ಪ್ಯಾರಿಸ್, ಫ್ರಾನ್ಸ್ : ಪ್ರಧಾನಿ ಮೋದಿ ಅವರು ಫ್ರಾನ್ಸ್‌ಗೆ ಮೂರು ದಿನಗಳ ಭೇಟಿ ನೀಡಿದ್ದಾರೆ. ಇಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯ ಸಹ - ಅಧ್ಯಕ್ಷತೆ ವಹಿಸುವ ಮೊದಲು ನಡೆದ ಭೋಜನಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಭರ್ಜರಿ ಸ್ವಾಗತ ಕೋರಿದರು.
ನನ್ನ ಸ್ನೇಹಿತ, ಅಧ್ಯಕ್ಷ ಮ್ಯಾಕ್ರನ್ ರನ್ನು ಭೇಟಿಯಾಗಲು ಸಂತೋಷವಾಗಿದೆ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಫ್ರೆಂಚ ಅಧ್ಯಕ್ಷರು ಔತಣಕೂಟ ಏರ್ಪಡಿಸಿದ್ದರು. AI ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಫ್ರಾನ್ಸ್‌ನಲ್ಲಿರುವ US ಉಪಾಧ್ಯಕ್ಷ ಜೆ.ಡಿ.ವಾನ್ಸ್ ಅವರನ್ನು ಪ್ರಧಾನಿ ಮೋದಿ ಇದೇ ವೇಳೆ ಭೇಟಿಯಾದರು.
ಈ ಬಗ್ಗೆ ಪ್ರಧಾನಿ ಕಾರ್ಯಾಲಯ ಎಕ್ಸ್ ಪೋಸ್ಟ್ ಮಾಡಿದೆ. ಪ್ರಧಾನಿ ಮೋದಿ ಅವರು, ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರನ್ ಹಾಗೂ ಅಮೆರಿಕ ಉಪಾಧ್ಯಕ್ಷ ಜೆ ಡಿ ವ್ಯಾನ್ ಅವರೊಂದಿಗೆ ಸಂವಾದ ನಡೆಸಿದರು ಎಂದು ಮಾಹಿತಿ ನೀಡಿದೆ. ಪ್ರಧಾನಿ ಮೋದಿ ಫ್ರಾನ್ಸ್ ಪ್ರವಾಸದ ಹಿನ್ನೆಲೆಯಲ್ಲಿ ಸೋಮವಾರ ಪ್ಯಾರಿಸ್ ಗೆ ಭೇಟಿ ನೀಡಿದ್ದಾರೆ. ಈ ಭೇಟಿ ಬಳಿಕ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ.
ಫ್ರಾನ್ಸ್‌ಗೆ ಮೂರು ದಿನಗಳ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಪ್ಯಾರಿಸ್‌ನಲ್ಲಿ ಮ್ಯಾಕ್ರನ್ ಅವರೊಂದಿಗೆ ಎಐ ಆಕ್ಷನ್ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಲಿದ್ದಾರೆ, ಈ ವೇಳೆ ಅವರು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ. ಅಲ್ಲಿನ ವ್ಯಾಪಾರೋದ್ಯಮಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಭವ್ಯ ಸ್ವಾಗತ: ಪ್ಯಾರಿಸ್‌ನಲ್ಲಿ ಸ್ಮರಣೀಯ ಸ್ವಾಗತ ಸಿಕ್ಕಿದೆ. ಮೈ ಕೊರೆಯುವ ಚಳಿಯಲ್ಲೂ ತಮ್ಮ ಸ್ವಾಗತಕ್ಕಾಗಿ ಬಂದ ಭಾರತೀಯ ಸಮುದಾಯವನ್ನು ಪ್ರಧಾನಿ ಹೊಗಳಿದರು. ನನ್ನ ಭಾರತೀಯ ಸಮುದಾಯಕ್ಕಾಗಿ ನಾನು ಕೃತಜ್ಞರಾಗಿರುತ್ತೇನೆ ಮತ್ತು ಅವರ ಸಾಧನೆಗಳಿಗಾಗಿ ಹೆಮ್ಮೆಪಡುತ್ತೇನೆ ಎಂದು ಗುಣಗಾನ ಮಾಡಿದರು.
ನನ್ನ ಸ್ನೇಹಿತ ಅಧ್ಯಕ್ಷ ಮ್ಯಾಕ್ರನ್ ಜೊತೆಗೆ ಭಾರತ-ಫ್ರಾನ್ಸ್ ಬಾಂಧವ್ಯ ವೃದ್ಧಿ, ವಿವಿಧ ಪಾಲುದಾರಿಕೆಗಾಗಿ 2047 ರ ಹಾರಿಜಾನ್ ಮಾರ್ಗಸೂಚಿಯಲ್ಲಿನ ಪ್ರಗತಿಯನ್ನು ಪರಿಶೀಲಿಸಲು ಭೇಟಿಯಿಂದ ದ್ವಿಪಕ್ಷೀಯ ವಿಭಾಗಕ್ಕೆ ಅವಕಾಶವನ್ನು ಒದಗಿಸುತ್ತದೆ ಎಂದು ಪ್ರಧಾನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬುಧವಾರ, ಉಭಯ ನಾಯಕರು ಮಾರ್ಸಿಲ್ಲೆಯಲ್ಲಿ ಕಾಮನ್‌ವೆಲ್ತ್ ವಾರ್ ಗ್ರೇವ್ಸ್ ಕಮಿಷನ್ ನಿರ್ವಹಿಸುತ್ತಿರುವ ಮಜಾರ್ಗ್ಯೂಸ್ ಯುದ್ಧ ಸ್ಮಶಾನಕ್ಕೆ ಭೇಟಿ ನೀಡಲಿದ್ದು, ಮೊದಲ ಮಹಾಯುದ್ಧದಲ್ಲಿ ಭಾರತೀಯ ಸೈನಿಕರು ಮಾಡಿದ ತ್ಯಾಗಕ್ಕೆ ಗೌರವ ಸಲ್ಲಿಸಲಿದ್ದಾರೆ. ಅಷ್ಟೇ ಅಲ್ಲ ಮಾರ್ಸೆಲ್ಲೆಯಲ್ಲಿ ಭಾರತದ ಹೊಸ ಕಾನ್ಸುಲೇಟ್ ಜನರಲ್ ಉದ್ಘಾಟಿಸಲಿದ್ದಾರೆ. ಇದು ಪ್ರಧಾನಿ ಮೋದಿಯವರ ಆರನೇ ಫ್ರಾನ್ಸ್ ಭೇಟಿಯಾಗಿದೆ.
ಇದನ್ನು ಓದಿ: ಶೇಖ್ ಹಸೀನಾ ಪುತ್ರನ ಹತ್ಯೆ ಯತ್ನ; ಸಂಚಿನಲ್ಲಿ ಶಿಕ್ಷೆಗೊಳಗಾಗಿದ್ದ ಪತ್ರಕರ್ತನ ಬಿಡುಗಡೆ