ನ್ಯೂಯಾರ್ಕ್, ಅಮೆರಿಕ: ಜೋ ಬೈಡನ್ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಅಧ್ಯಕ್ಷ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹಾಲಿ ಅಧ್ಯಕ್ಷರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಎಕ್ಸ್ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ಅಮೆರಿಕದ ಸ್ಥಿತಿ ಇಂದು ವಿಪತ್ತಿನಲ್ಲಿದೆ ಮತ್ತು ದೇಶವು ವಿಶ್ವದಲ್ಲಿ ನಗೆಪಾಟಲಿಗೀಡಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ರಾಷ್ಟ್ರೀಯ ಭದ್ರತೆ, ಸುರಕ್ಷತೆ ಮತ್ತು ನಾಯಕತ್ವದ ಕುಸಿತಕ್ಕೆ ಅಧ್ಯಕ್ಷ ಬೈಡನ್ ಅವರೇ ಕಾರಣ ಎಂದು ಟ್ರಂಪ್ ದೂಷಿಸಿದ್ದಾರೆ.
ಅಧ್ಯಕ್ಷ ಬೈಡನ್ ಅವರ 'ಮುಕ್ತ ಗಡಿ ನೀತಿ'ಯಿಂದ ವಿನಾಶಕಾರಿ ಪರಿಣಾಮ ಎದುರಾಗುತ್ತಿವೆ ಎಂದು ಅಭಿಪ್ರಾಯ ಪಟ್ಟಿರುವ ಟ್ರಂಪ್ ಇದೇ ವಿಷಯವನ್ನು ಕೇಂದ್ರೀಕರಿಸಿ ಬೈಡನ್ ವಿರುದ್ಧ ಟೀಕೆ ಮಾಡಿದ್ದಾರೆ. ಮುಕ್ತ ಗಡಿ ನೀತಿಯಿಂದಾಗಿ ಅಮೆರಿಕದಲ್ಲಿ ಇಸ್ಲಾಮಿಕ್ ಭಯೋತ್ಪಾದನೆ ಮತ್ತು ಹಿಂಸಾತ್ಮಕ ಅಪರಾಧಗಳ ಮಟ್ಟ ಹೆಚ್ಚಾಗುತ್ತಿದೆ ಎಂದು ಎಚ್ಚರಿಸಿದ ಅವರು, ಈ ಹಿಂದೆಂದಿಗಿಂತಲೂ ಈಗ ದೇಶ ಕೆಟ್ಟ ಸಮಯವನ್ನು ದಾಟುತ್ತಿದೆ ಎಂದು ಹೇಳಿದರು.
"ಅವರು ಮತ್ತು ಅವರ ಚುನಾವಣಾ ಹಸ್ತಕ್ಷೇಪದ ದುಷ್ಕರ್ಮಿಗಳ ಗುಂಪು ನಮ್ಮ ದೇಶಕ್ಕೆ ಏನು ಮಾಡಿದೆಯೋ ಅದನ್ನು ಬೇಗ ಮರೆಯಲಾಗುವುದಿಲ್ಲ!" ಎಂದು ಅವರು ಹೇಳಿದರು. ನ್ಯಾಯಾಂಗ ಇಲಾಖೆ (ಡಿಒಜೆ), ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ಮತ್ತು ಡೆಮಾಕ್ರಟಿಕ್ ಸರ್ಕಾರಿ ಅಧಿಕಾರಿಗಳು ಸೇರಿದಂತೆ ವಿವಿಧ ಯುಎಸ್ ಸಂಸ್ಥೆಗಳು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿವೆ ಎಂದು ಟ್ರಂಪ್ ಆರೋಪಿಸಿದರು.
"ಈ ಏಜೆನ್ಸಿಗಳು ಮತ್ತು ಅಧಿಕಾರಿಗಳು ಅಸಮರ್ಥ ಮತ್ತು ಭ್ರಷ್ಟರಾಗಿದ್ದಾರೆ. ದೇಶವನ್ನು ಆಂತರಿಕ ಮತ್ತು ಬಾಹ್ಯ ಅಪಾಯಗಳಿಂದ ರಕ್ಷಿಸುವ ಬದಲು ರಾಜಕೀಯವಾಗಿ ದಾಳಿ ಮಾಡುವತ್ತ ಗಮನ ಹರಿಸಿದ್ದಾರೆ. ನಮ್ಮ ದೇಶ ವಿಪತ್ತಿನಲ್ಲಿದೆ ಮತ್ತು ಪ್ರಪಂಚದಾದ್ಯಂತ ನಗೆಪಾಟಲಿಗೀಡಾಗಿದೆ. ದುರ್ಬಲ, ಪರಿಣಾಮಕಾರಿಯಲ್ಲದ ಮತ್ತು ವಾಸ್ತವಿಕವಾಗಿ ಅಸ್ತಿತ್ವದಲ್ಲಿಲ್ಲದ ನಾಯಕತ್ವ ಹಾಗೂ ಮುಕ್ತ ಗಡಿಗಳನ್ನು ಹೊಂದಿದಾಗ ಇಂಥ ವಿಪತ್ತು ಸಂಭವಿಸುತ್ತದೆ" ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ.
ಡಿಒಜೆ, ಎಫ್ಬಿಐ ಮತ್ತು ಸ್ಥಳೀಯ ಪ್ರಾಸಿಕ್ಯೂಟರ್ಗಳು ಯುಎಸ್ ಸರ್ಕಾರ ಮತ್ತು ರಾಷ್ಟ್ರಕ್ಕೆ ನುಸುಳಿರುವ ಅಪಾಯಕಾರಿ ವ್ಯಕ್ತಿಗಳನ್ನು ನಿಭಾಯಿಸುವ ಬದಲು ಬರೀ ನನ್ನನ್ನು ಟೀಕೆ ಮಾಡುವುದರಲ್ಲಿಯೇ ಸಮಯ ಹಾಳು ಮಾಡುತ್ತಿದ್ದಾರೆ. ಪರಿಸ್ಥಿತಿ ಮತ್ತಷ್ಟು ಹದಗೆಡುವ ಮುನ್ನ ಸಿಐಎ ಮಧ್ಯಪ್ರವೇಶಿಸುವುದು ಅಗತ್ಯ ಎಂದು ಅವರು ಹೇಳಿದರು.
ಇದನ್ನೂ ಓದಿ : ದಯನೀಯ ಸ್ಥಿತಿಯಲ್ಲಿ ಪಾಕಿಸ್ತಾನದ ಅಫ್ಘಾನಿ ನಿರಾಶ್ರಿತರು: ಆತಂಕದಲ್ಲಿ ಬದುಕು - AFGHAN REFUGEES