ಇಸ್ಲಾಮಾಬಾದ್: ಅಫ್ಘಾನಿಸ್ತಾನದಿಂದ ಪಲಾಯನ ಮಾಡಿ ಪಾಕಿಸ್ತಾನಕ್ಕೆ ಬಂದಿರುವ ಆಫ್ಘನ್ ನಿರಾಶ್ರಿತರ ಬದುಕು ದಿನದಿಂದ ದಿನಕ್ಕೆ ದುರ್ಬರ ವಾಗುತ್ತಿದೆ. ಆಫ್ಘನ್ ನಿರಾಶ್ರಿತ ಮಹಿಳೆ ಶಹರ್ ಜಾದ್ ಎಂಬುವರು ಇಸ್ಲಾಮಾಬಾದ್ನಲ್ಲಿ ಚಿಕ್ಕ ಕೋಣೆಯೊಂದರಲ್ಲಿ ವಾಸಿಸುತ್ತಿದ್ದು, ಇದು ಅವರಿಗೆ ತಾಲಿಬಾನ್ ಆಡಳಿತವನ್ನೇ ನೆನಪಿಸುತ್ತಿದೆ.
ಮುಖ್ಯವಾಗಿ ಇಲ್ಲಿ ವಾಸಿಸುವ ದಾಖಲೆರಹಿತ ಕುಟುಂಬಗಳ ಮೇಲೆ ಪಾಕಿಸ್ತಾನದ ಪೋಲಿಸ್ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ನಿರಾಶ್ರಿತರಿಗೆ ಕಿರುಕುಳ ನೀಡುವ, ಸುಲಿಗೆ ಮಾಡುವ ಮತ್ತು ಅವರನ್ನು ಬಂಧಿಸಲಾಗುತ್ತಿರುವ ವರದಿಗಳು ಬಂದಿವೆ. ಸದ್ಯ ದೇಶದಲ್ಲಿ ಉಂಟಾಗಿರುವ ಆಫ್ಘನ್ ವಿರೋಧಿ ಅಲೆಯಲ್ಲಿ ತಮ್ಮ ಜೀವನ ಕೊಚ್ಚಿ ಹೋಗಲಿದೆ ಎಂದು ನಿರಾಶ್ರಿತರು ಆತಂಕದಲ್ಲಿದ್ದಾರೆ.
"ಆಫ್ಘನ್ನರಿಗೆ, ಇಲ್ಲಿನ ಪರಿಸ್ಥಿತಿ ಭಯಾನಕವಾಗಿದೆ ಮತ್ತು ಪಾಕಿಸ್ತಾನ ಪೊಲೀಸರ ನಡವಳಿಕೆಯು ತಾಲಿಬಾನ್ನಂತೆಯೇ ಇದೆ" ಎಂದು ಶಹರ್ ಜಾದ್ ಹೇಳಿದರು.
ತನ್ನ ಮಗ ಇತ್ತೀಚೆಗೆ ಉದ್ಯಾನವನದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ ಎಂದು ಅವರು ಹೇಳಿದರು. ಅವರು ಯಾವುದೇ ದಾಖಲೆಗಳನ್ನು ತೋರಿಸಿ ಎಂದು ಕೇಳದೆ ನಮಗೆ ಹಣ ಕೇಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಏಳುವರೆ ಲಕ್ಷ ಅಪ್ಘಾನಿಗಳನ್ನು ಹೊರ ಹಾಕಿದ ಪಾಕ್: ಕಳೆದ ಬೇಸಿಗೆಯಲ್ಲಿ ಪಾಕಿಸ್ತಾನ ಸರ್ಕಾರವು ಸುಮಾರು 7 ಲಕ್ಷ 50 ಸಾವಿರ ಅಫ್ಘಾನಿಗಳನ್ನು ಹೊರ ಹಾಕಿದ ನಂತರ ಪಾಕಿಸ್ತಾನಿ ತಾಲಿಬಾನ್ ಎಂದೂ ಕರೆಯಲ್ಪಡುವ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ ಉಗ್ರಗಾಮಿ ಸಂಘಟನೆಯು ಉಗ್ರಗಾಮಿ ದಾಳಿಗಳನ್ನು ತೀವ್ರಗೊಳಿಸಿದೆ ಎಂದು ಸರ್ಕಾರ ಉಲ್ಲೇಖಿಸಿದೆ.
ಇಮ್ರಾನ್ ಖಾನ್ ಅವರನ್ನು ಜೈಲಿಗಟ್ಟಿರುವುದನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ಅಫ್ಘಾನಿಸ್ತಾನದ ಪಾತ್ರವಿದೆ ಎಂದು ಪಾಕಿಸ್ತಾನ ಸರ್ಕಾರ ಮತ್ತು ಪೊಲೀಸರು ಆರೋಪಿಸುತ್ತಿದ್ದಾರೆ.
ನಮ್ಮ ಬದುಕು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ: ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಸ್ಥಳಾಂತರಗೊಳ್ಳಲು ಕಾಯುತ್ತಿರುವ ಅಫ್ಘಾನಿಗಳು ತಾವು ರಾಜಕೀಯ ವಿವಾದದ ಮಧ್ಯೆ ಸಿಲುಕಿಕೊಂಡಿದ್ದೇವೆ ಎಂದು ಹೇಳಿದ್ದಾರೆ. "ಇಲ್ಲಿಗೆ ಬಂದ ನಂತರ, ನಾವು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ" ಎಂದು ತನ್ನ ಕುಟುಂಬಕ್ಕೆ ಅಮೆರಿಕದ ವೀಸಾಗಾಗಿ ಕಾಯುತ್ತಿರುವ ಅಫ್ಘಾನ್ ಮುಸ್ತಫಾ ಹೇಳಿದರು. ಬಂಧನದ ಭಯದಿಂದ ತನ್ನ ಕುಟುಂಬ ದಿನಸಿ ಮತ್ತು ಔಷಧಿಗಳನ್ನು ಖರೀದಿಸಲು ಮುಕ್ತವಾಗಿ ಹೊರಗೆ ಹೋಗಲು ಸಹ ಸಾಧ್ಯವಾಗುತ್ತಿಲ್ಲ ಎಂದು 31 ವರ್ಷದ ಮುಸ್ತಫಾ ಹೇಳಿದರು.
"ನೀವು ಅಫ್ಘಾನ್ ಎಂದು ಅವರಿಗೆ ಗೊತ್ತಾದರೆ, ನಿಮ್ಮ ಬಳಿ ವೀಸಾ ಇರಲಿ ಅಥವಾ ಇಲ್ಲದಿರಲಿ ಅವರು ನಿಮ್ಮನ್ನು ಬಂಧಿಸುತ್ತಾರೆ ಅಥವಾ ಸುಲಿಗೆ ಮಾಡುತ್ತಾರೆ" ಎಂದು ಅವರು ಆತಂಕ ವ್ಯಕ್ತ ಪಡಿಸಿದರು. ಕಾಬೂಲ್ನಲ್ಲಿ ಅಫ್ಘಾನ್ ತಾಲಿಬಾನ್ ಅಧಿಕಾರಕ್ಕೆ ಮರಳಿದ ಮೂರು ವರ್ಷಗಳ ನಂತರ, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ದೇಶಗಳು ಅಲ್ಲಿ ತಮ್ಮ ರಾಯಭಾರ ಕಚೇರಿಗಳನ್ನು ಇನ್ನೂ ತೆರೆದಿಲ್ಲ. ಹೀಗಾಗಿ ಅಫ್ಘಾನಿಗಳು ಪಾಕಿಸ್ತಾನ ಸರ್ಕಾರದ ಮೂಲಕವೇ ತಮ್ಮ ವೀಸಾ ಅರ್ಜಿಗಳನ್ನು ಸಲ್ಲಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ರಾಜಧಾನಿ ಇಸ್ಲಾಮಾಬಾದ್ನಿಂದ ವೀಸಾವನ್ನು ಪ್ರಕ್ರಿಯೆಗೊಳಿಸುವುದಾಗಿ ಹೇಳಿದ ಯುರೋಪಿಯನ್ ರಾಷ್ಟ್ರವು ಶಹರ್ ಜಾದ್ಗೆ ಪಾಕಿಸ್ತಾನಕ್ಕೆ ಹೋಗುವಂತೆ ತಿಳಿಸಿತ್ತು. ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಮತ್ತು ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ, ಕೆನಡಾ, ಜರ್ಮನಿ ಮತ್ತು ಬ್ರಿಟನ್ಗೆ ಸ್ಥಳಾಂತರಕ್ಕಾಗಿ ಕಾಯುತ್ತಿರುವ 44,000 ಕ್ಕೂ ಹೆಚ್ಚು ಅಫ್ಘಾನಿ ಪ್ರಜೆಗಳ ಸ್ಥಳಾಂತರವನ್ನು ತ್ವರಿತಗೊಳಿಸುವಂತೆ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಜುಲೈನಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಕರೆ ನೀಡಿದೆ.
ಯುಎನ್ಎಚ್ ಸಿಆರ್ ಪ್ರಕಾರ, ಪಾಕಿಸ್ತಾನವು ಪ್ರಸ್ತುತ ಸುಮಾರು 1.5 ಮಿಲಿಯನ್ ಅಫ್ಘಾನ್ ನಿರಾಶ್ರಿತರು ಮತ್ತು ಇತರ ನಿರಾಶ್ರಿತರಿಗೆ ಆಶ್ರಯ ನೀಡಿದೆ. ಜೊತೆಗೆ ವಿವಿಧ ಕಾನೂನು ಸ್ಥಾನಮಾನಗಳ 1.5 ದಶಲಕ್ಷಕ್ಕೂ ಹೆಚ್ಚು ಅಫ್ಘಾನಿಸ್ತಾನಿಗಳಿಗೆ ಆಶ್ರಯ ನೀಡಿದೆ. ಅಫ್ಘಾನಿಸ್ತಾನದೊಂದಿಗಿನ ರಾಜಕೀಯ ಸಂಬಂಧಗಳು ಹದಗೆಟ್ಟಿದ್ದರಿಂದ ಮತ್ತು ಪಾಕಿಸ್ತಾನದ ಆರ್ಥಿಕ ಮತ್ತು ಭದ್ರತಾ ಪರಿಸ್ಥಿತಿಗಳು ಹದಗೆಟ್ಟಿದ್ದರಿಂದ ದಾಖಲೆರಹಿತ ಆಫ್ಘನ್ನರನ್ನು ಗಡಿಪಾರು ಮಾಡುವ ಅಭಿಯಾನವನ್ನು ಪ್ರಾರಂಭಿಸಲಾಯಿತು.
ಇದನ್ನೂ ಓದಿ : ಮಾಂಟೆನೆಗ್ರೊ: ಮಕ್ಕಳು ಸೇರಿ 12 ಜನರನ್ನು ಕೊಂದು ತಲೆಗೆ ಗುಂಡು ಹಾರಿಸಿಕೊಂಡ ಬಂದೂಕುಧಾರಿ - MONTENEGRO SHOOTING RAMPAGE