ಕಲಬುರಗಿ: ಸಂಬಂಧಿಕರ ಮನೆಗೆ ಕನ್ನ ಹಾಕಿದ್ದ ಪ್ರಕರಣ ಭೇದಿಸಿದ ಚೌಕ್ ಠಾಣಾ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ಚಿನ್ನಾಭರಣಗಳನ್ನು ವಶಕ್ಕೆ ಪಡೆಯುವಲ್ಲಿ ಯಶ ಕಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್‌ಡಿ ಮಾಹಿತಿ ನೀಡಿದ್ದಾರೆ.
ಜಪ್ತಿ ಮಾಡಿಕೊಂಡಿದ್ದ ಎಲ್ಲ ವಸ್ತುಗಳನ್ನು ಸೋಮವಾರ ಕಲಬುರಗಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಡಿಸಿಪಿ ಕನ್ನಿಕಾ ಸಿಕ್ರಿವಾಲ್ ನೇತೃತ್ವದಲ್ಲಿ ವಾರಸುದಾರಿಗೆ ಹಸ್ತಾಂತರ ಮಾಡಿ ಮಾತನಾಡಿದ ಅವರು, 2024ರ ಡಿ. 12 ರಂದು ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯ ತಾಜ್ ನಗರದಲ್ಲಿ ಮಹ್ಮದ್ ಅಬ್ದುಲ್ ನಬೀ ಎಂಬುವರು ಕುಟುಂಬ ಸಮೇತ ಹಜ್ ಯಾತ್ರೆಗೆ ತೆರಳಿದ್ದರು. ಈ ವೇಳೆ, ಸಂಬಂಧಿ ವಾಸಿಮ್ ಎಂಬಾತನಿಗೆ ಮನೆ ಬೀಗ ಕೊಟ್ಟು ಮನೆ ನೋಡಿಕೊಳ್ಳಲು ಹೇಳಿದ್ದರು. ಈ ವೇಳೆ ವಾಸಿಮ್ ತನ್ನ ಸ್ನೇಹಿತ ಶಾದಾಬ್ ಎಂಬಾತನ ಜೊತೆಗೂಡಿ ಮಹ್ಮದ್ ಅಬ್ದುಲ್ ನಬೀ ಮನೆ ಸ್ವಚ್ಛ ಮಾಡುವ ನೆಪದಲ್ಲಿ ಮನೆಯಲ್ಲಿನ ನಗದು ಹಣ ಮತ್ತು ಚಿನ್ನಾಭರಣಗಳನ್ನ ದೋಚಿದ್ದರು. ಮಾರನೇ ದಿನೇ ಹಜ್ ಯಾತ್ರೆ ಮುಗಿಸಿಕೊಂಡು ಮನೆಗೆ ಬಂದಾಗ ಕಳ್ಳತನವಾಗಿರುವುದನ್ನು ಕಂಡು ಅಬ್ದುಲ್ ನಬೀ ಚೌಕ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ವಾಸಿಮ್ ಮತ್ತು ಶಾದಾಬ್ ಇಬ್ಬರು ಸೇರಿಕೊಂಡು ಮನೆಗಳ್ಳತನ ಪ್ರಕರಣ ಭೇದಿಸಲು ಏಕೆ ವಿಳಂಬ ಮಾಡ್ತಿದ್ದಿರಿ? ಬೇಗ ಆರೋಪಿಗಳನ್ನು ಬಂಧಿಸಿ, ರಿಕವರಿ ಮಾಡಿ ಅಂತಾ ಪದೇ ಪದೆ ಪೊಲೀಸರ ಮೇಲೆಯೇ ಒತ್ತಡ ಹಾಕುತ್ತಿದ್ದರು. ಈ ವೇಳೆ ಅನುಮಾನಗೊಂಡ ಚೌಕ್ ಇನ್ಸ್ಪೆಕ್ಟರ್ ರಾಘವೇಂದ್ರ ಅವರು, ವಾಸಿಮ್ ಮತ್ತು ಶಾದಾಬ್ನನ್ನು ಠಾಣೆಗೆ ಕರೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಾವೇ ಮನೆಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರು ಖದೀಮರ ಪ್ಲಾನ್ ಕುರಿತು ವಿವರಿಸಿದರು.
ಇದಲ್ಲದೇ ನಗರ ಪೊಲೀಸರು ಇತ್ತೀಚೆಗೆ ಒಟ್ಟು 65 ಮನೆಗಳ್ಳತನ ಪ್ರಕರಣಗಳನ್ನು ಭೇದಿಸಿದ್ದಿ 65 ಪ್ರಕರಣಗಳಲ್ಲಿ ಬರೋಬ್ಬರಿ 114 ಜನ ಆರೋಪಿಗಳನ್ನು ಬಂಧಿಸಲಾಗಿದೆ. 114 ಆರೋಪಿಗಳಿಂದ 3.39 ಲಕ್ಷ ರೂ. ನಗದು ಹಣ, 936.19 ಗ್ರಾಂ ಚಿನ್ನ, 1908.08 ಗ್ರಾಂ ಬೆಳ್ಳಿ ಸೇರಿದಂತೆ ಒಟ್ಟು 83.43 ಲಕ್ಷ ರೂ. ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ. ಜಪ್ತಿ ಮಾಡಿಕೊಂಡಿದ್ದ ಎಲ್ಲಾ ವಸ್ತುಗಳನ್ನ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಾರಸುದಾರಿಗೆ ಹಸ್ತಾಂತರ ಮಾಡಲಾಯಿತು ಎಂದು ಪೊಲೀಸ್ ಆಯುಕ್ತ ಡಾ ಶರಣಪ್ಪ ಎಸ್‌ಡಿ ತಿಳಿಸಿದ್ದಾರೆ.