ್ಕಾರಕ್ಕೆ ಶಿಫಾರಸು ಸಲ್ಲಿಸಿತ್ತು. ತಾಂತ್ರಿಕ ಕಾರಣಗಳಿಂದಾಗಿ ವಿಶೇಷ ನ್ಯಾಯಾಲಯ ರಚನೆಗೆ ಸರ್ಕಾರ ಅನುಮತಿ ನೀಡಿಲ್ಲ. ಬದಲಾಗಿ ನಕ್ಸಲ್ ಪೀಡಿತ ಜಿಲ್ಲಾ ವ್ಯಾಪ್ತಿ ನ್ಯಾಯಾಲಯಗಳಲ್ಲಿ ತ್ವರಿತ ವಿಚಾರಣೆಗೆ ಕ್ರಮ ಹಾಗೂ ಉಚಿತ ಕಾನೂನು ಸೇವೆ ನೀಡಲಾಗುವುದು. ಅಲ್ಲದೇ, ಕೊಲೆ, ಕೊಲೆಯತ್ನ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಸೇರಿ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರದ ನಕ್ಸಲೀಯರ ಕೇಸ್​ಗಳ ವಜಾಕ್ಕೆ ನಿಯಾಮನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಮಿತಿಗೆ ಸರ್ಕಾರ ಮೌಖಿಕ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಗ್ರಾಮಸ್ಥರೊಂದಿಗೆ ವಕೀಲ ಕೆ.ಪಿ.ಶ್ರೀಪಾಲ್ ಅವರ ಮಾತುಕತೆ
ಗ್ರಾಮಸ್ಥರೊಂದಿಗೆ ವಕೀಲ ಕೆ.ಪಿ.ಶ್ರೀಪಾಲ್ ಅವರ ಮಾತುಕತೆ (ETV Bharat)

ನಕ್ಸಲ್ ಶರಣಾಗತಿ ಹಾಗೂ ಪುನರ್ ವಸತಿ ಸಮಿತಿಯ ಸದಸ್ಯ ಹಾಗೂ ವಕೀಲ ಕೆ.ಪಿ.ಶ್ರೀಪಾಲ್ ಮಾತನಾಡಿ, ''ನಕ್ಸಲ್ ಚಟುವಟಿಕೆ ಹೆಚ್ಚಾಗಿದ್ದಾಗ ದಾಖಲಾದ ಪ್ರಕರಣಗಳು ಇನ್ನೂ ಇತ್ಯರ್ಥವಾಗಿಲ್ಲ. ಇದುವರೆಗೂ 14 ಮಂದಿ ನಕ್ಸಲೀಯರು ಶರಣಾಗಿದ್ದಾರೆ. ಪ್ರಕರಣಗಳ ತ್ವರಿತಗತಿ ವಿಲೇವಾರಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ವಕೀಲರನ್ನು ನೇಮಿಸಬೇಕು. ಆರ್ಥಿಕ ಸೌಲಭ್ಯ ಜೊತೆಗೆ ಸಬ್ಸಿಡಿ ಅಥವಾ ಬ್ಯಾಂಕ್​ಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸಿದರೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ. ನಿಯಾಮಾನುಸಾರ ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದರೂ ಆದ್ಯತೆ ಮೇರೆಗೆ ಇದನ್ನು ಜಾರಿಗೊಳಿಸಬೇಕು'' ಎಂದರು.

ನಕ್ಸಲ್ ಶರಣಾಗತಿ ನೀತಿಯಲ್ಲೇನಿದೆ? ನಕ್ಸಲರು ಅಥವಾ ಎಡಪಂಥೀಯ ಭಯೋತ್ಪಾದಕರ ಬೆಂಬಲಿಗರು ಹಾಗೂ ಎಡಪಂಥೀಯ ಸಂಘಟನೆಗಳಿಗೆ ಸಂಬಂಧಿಸಿದವರಿಗೆ ಯೋಜನೆ ಅನ್ವಯವಾಗಲಿದೆ. ಭೂಗತರಾಗಿ ಶಸ್ತ್ರಸಜ್ಜಿತ ಗುಂಪಿನ ಸದಸ್ಯ, ಸೆಂಟ್ರಲ್, ರಿಜನಲ್ ಕಮಿಟಿ, ರಾಜ್ಯ, ಜಿಲ್ಲಾ ಮತ್ತು ಏರಿಯಾ ಸಮಿತಿಗಳ ಪೈಕಿ ಕನಿಷ್ಠ ಒಂದು ಸಮಿತಿಯಲ್ಲಿ ಸಕ್ರಿಯವಾಗಿರುವ ಮತ್ತು ಒಂದು ಅಥವಾ ಹೆಚ್ಚಿನ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ರಾಜ್ಯದಲ್ಲಿ ನಿವಾಸಿಯಾಗಿದಲ್ಲಿ ಪ್ರವರ್ಗ 'ಎ' ಬರಲಿದ್ದು, ಇವರಿಗೆ 7.5 ಲಕ್ಷ, ಅನ್ಯರಾಜ್ಯದ ನಕ್ಸಲೀಯರು ಪ್ರವರ್ಗ 'ಬಿ' ನಡಿ 4 ಲಕ್ಷ ಹಾಗೂ ಭಯೋತ್ಪಾದನೆ ಸಂಘಟನೆಗಳಿಗೆ ಬೆಂಬಲಿಸುವವರು, ಮಾಹಿತಿದಾರರು ಹಾಗೂ ಸಂಘಟನೆಗೆ ನೇಮಕಾತಿ ಮಾಡುವಂತಹ ವ್ಯಕ್ತಿಗಳು ತಮ್ಮ ವಿರುದ್ಧ ಚಾರ್ಚ್​ಶೀಟ್ ಸಲ್ಲಿಸಿದ ಆರೋಪಿಗಳು ಪ್ರವರ್ಗ 'ಸಿ' ನಡಿ ಬರಲಿದ್ದು, ಶರಣಾಗತಿಗೆ ಬಯಸಿದರೆ ಸರ್ಕಾರವು 2 ಲಕ್ಷ ರೂ.ಪ್ರೋತ್ಸಾಹ ಧನ ನೀಡಲಿದೆ.

ಶರಣಾಗಲು ಬಯಸಿದರೆ ಹೆಸರು, ಕ್ರಿಯಾಶೀಲವಾಗಿರುವ ಸಂಘಟನೆ, ಸದಸ್ಯರ ಹೆಸರುಗಳನ್ನ ಬಹಿರಂಗಪಡಿಬೇಕು. ಶಸ್ತ್ರಾಸ್ತ್ರಗಳ ಸರಬರಾಜಿನ ಮೂಲದ ಮಾಹಿತಿ ಹಿಂದೆ ಎಸಗಿದ ಕ್ರಿಮಿನಲ್ ಚಟುವಟಿಕೆಗಳ ಬಾಗಿಯಾದ ಬಗ್ಗೆ ಮಾಹಿತಿ ನೀಡಬೇಕು. ಮಾಧ್ಯಮಗಳ ಮುಂದೆ ಸ್ವ- ಇಚ್ಚೆಯಿಂದ ಶರಣಾಗುತ್ತಿರುವುದಾಗಿ ಹೇಳಿಕೆ ನೀಡಬೇಕು.

ಪ್ರವರ್ಗ ಎ ಅಡಿ ಶರಣಾದ ನಕಲ್ಸ್​ ಮುಖಂಡರಿಗೆ ಸರ್ಕಾರ ಕೂಡಲೇ 3 ಲಕ್ಷ ನೀಡಲಿದೆ. ಶರಣಾದ ಒಂದು ವರ್ಷದ ಬಳಿಕ 2 ಲಕ್ಷ ಹಾಗೂ ಎರಡು ವರ್ಷ ಮುಗಿದ ಬಳಿಕ 2 ಲಕ್ಷ ಬಿಡುಗಡೆ ಮಾಡಲಿದೆ. ಇದೇ ಮಾದರಿಯಲ್ಲಿ ಬಿ ಹಾಗೂ ಸಿ ಪ್ರವರ್ಗದಡಿ ಬರುವ ನಕ್ಸಲೀಯರಿಗೂ ಅನ್ವಯವಾಗಲಿದೆ. ವೃತ್ತಿ ಆಧಾರಿತ ತರಬೇತಿ ಒಲವು ತೋರಿದರೆ ಒಂದು ವರ್ಷಗಳ ಕೌಶಲ ತರಬೇತಿ ಪಡೆಯಬಹುದಾಗಿದೆ. ಈ ಅವಧಿಯಲ್ಲಿ ಮಾಸಿಕ 5 ಸಾವಿರ ಪ್ರೋತ್ಸಾಹ ಧನ ನೀಡಲಿದೆ. ಶರಣಾಗಲು ಬಯಸುವವರು ತಮ್ಮೊಂದಿಗಿರುವ ಯಾವುದೇ ಶಸ್ತ್ರಾಸ್ತ್ರ ಅಥವಾ ಉಪಕರಣ ಸರ್ಕಾರಕ್ಕೆ ಒಪ್ಪಿಸಿದರೆ ಇದಕ್ಕೂ ಪ್ರೋತ್ಸಾಹ ಧನ ನೀಡಲಿದೆ.

ಆಯುಧ /ಉಪಕರಣಗಳಿಗೆ ಸರ್ಕಾರದ ಪ್ರೋತ್ಸಾಹ ಧನ
ಆಯುಧ /ಉಪಕರಣಗಳಿಗೆ ಸರ್ಕಾರದ ಪ್ರೋತ್ಸಾಹ ಧನ (ETV Bharat)

ಪರಿಪೂರ್ಣವಾಗಿ ಸೌಲಭ್ಯ ಗೌಣ: "ನಕ್ಸಲೀಯರನ್ನು ಮುಖ್ಯವಾಹಿನಿಗೆ ಕರೆತರಲು ಸರ್ಕಾರ ಘೋಷಿಸಿದ್ದ ವಿಶೇಷ ಪ್ಯಾಕೇಜ್ ಬಹುತೇಕರಿಗೆ ದೊರೆತಿಲ್ಲ. 2 ಲಕ್ಷದಿಂದ 7.5 ಲಕ್ಷದವರೆಗೆ ಹಣ, ಕೃಷಿ ಮಾಡಲು ಬಯಸಿದರೆ ಎರಡು ಎಕರೆ ಜಮೀನು ನೀಡುವುದಾಗಿ ಹೇಳಿತ್ತು. ತಾತ್ವಿಕವಾಗಿ ಒಪ್ಪಿಗೆ ಸಿಕ್ಕಿದರೂ ಅರಣ್ಯ ಕಾಯ್ದೆಯ ಭೂ ಮಂಜೂರಾತಿ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಭೂ ಒಡೆತನ ಸಿಕ್ಕಿಲ್ಲ. ಸರ್ಕಾರದ ಬದಲಾವಣೆ, ಸೈದ್ಧಾಂತಿಕ ಭಿನ್ನಾಭಿಪ್ರಾಯ, ಸಮಿತಿ ವಿರ್ಸಜನೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಪರಿಪೂರ್ಣವಾಗಿ ಸೌಲಭ್ಯ ದೊರೆತಿಲ್ಲ" ಎಂದು ನಕ್ಸಲ್ ಶರಣಾಗತ ಹಾಗೂ ಹಾಗೂ ಪುನರ್ ವಸತಿ ಸಮಿತಿ ಸದಸ್ಯ ಬಂಜಗೆರೆ ಜಯಪ್ರಕಾಶ್ ತಿಳಿಸಿದ್ದಾರೆ.

ಭರವಸೆ ನೀಡಿ ಕೈತೊಳೆದುಕೊಳ್ಳಬೇಡಿ: ''ನಕ್ಸಲೀಯರನ್ನ ಮುಖ್ಯವಾಹಿನಿ ಕರೆತರುವ ನಿಟ್ಟಿನಲ್ಲಿ ಸರ್ಕಾರ ಹೇಳಿಕೆ ನೀಡಿರುವುದು ಸ್ವಾಗತಾರ್ಹ. ಹೇಳಿಕೆ ನೀಡಿ ಕೈತೊಳೆದುಕೊಳ್ಳದೇ ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು. ಶರಣಾಗತಿ ನೀತಿಯಡಿ ನಾಗರಿಕ ಸಮಾಜಕ್ಕೆ ಬಂದಿದ್ದ ನೀಲಗುಳಿ ಪದ್ಮನಾಭ, ರಿಜ್ವಾನ್ ಬೇಗಂ, ಕನ್ಯಾಕುಮಾರಿ ಸೇರಿದಂತೆ ಇನ್ನಿತರಿಗೆ ಸರ್ಕಾರದ ಪ್ಯಾಕೇಜ್ ಸರಿಯಾಗಿ ತಲುಪಿಲ್ಲ. ಪ್ರಮುಖವಾಗಿ ತಮ್ಮ ಮೇಲಿನ ಪ್ರಕರಣಗಳ ತ್ವರಿತ ವಿಚಾರಣೆ ಮಾಡದೆ ವಿಳಂಬ ಧೋರಣೆ ಅನುಸರಿಸಲಾಗಿದೆ. ಹೀಗಾಗಿ ಕನ್ಯಾಕುಮಾರಿ ಏಳೆಂಟು ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವಂತಾಗಿದೆ. 2013-14ರಲ್ಲಿ ಕೇಂದ್ರ ಸರ್ಕಾರವು ಮೊದಲಿಗೆ ನಕ್ಸಲ್ ಶರಣಾಗತಿ ನೀತಿಯನ್ನು ಪರಿಚಯಿಸಿತು. ರಾಜ್ಯ ಸರ್ಕಾರವು ಇದನ್ನು ಅಳವಡಿಸಿಕೊಂಡು ಪ್ಯಾಕೇಜ್ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ಇದುವರೆಗೆ ಸಮರ್ಪಕವಾಗಿ ಜಾರಿಗೆ ತಂದಿಲ್ಲ'' ಎಂದು ಪ್ಯಾಕೇಜ್ ತಿರಸ್ಕರಿಸಿ 2014ರಲ್ಲಿ ಸಮಾಜದ ಮುಖ್ಯವಾಹಿನಿಗೆ ಬಂದ ನಕ್ಸಲ್ ಹೋರಾಟಗಾರರಾಗಿದ್ದ ಸಿರಿಮನೆ ನಾಗರಾಜ್ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕದ ನಕ್ಸಲ್ ಹಾದಿ: 2013-14ರಲ್ಲಿ ಸರ್ಕಾರವು ವಿಶೇಷ ಪ್ಯಾಕೇಜ್ ಘೋಷಿಸಿದ ಬಳಿಕ ಗೌರಿ ಲಂಕೇಶ್ ನೇತೃತ್ವದಲ್ಲಿ ತಂಡ ರಚಿಸಿತ್ತು. ಸಿರಿಮನೆ ನಾಗರಾಜ್, ನೂರ್ ಶ್ರೀಧರ್, ನೀಲಗುಳಿ ಪದ್ಮನಾಭ, ರೇಣುಕಾ ದಂಪತಿ ಶರಣಾಗಿದ್ದರು. 2017ರಲ್ಲಿ ಚೆನ್ನಮ್ಮ, ಕನ್ಯಾಕುಮಾರಿ-ಶಿವಕುಮಾರ್ ದಂಪತಿ ಅವರು ಚಿಕ್ಕಮಗಳೂರಿನ ಜಿಲ್ಲಾಡಳಿತದ ಮುಂದೆ ಶರಣಾಗಿದ್ದರು. ಇದುವರೆಗೂ ಒಟ್ಟು 14 ಮಂದಿ ನಕ್ಸಲೀಯರು ಶರಣಾಗಿದ್ದಾರೆ.

  • 1980ರಿಂದ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ನಡೆಯುತ್ತಿದ್ದರೂ 2000 ದಶಕ ಬಳಿಕ ಇದರ ಸದ್ದು ಜೋರಾಯಿತು.
  • 2005 ಫೆ.6ರಂದು ಕೊಪ್ಪ ತಾಲೂಕಿನ ಮೆಣಸಿನಹ್ಯಾಡದ ಬಳಿ ನಕ್ಸಲ್ ನಾಯಕ ಸಾಕೇತ್ ರಾಜನ್ ಮತ್ತು ಶಿವಲಿಂಗು ಪೊಲೀಸರ ಗುಂಡಿಗೆ ಬಲಿಯಾಗಿದ್ದರು.
  • 2006 ಆಗಸ್ಟ್ 23: ಶೃಂಗೇರಿಯ ಕೆರೆಕಟ್ಟೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಕಚೇರಿ ಮೇಲೆ ನಕ್ಸಲ್ ದಾಳಿ. ಕೆಲದಿನದ ಬಳಿಕ ಕಾರ್ಕಳ ಮುನಿಯಾಲು ಮುಟ್ಲುಪಾಡಿಯಲ್ಲಿ ಸದಾನಂದ ಶೆಟ್ಟಿ ಅವರ ಬೈಕ್​ಗೆ ಬೆಂಕಿ ಹಚ್ಚಿ ನಕ್ಸಲರಿಂದ ಬೆದರಿಕೆ
  • 2006 ಡಿಸೆಂಬರ್ 25: ಶೃಂಗೇರಿ ಬಳಿಯ ಕಿಗ್ಗದಲ್ಲಿ ನಕ್ಸಲ್ ದಿನಕರ ಎನ್​ಕೌಂಟರ್​ಗೆ ಬಲಿ.
  • 2007 ಮಾರ್ಚ್ 13: ಶಂಕಿತ ನಕ್ಸಲ್​ ಯುವತಿ ಚೆನ್ನಮ್ಮ ಅಮಾಸೆಬೈಲಿನಲ್ಲಿ ಸೆರೆ.
  • 2007 ಜೂನ್ 3: ಶೃಂಗೇರಿ ಬಳಿಯ ಕಿಗ್ಗ ಸಮೀಪ ಗುಂಡಘಟ್ಟದಲ್ಲಿ ನಕ್ಸಲರಿಂದ ಅಂಗಡಿ ಮಾಲೀಕ ವೆಂಕಟೇಶ ಹತ್ಯೆ.
  • ಜೂನ್ 7: ಆಗುಂಬೆ ತಲ್ಲೂರಂಗಡಿ ಬಳಿ ಕೆಎಸ್ಆರ್​​ಟಿಸಿ ಬಸ್​ಗೆ ಬೆಂಕಿ.
  • 2007 ಜುಲೈ 10: ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಪಂ ವ್ಯಾಪ್ತಿಯ ಒಡೆಯರಮಠದಲ್ಲಿ ಪೊಲೀಸ್ ಎನ್​ಕೌಂಟರ್​ಗೆ ನಕ್ಸಲ್ ಯುವಕ ಸಿಂಧನೂರಿನ ಗೌತಮ್, ರಾ.ಉದ್ಯಾನ ವಿರೋಧಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪರಮೇಶ್ವರ, ಕಾರ್ಮಿಕ ಸುಂದರೇಶ್, ಮನೆಯ ಯಜಮಾನರಾದ ರಾಮೇಗೌಡ್ಲು, ಕಾವೇರಿ ಎಂಬುವವರು ಸಾವು.
  • 2007 ಜುಲೈ 17: ಆಗುಂಬೆ ಸಮೀಪದ ಹುಲ್ಲಾರಬೈಲಿನಲ್ಲಿ ಗುಂಡಿನ ಚಕಮಕಿ, ಎಸ್ಐ ವೆಂಕಟೇಶ್​ ಹತ್ಯೆ.
  • 2008 ಮೇ 15: ಹೆಬ್ರಿ ಸಮೀಪದ ಸೀತಾನದಿ ಬಳಿ ನಕ್ಸಲರ ಗುಂಡಿಗೆ ಶಿಕ್ಷಕ ಭೋಜ ಶೆಟ್ಟಿ ಹಾಗೂ ಅವರ ಗೆಳೆಯ ಕೃಷಿಕ ಸುರೇಶ್ ಶೆಟ್ಟಿ ಬಲಿ.
  • 2008 ಜುಲೈ 7: ಬೆಳ್ತಂಗಡಿ ತಾಲೂಕಿನ ಕುತ್ಲೂರು ಹಾಗೂ ಕಾರ್ಕಳದ ತಿಂಗಳಮಕ್ಕಿಯಲ್ಲಿ ನಕ್ಸಲರ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ.
  • 2008 ನವೆಂಬರ್ 13: ಶಿವಮೊಗ್ಗದಲ್ಲಿ ಶಂಕಿತ ನಕ್ಸಲ್ ಜನಾರ್ದನ ಬಂಧನ, ನಕ್ಸಲರು ಬಚ್ಚಿಟ್ಟ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಸ್ಪೋಟಕ ವಶ.
  • 2008 ನವೆಂಬರ್ 20: ಹೊರನಾಡು ಸಮೀಪ ಮಾವಿನಹೊಲ ಬಳಿ ಎನ್​ಕೌಂಟರ್​​, ನಕ್ಸಲರಾದ ಸೊರಬದ ಮನೋಹರ್, ಸಹಚರರಾದ ನವೀನ್, ಅಭಿಲಾಷ್ ಹತ್ಯೆ, ಪೇದೆ ಗುರುಪ್ರಸಾದ್ ಸಾವು.
  • 2008 ಡಿಸೆಂಬರ್ 7: ಹಳ್ಳಿಹೊಳೆ ಸಮೀಪದ ಕೃಷಿಕ ಜಮೀನ್ದಾರ ಕೇಶವ ಯಡಿಯಾಳರನ್ನು ಪೊಲೀಸರ ಮಾಹಿತಿದಾರನೆಂಬ ಆರೋಪದಲ್ಲಿ ಮನೆಗೆ ನುಗ್ಗಿ ನಕ್ಸಲರು ಹತ್ಯೆ ಮಾಡಿದ್ದರು.
  • 2009 ಆಗಸ್ಟ್ 22: ಕಿಗ್ಗ ಎನ್​ಕೌಂಟರ್, ಎರಡು ದಿನಗಳ ಬಳಿಕ ಶೃಂಗೇರಿಯ ನೆಮ್ಮಾರಿನ ದಿಂಡೋಡಿಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಪೊಲೀಸರಿಂದ ವಶ.
  • 2010 ಮಾರ್ಚ್ 1: ಕಾರ್ಕಳ ತಾಲೂಕಿನ ಮುನಿಯಾಲು ಮುಟ್ಲುಪಾಡಿಯ ಮೈರೋಳಿ ಎಂಬಲ್ಲಿ ಪೊಲೀಸರ ಎನ್​ಕೌಂಟರ್​ಗೆ ಬೆಳ್ತಂಗಡಿ ತಾಲೂಕು ಕುತ್ಲೂರಿನ ವಸಂತ ಗೌಡ್ಲು ಅಲಿಯಾಸ್​ ಆನಂದ ಹತ್ಯೆ.
  • 2011 ಅಗಸ್ಟ್ 9: ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಪಂ ವ್ಯಾಪ್ತಿಯ ನಾವೂರು ಗ್ರಾಮದ ಮಂಜಲದಲ್ಲಿ ಬೆಳಗಿನ ಜಾವ ನಕ್ಸಲ್ ನಿಗ್ರಹದಳದ ಪೊಲೀಸರ ಗನ್ ಮಿಸ್ ಫೈರ್ ಆಗಿ ಎಎನ್ಎಫ್ ಸಿಬ್ಬಂದಿ ಮಹಾದೇವ ಮಾನೆ ಸಾವು.
  • 2011 ಡಿಸೆಂಬರ್ 19: ಹೆಬ್ರಿ ಕಬ್ಬಿನಾಲೆ ಸಮೀಪದ ತಿಂಗಳ ಮಕ್ಕಿಯ ಸದಾಶಿವಗೌಡ (49) ತೆಂಗಿನಮಾರು ಮನೆಯಿಂದ ನಾಪತ್ತೆ, 22ರಂದು ವಿಷಯ ಬಹಿರಂಗ. ಶಂಕಿತ ನಕ್ಸಲ್ ವಿಶ್ವನಿಂದ ಪತ್ರಕರ್ತರಿಗೆ ಮಾಹಿತಿ.
  • 2011 ಡಿಸೆಂಬರ್ 28: ತೆಂಗಿನಮಾರುವಿನಿಂದ ಎರಡು ಕಿ.ಮೀ. ದೂರ ದಟ್ಟಾರಣ್ಯದಲ್ಲಿ ಸದಾಶಿವ ಗೌಡ ಎಂಬವರ ಶವ ಕೈಕಾಲು ಕಟ್ಟಿ ಸ್ಥಿತಿಯಲ್ಲಿ ಗೋಳಿಮರದಡಿ ಪತ್ತೆ. ನಕ್ಸಲರ ಬರಹವೂ ಸಮೀಪದಲ್ಲಿ ದೊರಕಿತ್ತು.
  • 2024 ನವೆಂಬರ್ 18: ಕಾರ್ಕಳ ತಾಲೂಕಿನ ಹೆಬ್ರಿಯ ಪೀತಬೈಲುವಿನಲ್ಲಿ ಎಎನ್​​ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂಗೌಡ ಬಲಿ.

ಏಳು ಮಂದಿ ಮಾತ್ರ ನಕ್ಸಲಿಯರಿದ್ದಾರೆ: ನಕ್ಸಲ್ ಚಟುವಟಿಕೆ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಉಡುಪಿ, ಚಿಕ್ಕಮಗಳೂರು ಭಾಗದಲ್ಲಿ ಏಳು ಮಂದಿ ನಕ್ಸಲೀಯರಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಐವರು ರಾಜ್ಯದವರಾದರೆ ಇನ್ನಿಬ್ಬರು ಹೊರರಾಜ್ಯದವರಾಗಿದ್ದಾರೆ. ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬರುವಂತೆ ಸಂಬಂಧಪಟ್ಟವರಿಂದ ಮಾಹಿತಿ ನೀಡಲಾಗುತ್ತಿದೆ ಎಂದು ಐಎನ್ಎಫ್ ಎಸ್​ಪಿ ಜಿತೇಂದ್ರ ಕುಮಾರ್ ದಯಾಮ ತಿಳಿಸಿದ್ದಾರೆ.

ಶರಣಾಗತ ನಕ್ಸಲೀಯರಿಗೆ ರಕ್ಷಣೆ ನೀಡಿ: ಸಂವಿಧಾನ ಬದ್ಧ, ಪ್ರಜಾಪ್ರಭುತ್ವದ ಮಾರ್ಗವಾಗಿ ಹೋರಾಡಿ ತಮ್ಮ ಬೇಡಿಕೆಗಳನ್ನ ನಕ್ಸಲರು ಈಡೇರಿಸಿಕೊಳ್ಳಬೇಕು. ಮುಖ್ಯವಾಹಿನಿಗೆ ಬಂದು ನಾಗರಿಕ ಸಮಾಜದ ಜೊತೆಗೆ ಸರ್ಕಾರ ನೀಡುವ ಪ್ಯಾಕೇಜ್​ಗಳನ್ನು ಬಳಸಿಕೊಂಡು ಬದುಕು ಕಟ್ಟಿಕೊಳ್ಳಬೇಕು. ಸರ್ಕಾರವು ಸಹ ಶರಣಾಗತ ನಕ್ಸಲೀಯರಿಗೆ ಕಿರುಕುಳ ಆಗದ ರೀತಿಯಲ್ಲಿ ರಕ್ಷಣೆ ನೀಡಬೇಕು ಎಂದು ನಕ್ಸಲ್ ಶರಣಾಗತ ಹಾಗೂ ಹಾಗೂ ಪುನರ್ ವಸತಿ ಸಮಿತಿ ಸದಸ್ಯ ಬಂಜಗೆರೆ ಜಯಪ್ರಕಾಶ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ನಕ್ಸಲರನ್ನ ಮುಖ್ಯವಾಹಿನಿಗೆ ತರಲು ಸರ್ಕಾರ ಬಯಸುತ್ತದೆ, ಹಿಂಸಾಚಾರ ಮಾಡಿದರೆ ಕಠಿಣ ಕ್ರಮ : ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.