ನವದೆಹಲಿ:ಕೇಂದ್ರ ಬಜೆಟ್ನಲ್ಲಿ ಈ ಬಾರಿ ಉದ್ಯೋಗ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಲ ಯೋಜನೆಗಳನ್ನು ಹಣಕಾಸು ಸಚಿವರು ಘೋಷಿಸಿದ್ದಾರೆ. ಹೊಸದಾಗಿ ಉದ್ಯೋಗ ಸೇರುವ 30 ಲಕ್ಷ ಯುವಕರಿಗೆ ಒಂದು ತಿಂಗಳ ಭವಿಷ್ಯ ನಿಧಿ (ಪಿಎಫ್) ನೆರವು ಘೋಷಿಸಿದ್ದಾರೆ.
ಅಲ್ಲದೆ ಮೂರು ಉದ್ಯೋಗಾಧಾರಿತ ಯೋಜನೆಗಳು ಮೋದಿ 3.O ಸರ್ಕಾರದಲ್ಲಿ ಇಂದು ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿದ್ಯಾರ್ಥಿಗಳು ಮತ್ತು ಉದ್ಯೋಗಾಂಕ್ಷಿಗಳಿಗೂ ಬಂಪರ್ ಕೊಡುಗೆಗಳನ್ನು ಪ್ರಕಟಿಸಿದ್ದಾರೆ.
ಇ ವೋಚರ್ಸ್ ಅಡಿ ವಿದ್ಯಾರ್ಥಿಗಳ ಉನ್ನತ ಶೈಕ್ಷಣಿಕ ಅನುಕೂಲಕ್ಕೆ 10 ಲಕ್ಷ ರೂಪಾಯಿ ಸಾಲ ಸೌಲಭ್ಯ ನೀಡಲಾಗುವುದು. ಇದು ವಾರ್ಷಿಕ ಶೇ. 3 ಬಡ್ಡಿ ದರ ಇರಲಿದ್ದು, ಪ್ರತಿ ವರ್ಷ 1 ಲಕ್ಷ ವಿದ್ಯಾರ್ಥಿಗಳಿಗೆ ಸೌಲಭ್ಯ ಸಿಗಲಿದೆ. ಇನ್ನಿತರ ಸೌಲಭ್ಯಗಳ ಸಂಕ್ಷಿಪ್ತ ಮಾಹಿತಿ ಈ ಕಳಗಿನಂತಿದೆ..
- 1.48 ಲಕ್ಷ ಕೋಟಿ ರೂ. ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ಮೀಸಲು
- ಕೇಂದ್ರದಿಂದ ನೂತನ ಕೌಶಲ್ಯಾಭಿವೃದ್ಧಿ ಯೋಜನೆ ಘೋಷಣೆ
- ಮುಂದಿನ ಐದು ವರ್ಷಗಳ ಅವಧಿಯಲ್ಲಿ 20 ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ
- ಉದ್ಯಮಗಳೊಂದಿಗೆ ಕೈಜೋಡಿಸಿ ವೃತ್ತಿನಿರತ ಮಹಿಳೆಯರಿಗೆ ಹಾಸ್ಟೆಲ್ ಸೌಲಭ್ಯ
- ಮಾದರಿ ಕೌಶಲ್ಯ ಸಾಲ ಯೋಜನೆ - ಪ್ರತಿ ವರ್ಷ 25 ಸಾವಿರ ವಿದ್ಯಾರ್ಥಿಗಳಿಗೆ ನೆರವು - ಸರ್ಕಾರದ ನಿಧಿಯಿಂದ ₹7.5 ಲಕ್ಷದವರೆಗೆ ಸಾಲ ಸೌಲಭ್ಯ
- 1 ಕೋಟಿ ಯುವಕರಿಗೆ 500 ಉನ್ನತ ಖಾಸಗಿ ಕಂಪನಿಗಳಲ್ಲಿ ಇಂಟರನ್ಶಿಪ್ ಸೌಲಭ್ಯಕ್ಕೆ ಕ್ರಮ ಜೊತೆಗೆ ಪ್ರತಿ ತಿಂಗಳು 5 ಸಾವಿರ ರೂ. ಭತ್ಯೆ
- ಮುದ್ರಾ ಯೋಜನೆಯಡಿ ಈವರೆಗೆ ನೀಡಲಾಗುತ್ತಿದ್ದ 10 ಲಕ್ಷ ರೂ. ಸಾಲ ಸೌಲಭ್ಯ 20 ಲಕ್ಷ ರೂಪಾಯಿಗೆ ಏರಿಕೆ.
ಮುಂದಿನ ಐದು ವರ್ಷಗಳಲ್ಲಿ 4.1 ಕೋಟಿ ಯುವಕರಿಗೆ ಉದ್ಯೋಗ ಕಲ್ಪಿಸಲು ರೂ. 2 ಲಕ್ಷ ಕೋಟಿ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಶಿಕ್ಷಣ, ಉದ್ಯೋಗ, ಕೌಶಲ್ಯ ತರಬೇತಿಗಾಗಿ ರೂ. 1.48 ಲಕ್ಷ ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯ ತರಬೇತಿಗೆ ತಮ್ಮ ಸರ್ಕಾರ ಒತ್ತು ನೀಡಲಿದೆ ಎಂದು ಹೇಳಿದರು. ಮುಂದಿನ ಐದು ವರ್ಷಗಳಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಯ ಮೂಲಕ 20 ಲಕ್ಷ ಯುವಕರಿಗೆ ತರಬೇತಿ ನೀಡಲಾಗುವುದು ಎಂದು ಹಣಕಾಸು ಸಚಿವರು ತಿಳಿಸಿದರು.