ಬಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದು, ಇಂದು ಪತ್ನಿ ವಿಜಯಲಕ್ಷ್ಮಿ ಅವರನ್ನು ಭೇಟಿಯಾಗಿದ್ದಾರೆ. ಜೈಲು ನಿಯಮಗಳನ್ನು ಪಾಲಿಸಿದ ಜೈಲಧಿಕಾರಿಗಳು ಸರಿಯಾದ ಸಮಯಕ್ಕೆ ಅವರ ಭೇಟಿಗೆ ಅವಕಾಶ ಕೊಟ್ಟಿದ್ದಾರೆ.
4.30ರಿಂದ 5.30ಕ್ಕೆ ವಿಜಿಟರ್ಸ್ಗೆ ಅವಕಾಶವಿದೆ. ಇಂದು 20 ನಿಮಿಷ ಮುಂಚಿತವಾಗಿಯೇ ಬಂದ ವಿಜಯಲಕ್ಷ್ಮಿ ವಿಜಿಟರ್ಸ್ ರೂಮ್ನಲ್ಲಿ ಕಾದು ಕುಳಿತಿದ್ದರು. 4.29ಕ್ಕೆ ಹೈ ಸೆಕ್ಯೂರಿಟಿ ಸೆಲ್ನಿಂದ ವಿಜಿಟರ್ಸ್ ರೂಮ್ಗೆ ದರ್ಶನ್ ಅವರನ್ನು ಜೈಲು ಸಿಬ್ಬಂದಿ ಕರೆ ತಂದರು. ನಟ ತೂಕ ಕಳೆದುಕೊಂಡಂತೆ ತೋರುತ್ತಿತ್ತು. ಕೆಲ ಹೊತ್ತು ಮಾತನಾಡಿ ಹೊರಬಂದರು. ವಿಜಯಲಕ್ಷ್ಮಿ ಜೊತೆಗೆ ಸಹೋದರ ದಿನಕರ್ ಕೂಡಾ ಇದ್ದರು.
ಜೈಲು ನಿಯಮದ ಪ್ರಕಾರ ಕೇವಲ 30 ನಿಮಿಷ ಮಾತನಾಡಲು ಅವಕಾಶವಿದೆ. ಹೆಚ್ಚಿನ ಸಮಯ ಮಾತನಾಡಬೇಕಾದರೆ ಜೈಲು ಅಧೀಕ್ಷಕರ ಅನುಮತಿ ಕಡ್ಡಾಯ. ವಿಜಯಲಕ್ಷ್ಮಿ ಮತ್ತು ದಿನಕರ್ ಭೇಟಿ ಬಳಿಕ ದರ್ಶನ್ ಅವರನ್ನು ಸೆಲ್ಗೆ ಜೈಲು ಪೊಲೀಸರು ವಾಪಸ್ ಕರೆದುಕೊಂಡು ಹೋದರು. ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಮಾತುಕತೆ ಮುಕ್ತಾಯಗೊಳಿಸಿದ್ದಾರೆ. ದರ್ಶನ್ ಚಾರ್ಜ್ಶೀಟ್, ಬೇಲ್, ಅಡ್ವೊಕೇಟ್ ಜೊತೆಗೆ ಮಗನ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಜೈಲು ನಿಯಮದಂತೆ ವಿಸಿಟರ್ ಸೆಲ್ನಲ್ಲೇ ಅರ್ಧ ಗಂಟೆ ಮಾತುಕತೆ ನಡೆಸಿದರು. ನಂತರ ದರ್ಶನ್ ಅವರಿಗೆ ಡ್ರೈ ಫ್ರೂಟ್ ಮತ್ತು ಬೇಕರಿ ತಿನಿಸನ್ನು ವಿಜಯಲಕ್ಷಿ ಕೊಟ್ಟು ಅಲ್ಲಿಂದ ಹೊರಟಿದ್ದಾರೆ
ಪತ್ನಿ ವಿಜಯಲಕ್ಷ್ಮಿ ಆಗಮನದ ಹಿನ್ನೆಲೆ, ಜೈಲು ಅಧಿಕಾರಿಗಳನ್ನು ದರ್ಶನ್ ಭಾಮೈದ ಭೇಟಿ ಮಾಡಿದ್ದರು. ಸುಶಾಂತ್ ನಾಯ್ಡು ಅವರು ಜೈಲು ಅಧೀಕ್ಷಕಿ ಲತಾ ಅವರನ್ನು ಭೇಟಿ ಮಾಡಿ ಸಂಜೆಯ ಭೇಟಿಗೆ ಅನುಮತಿ ಪಡೆದುಕೊಂಡಿದ್ದರು. ವಿಜಯಲಕ್ಷ್ಮಿ ಸೇರಿ ಮೂವರು ಕುಟುಂಬ ಸದಸ್ಯರ ಭೇಟಿಗೆ ಅನುಮತಿ ದೊರಕಿತ್ತು.