ಮುಂಬೈ, ಮಹಾರಾಷ್ಟ್ರ: ಹೂಡಿಕೆದಾರರು ಬ್ಯಾಂಕಿಂಗ್ ಮತ್ತು ಐಟಿ ಕ್ಷೇತ್ರಗಳಲ್ಲಿ ಹೂಡಿಕೆ ಕಡಿಮೆ ಮಾಡಿದ್ದರಿಂದ ಬಿಎಸ್ಇ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಶುಕ್ರವಾರ ಸುಮಾರು ಶೇ 1 ರಷ್ಟು ಕುಸಿದವು. ಅಮೆರಿಕದ ಡಾಲರ್ ವಿರುದ್ಧ ರೂಪಾಯಿ ದುರ್ಬಲಗೊಳ್ಳುತ್ತಿರುವುದು ಮಾರುಕಟ್ಟೆಯ ಭಾವನೆಯ ಮೇಲೆ ಪರಿಣಾಮ ಬೀರಿದೆ ಎಂದು ಟ್ರೇಡರ್ಸ್ ತಿಳಿಸಿದ್ದಾರೆ.
ಶುಕ್ರವಾರದ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ 720.60 ಪಾಯಿಂಟ್ಸ್ ಅಥವಾ ಶೇಕಡಾ 0.90 ರಷ್ಟು ಕುಸಿದು 79,223.11 ರಲ್ಲಿ ಕೊನೆಗೊಂಡಿದೆ. ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 833.98 ಪಾಯಿಂಟ್ ಗಳ ಕುಸಿತ ಕಂಡು 79,109.73 ಅಂಕಗಳಿಗೆ ತಲುಪಿತ್ತು. ಅಂತಿಮವಾಗಿ ಎನ್ಎಸ್ಇ ನಿಫ್ಟಿ 183.90 ಪಾಯಿಂಟ್ಸ್ ಅಥವಾ ಶೇಕಡಾ 0.76 ರಷ್ಟು ಕುಸಿದು 24,004.75 ರಲ್ಲಿ ಕೊನೆಗೊಂಡಿದೆ.
ಈ ಷೇರುಗಳಲ್ಲಿ ಕುಸಿತ: ಸೆನ್ಸೆಕ್ಸ್ ಷೇರುಗಳ ಪೈಕಿ ಜೊಮಾಟೊ, ಎಚ್ಡಿಎಪ್ಸಿ ಬ್ಯಾಂಕ್, ಟೆಕ್ ಮಹೀಂದ್ರಾ, ಅದಾನಿ ಪೋರ್ಟ್ಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಐಸಿಐಸಿಐ ಬ್ಯಾಂಕ್, ಸನ್ ಫಾರ್ಮಾ, ಲಾರ್ಸನ್ & ಟೂಬ್ರೊ, ಎಚ್ಸಿಎಲ್ ಟೆಕ್ ಮತ್ತು ಐಟಿಸಿ ನಷ್ಟಕ್ಕೀಡಾದ ಪ್ರಮುಖ ಷೇರುಗಳಾಗಿವೆ.
ಕುಸಿತದ ನಡುವೆ ಲಾಭ ಕಂಡ ಷೇರುಗಳಿವು: ಟಾಟಾ ಮೋಟಾರ್ಸ್, ನೆಸ್ಲೆ, ಟೈಟನ್, ಹಿಂದೂಸ್ತಾನ್ ಯೂನಿಲಿವರ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಾಭ ಗಳಿಸಿದವು.
ಏಷ್ಯಾದ ಮಾರುಕಟ್ಟೆಗಳ ಪೈಕಿ ಸಿಯೋಲ್ ಮತ್ತು ಹಾಂಕಾಂಗ್ ಏರಿಕೆಯಲ್ಲಿ ಕೊನೆಗೊಂಡರೆ, ಶಾಂಘೈ ಕುಸಿತ ಕಂಡಿದೆ. ಹೊಸ ವರ್ಷದ ಆಚರಣೆಗಾಗಿ ಜಪಾನಿನ ಷೇರು ಮಾರುಕಟ್ಟೆಗಳು ಮುಚ್ಚಲ್ಪಟ್ಟಿವೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಸತತ ಹಲವಾರು ದಿನಗಳ ಮಾರಾಟದ ನಂತರ ಗುರುವಾರ ನಿವ್ವಳ ಖರೀದಿದಾರರಾದರು. ಅವರು 1,506.75 ಕೋಟಿ ರೂ.ಗಳ ಈಕ್ವಿಟಿಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರದ ಅಂಕಿ ಅಂಶಗಳು ತಿಳಿಸಿವೆ.
ದಾಖಲೆಯ ಕನಿಷ್ಠ ಮಟ್ಟಕ್ಕೆ ಇಳಿದ ಡಾಲರ್: ಶುಕ್ರವಾರ ಯುಎಸ್ ಡಾಲರ್ ವಿರುದ್ಧ ರೂಪಾಯಿ 3 ಪೈಸೆ ಕುಸಿದು ದಾಖಲೆಯ ಕನಿಷ್ಠ 85.78 ಕ್ಕೆ (ತಾತ್ಕಾಲಿಕ) ಕೊನೆಗೊಂಡಿತು. ಜಾಗತಿಕ ತೈಲ ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಶೇಕಡಾ 0.43 ರಷ್ಟು ಇಳಿದು ಬ್ಯಾರೆಲ್ಗೆ 75.60 ಡಾಲರ್ಗೆ ತಲುಪಿದೆ.
ಹಿಂದಿನ ದಿನದ ವಹಿವಾಟಿನ ಮುಕ್ತಾಯದಲ್ಲಿ (ಗುರುವಾರ) ಬಿಎಸ್ಇ ಸೂಚ್ಯಂಕ 1,436.30 ಪಾಯಿಂಟ್ ಗಳ ಏರಿಕೆ ಕಂಡು 79,943.71 ಅಂಕಗಳಿಗೆ ತಲುಪಿತ್ತು. ನಿಫ್ಟಿ 445.75 ಪಾಯಿಂಟ್ ಅಥವಾ ಶೇಕಡಾ 1.88 ರಷ್ಟು ಏರಿಕೆ ಕಂಡು 24,188.65 ಕ್ಕೆ ತಲುಪಿತ್ತು.
ಇದನ್ನೂ ಓದಿ : ಸಗಟು ಬೆಲೆ ಸೂಚ್ಯಂಕ ಸರಣಿಯ ಆಧಾರ ಪರಿಷ್ಕರಣೆ: ಕಾರ್ಯಪಡೆ ರಚಿಸಿದ ಕೇಂದ್ರ - WPI BASE REVISION