ಮೈಸೂರು: ಅವಹೇಳನಕಾರಿ ಪೋಸ್ಟರ್ನಿಂದ ಸೋಮವಾರ ರಾತ್ರಿ ಉದ್ವಿಗ್ನಗೊಂಡಿದ್ದ ಉದಯಗಿರಿ ಪೊಲೀಸ್ ಠಾಣೆಯ ಬಳಿ ಈಗ ಪರಿಸ್ಥಿತಿ ಶಾಂತವಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ ಹೇಳಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದ್ದು, ಉನ್ನತ ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟರ್ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಠಾಣೆಗೆ ಕರತಂದ ಸಂದರ್ಭದಲ್ಲಿ ಕೆಲ ಯುವಕರು ನಿನ್ನೆ ರಾತ್ರಿ ಉದಯಗಿರಿ ಪೊಲೀಸ್ ಠಾಣೆಯ ಬಳಿ ಜಮಾಯಿಸಿದ್ದರು. ಈ ವೇಳೆ ಆರೋಪಿ ಯುವಕನನ್ನು ಬಿಟ್ಟುಬಿಡುತ್ತಾರೆ ಎಂಬ ತಪ್ಪು ತಿಳುವಳಿಕೆಯಿಂದ ಗದ್ದಲ ಉಂಟಾಗಿದ್ದು, ಪರಿಸ್ಥಿತಿ ಅರಿತ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದ್ದಾರೆ. ಕಲ್ಲು ತೂರಾಟ ನಡೆಸಿದಾಗ ಅಶ್ರುವಾಯು ಸಿಡಿಸುವ ಮೂಲಕ ಮಧ್ಯರಾತ್ರಿ ವೇಳೆಗೆ ಪರಿಸ್ಥಿತಿಯನ್ನು ಅತೋಟಿಗೆ ತರಲಾಗಿದೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಡಿಜಿಪಿ ಭೇಟಿ : ಸೂಕ್ಷ್ಮ ಪರಿಸ್ಥಿಯನ್ನು ಅರಿತ ಎಡಿಜಿಪಿ ಜೀತೇಂದ್ರ, ಇಂದು ಬೆಳಗ್ಗೆ ಉದಯಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವುದನ್ನು ವಿರೋಧಿಸಿ ಸಾವಿರಾರು ಜನ ಸೋಮವಾರ ರಾತ್ರಿ ಉದಯಗಿರಿ ಠಾಣೆಗೆ ಬಂದು ಪ್ರತಿಭಟನೆ ನಡೆಸಿದ್ದರು. ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪಿಯನ್ನು ಬೇಗ ಬಿಟ್ಟು ಬಿಡುತ್ತಾರೆ ಎಂದು ಕೆಲವರು ಗಲಾಟೆ ಮಾಡಿದ್ದಾರೆ. ಗಲಾಟೆಯಲ್ಲಿ ಏಳು ಜನ ಪೊಲೀಸರಿಗೆ ಗಾಯ ಆಗಿದೆ. ಗಲಾಟೆ ಮಾಡಿದವರ ಬಂಧನಕ್ಕೆ ಸ್ಥಳೀಯ ಪೊಲೀಸರಿಂದ ಟೀಂ ರಚನೆ ಮಾಡಲಾಗಿದೆ. ಪೋಸ್ಟರ್ ವಿಚಾರದಲ್ಲಿ ಕೆಲವು ವಂದತಿ ಹಬ್ಬಿಸಿದ್ದಕ್ಕೆ ಈ ಗಲಾಟೆಯಾಗಿದೆ. ಗಲಾಟೆಯ ಹಿಂದೆ ಯಾರಿದ್ದಾರೆ, ಯಾವುದಾದರೂ ಸಂಘಟನೆ ಇದೆಯಾ ಎಂದುಬದರ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ತನಿಖೆ ಬಳಿಕ ಈ ಬಗ್ಗೆ ಹೆಚ್ಚಿನ ವಿವರ ತಿಳಿದು ಬರಲಿದೆ. ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ ಎಂದು ಅವರು ಹೇಳಿದ್ದಾರೆ.
ಉದಯಗಿರಿಯ ಆಯಕಟ್ಟಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಸ್ಥಳದಲ್ಲಿ ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಹಾಗೂ ACP ಗಳು ಮೊಕ್ಕಾಂ ಹೂಡಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್ ತೆರವು - FLEX HOARDING REMOVAL