Green Leafy Vegetables Benefits : ಹಸಿರು ಸೊಪ್ಪು ತಿನ್ನುವುದು ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾಗಿದೆ. ಪ್ರತಿದಿನ ಆಹಾರದಲ್ಲಿ ಒಂದಲ್ಲ ಒಂದು ರೀತಿಯ ಹಸಿರು ಸೊಪ್ಪುಗಳನ್ನು ಸೇರಿಸಿಕೊಳ್ಳಬೇಕು. ಇದರಿಂದ ಆರೋಗ್ಯಕರ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಹಸಿರು ಸೊಪ್ಪು ಕಡಿಮೆ ಕೊಬ್ಬಿನಾಂಶ ಹೊಂದಿರುತ್ತವೆ. ಇವುಗಳಲ್ಲಿ ಪ್ರೋಟೀನ್, ಜೀವಸತ್ವಗಳು ಹಾಗೂ ಖನಿಜಗಳು ಸಮೃದ್ಧವಾಗಿವೆ. ಹಸಿರು ಸೊಪ್ಪಿನ ಬಗ್ಗೆ ಅನೇಕರಿಗೆ ತಿಳಿದಿದ್ದರೂ ಅವರು ಈ ತರಕಾರಿಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ನಿಮಗೆ ಇಷ್ಟವಿಲ್ಲದಿದ್ದರೂ ಕೂಡ ನಿಮ್ಮ ಆಹಾರದಲ್ಲಿ ಹಸಿರು ಸೊಪ್ಪುಗಳನ್ನು ಸೇರಿಸುವುದು ಮುಖ್ಯವಾಗಿದೆ.
ಪೌಷ್ಟಿಕತಜ್ಞೆ ಡಾ. ಸ್ವರೂಪಾ ರಾಣಿ ತಿಳಿಸುವ ಪ್ರಕಾರ, ಹಸಿರು ಸೊಪ್ಪು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ನಾರಿನಂಶ ಹೆಚ್ಚಾಗಿರುತ್ತದೆ. ಜೊತೆಗೆ ಇದರಲ್ಲಿ ಕಬ್ಬಿಣ, ಸತು ಹಾಗೂ ಫೋಲಿಕ್ ಆಮ್ಲವೂ ಸಮೃದ್ಧವಾಗಿದೆ. ನಾರಿನಂಶ ಹೆಚ್ಚಿರುವ ಹಸಿರು ಸೊಪ್ಪುಗಳನ್ನು ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಹಸಿರು ತರಕಾರಿಗಳಲ್ಲಿ ವಿಟಮಿನ್ ಎ ಮತ್ತು ಸಿ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿವೆ. ಇದರಿಂದಾಗಿ ವಾರಕ್ಕೆ ಕನಿಷ್ಠ ಮೂರು ಬಾರಿಯಾದರೂ ನಿಮ್ಮ ಆಹಾರದಲ್ಲಿ ಹಸಿರು ತರಕಾರಿಗಳನ್ನು ಸೇರಿಸಿಕೊಳ್ಳಬೇಕು. ಇದರ ಪರಿಣಾಮ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಬಹುದು.
ಮುಳ್ಳು ಹರಿವೆ ಸೊಪ್ಪು : ಮುಳ್ಳು ಹರಿವೆ ಸೊಪ್ಪು ಅಥವಾ ಕಿರಿಕಸಾಲಿ ಸೊಪ್ಪಿನಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಸಿ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಹೇರಳವಾಗಿದೆ. ಈ ಸೊಪ್ಪು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ದೃಷ್ಟಿಯನ್ನು ಸುಧಾರಿಸುತ್ತದೆ. ಇದರಲ್ಲಿರುವ ಫೈಬರ್ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಹಾಗೂ ಮಲಬದ್ಧತೆ ತೊಂದರೆಯನ್ನು ಕಡಿಮೆ ಮಾಡುತ್ತದೆ.
ಪಾಲಕ್ ಸೊಪ್ಪು : ಪಾಲಕ್ ಸೊಪ್ಪು ಹೇರಳವಾದ ರಕ್ತ ಶುದ್ಧೀಕರಣ ಗುಣಗಳನ್ನು ಹೊಂದಿದೆ. ಪಾಲಕ್ ಸೊಪ್ಪು ವಿಟಮಿನ್ ಎ, ಬಿ, ಸಿ, ಕೆ, ಮೆಗ್ನೀಸಿಯಮ್ ಹಾಗೂ ಫೋಲಿಕ್ ಆಮ್ಲದಂತಹ ಖನಿಜಗಳನ್ನು ಸಹ ಒಳಗೊಂಡಿದೆ. ಕ್ಯಾನ್ಸರ್ನಂತಹ ರೋಗಗಳನ್ನು ತಡೆಯುವಂತಹ ಗುಣ ಇದರಲ್ಲಿದೆ. ಪಾಲಕ್ ಸೊಪ್ಪು ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದಲೂ ರಕ್ಷಣೆ ನೀಡುತ್ತದೆ.
ಪುಂಡಿಪಲ್ಯ : ಪುಂಡಿ ಸೊಪ್ಪಿನಲ್ಲಿ ಪೊಟ್ಯಾಸಿಯಮ್, ಫೈಬರ್ ಹಾಗೂ ಕ್ಯಾಲ್ಸಿಯಂ ಹೇರಳವಾಗಿದೆ. ಈ ಸೊಪ್ಪು ಸೇವಿಸುವುದರಿಂದ ಹೃದಯ ಕಾಯಿಲೆಯಿಂದ ರಕ್ಷಿಸುತ್ತದೆ. ಜೊತೆಗೆ ಮೂಳೆಗಳನ್ನು ಬಲಪಡಿಸುತ್ತದೆ. ಪುಂಡಿಪಲ್ಯ ರಕ್ತದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ ಹಾಗೂ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಮೆಂತ್ಯ ಸೊಪ್ಪು : ಮೆಂತ್ಯ ಸೊಪ್ಪಿನಲ್ಲಿ ಫೈಬರ್, ಪ್ರೋಟೀನ್, ಕಬ್ಬಿಣ, ಸೋಡಿಯಂ, ತಾಮ್ರ, ರಂಜಕ, ಸತು ಹಾಗೂ ವಿವಿಧ ವಿಟಮಿನ್‌ಗಳಿವೆ. ಈ ಸೊಪ್ಪಿನಲ್ಲಿರುವ ಫೈಬರ್ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ತೂಕ ನಷ್ಟಕ್ಕೆ ಉತ್ತೇಜಿಸುತ್ತದೆ. ಇದಲ್ಲದೆ, ಇದರಲ್ಲಿರುವ ಒಮೆಗಾ 3 ಹಾಗೂ 6 ಕೊಬ್ಬಿನಾಮ್ಲಗಳು ಕೂದಲು ಉದುರುವಿಕೆಯ ಸಮಸ್ಯೆ ನಿವಾರಣೆ ಮಾಡುತ್ತದೆ.
ಪುದೀನ ಸೊಪ್ಪು : ಪುದೀನ ಸೊಪ್ಪಿನಲ್ಲಿರುವ ವಿಟಮಿನ್ ಎ, ಸಿ ಹಾಗೂ ಬಿ ಕಾಂಪ್ಲೆಕ್ಸ್ ಸಮೃದ್ಧವಾಗಿದೆ. ಇದು ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದು ಉಸಿರಾಟದ ತೊಂದರೆಗಳನ್ನು ತಡೆಯುತ್ತದೆ. ಸ್ನಾಯು ನೋವು ಹಾಗೂ ತಲೆನೋವಿನಿಂದ ಪರಿಹಾರ ದೊರೆಯುತ್ತದೆ.
ಬಸಳೆ ಸೊಪ್ಪು : ಬಸಳೆ ಸೊಪ್ಪಿನಲ್ಲಿ ವಿಟಮಿನ್ ಎ, ಲುಟೀನ್, ಕ್ಯಾರೋಟಿನ್ ನಂತಹ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದರಲ್ಲಿರುವ ಸೆಲೆನಿಯಮ್, ನಿಯಾಸಿನ್ ಹಾಗೂ ಒಮೆಗಾ-3 ಕೊಬ್ಬಿನಾಮ್ಲಗಳು ರಕ್ತದೊತ್ತಡ, ಕಣ್ಣು, ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ನಿಯಮಿತವಾಗಿ ಸೇವಿಸುವುದರಿಂದ ಚರ್ಮವು ಸಾಫ್ಟ್ ಆಗುತ್ತದೆ.
ಕರಿಬೇವಿನ ಸೊಪ್ಪು : ಕರಿಬೇವಿನ ಸೊಪ್ಪು ದೃಷ್ಟಿ ಸುಧಾರಿಸುತ್ತದೆ. ಸಕ್ಕರೆ, ಅಧಿಕ ತೂಕ ಮತ್ತು ಮಲಬದ್ಧತೆ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ. ಇದರ ಪ್ರತಿಜೀವಕ ಹಾಗೂ ಶಿಲೀಂಧ್ರನಾಶಕ ಗುಣಗಳು ಮತ್ತು ಸೋಂಕನ್ನು ತಡೆಯುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಹೃದಯ, ಮೂತ್ರಪಿಂಡಗಳನ್ನು ರಕ್ಷಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.
ಕೊತ್ತಂಬರಿ ಸೊಪ್ಪು : ಕೊತ್ತಂಬರಿ ಸೊಪ್ಪು ವಿವಿವಧ ಖಾದ್ಯಗಳಿಗೆ ಸುವಾಸನೆ ಮತ್ತು ಪರಿಮಳ ನೀಡುವುದರ ಜೊತೆಗೆ ಆರೋಗ್ಯಕ್ಕೂ ತುಂಬಾ ಉಪಯುಕ್ತವಾಗಿದೆ. ಕೊತ್ತಂಬರಿ ಸೊಪ್ಪಿನಲ್ಲಿ ಫೈಬರ್, ಜೀವಸತ್ವಗಳು ಹಾಗೂ ಪ್ರೋಟೀನ್‌ಗಳು ಹೇರಳವಾಗಿದೆ. ಇದರೊಂದಿಗೆ ಕಬ್ಬಿಣ ಹಾಗೂ ಮ್ಯಾಂಗನೀಸ್ ಅನ್ನು ಹೊಂದಿದೆ. ಕೊತ್ತಂಬರಿ ಸೊಪ್ಪು ಆಸ್ತಮಾ ಹಾಗೂ ಜೀರ್ಣಕಾರಿ ಸಮಸ್ಯೆಗಳನ್ನು ತಡೆಯುತ್ತದೆ. ಕೊತ್ತಂಬರಿ ಸೊಪ್ಪು ಒತ್ತಡ ಕಡಿಮೆ ಮಾಡುತ್ತದೆ. ಇದು ರಕ್ತದೊತ್ತಡ ನಿಯಂತ್ರಿಸುತ್ತದೆ ಹಾಗೂ ಹೆಚ್ಚುವರಿ ತೂಕ ಕಡಿಮೆ ಮಾಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ವೀಕ್ಷಿಸಬಹುದು :
ಓದುಗರಿಗೆ ಮುಖ್ಯ ಸೂಚನೆ : ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.