ಚಾಮರಾಜನಗರ: ಗ್ರಾಹಕರಿಗೆ ಸ್ವೀಟ್ ಪಾರ್ಸಲ್ ಮಾಡಿ ಕೊಡುವಾಗಲೇ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಚಾಮರಾಜನಗರದ ಬೇಕರಿಯೊಂದರಲ್ಲಿ ನಡೆದಿದೆ. ವೇಣುಗೋಪಾಲ್ (56) ಮೃತರು.
ಚಾಮರಾಜನಗರದ ಕೇಕ್ ವರ್ಲ್ಡ್ ಬೇಕರಿಯಲ್ಲಿ ಕೇರಳದ ವೇಣುಗೋಪಾಲ್ ಕಳೆದ 5 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಫೆಬ್ರವರಿ 12ರ ಸಂಜೆ 7.30ರ ಸುಮಾರಿಗೆ ಗ್ರಾಹಕರಿಗೆ ಸ್ವೀಟ್ ಪಾರ್ಸಲ್ ಮಾಡಿ ಕೊಡುವಾಗ ವೇಣುಗೋಪಾಲ್ ಏಕಾಏಕಿ ಕುಸಿದು ಬಿದ್ದರು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ಪರಿಶೀಲನೆ ನಡೆಸಿ, ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಸಿಸಿಟಿವಿಯಲ್ಲಿ ದೃಶ್ಯ ಸೆರೆ: ವೇಣುಗೋಪಾಲ್ ಕುಸಿದು ಬಿದ್ದಿರುವುದು ಬೇಕರಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ವಿವಾಹ ಸಂಭ್ರಮದ ವೇದಿಕೆ ಮೇಲೆ ಕುಣಿಯುತ್ತಿರುವಾಗ ಕುಸಿದು ಬಿದ್ದು ಯುವತಿ ಹಠಾತ್ ಸಾವು
ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡುತ್ತಲೇ ಪ್ರಾಣ ಬಿಟ್ಟ ಯುವತಿ: ಪ್ರತ್ಯೇಕ ಘಟನೆಯಲ್ಲಿ, ಸೋದರ ಸಂಬಂಧಿ ಮದುವೆಯ ಸಂಭ್ರಮದಲ್ಲಿ ಕುಣಿಯುತ್ತಿದ್ದ ಯುವತಿ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮಧ್ಯ ಪ್ರದೇಶದ ಭೋಪಾಲ್ನ ವಿದಿಶಾದಲ್ಲಿ ಇತ್ತೀಚೆಗೆ ನಡೆದಿತ್ತು.
23 ವರ್ಷದ ಪರಿಣಿತಾ ಜೈನ್ ಮೃತರು. ಇಂಧೋರ್ ನಿವಾಸಿಯಾದ ಈಕೆ ಸಂಬಂಧಿಯ ವಿವಾಹಕ್ಕಾಗಿ ಭೋಪಾಲ್ಗೆ ಬಂದಿದ್ದರು. ವಿದಿಶಾದ ರೆಸಾರ್ಟ್ವೊಂದರಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲಿಯೇ ಈ ದುರಂತ ಸಂಭವಿಸಿತ್ತು.
ವಿವಾಹದ ಹಳದಿ ಕಾರ್ಯಕ್ರಮ ನಡೆಯುತ್ತಿತ್ತು. ಸಂಭ್ರಮಾಚರಣೆಗೆ ವೇದಿಕೆ ಸಿದ್ಧಪಡಿಸಲಾಗಿತ್ತು. ಎಲ್ಲರಂತೆ ಯುವತಿಯೂ ನೃತ್ಯ ಮಾಡುತ್ತಿದ್ದರು. ಎರಡೇ ನಿಮಿಷಗಳಲ್ಲಿ ಆಕೆ ಕುಣಿಯುತ್ತಲೇ ಹಠಾತ್ ಕುಸಿದು ಬಿದ್ದರು. ತಕ್ಷಣವೇ ಅಲ್ಲಿದ್ದವರು ಸಹಾಯಕ್ಕೆ ಬಂದಿದ್ದಾರೆ. ಯುವತಿಯು ಯಾವುದೇ ಚಲನೆ ತೋರದೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಬಳಿಕ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರಿಶೀಲಿಸಿದ ವೈದ್ಯರು ಆಕೆ ಹೃದಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದರು. ವಿವಾಹದ ಸಂಭ್ರಮದಲ್ಲಿದ್ದ ಕುಟುಂಬ ಯುವತಿಯ ದಿಢೀರ್ ಸಾವಿನಿಂದ ಶೋಕಸಾಗರದಲ್ಲಿ ಮುಳುಗಿತ್ತು.
ಇದನ್ನೂ ಓದಿ: ಚಾಮರಾಜನಗರ: 3ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು