ನವದೆಹಲಿ: 2024 ರ ನವೆಂಬರ್ನಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ)ಗೆ ನಿವ್ವಳ 14.63 ಲಕ್ಷ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ ಎಂದು ಸಂಸ್ಥೆ ಬುಧವಾರ ಪ್ರಕಟಿಸಿದೆ. ಇದು ಅಕ್ಟೋಬರ್ಗೆ ಹೋಲಿಸಿದರೆ ಶೇಕಡಾ 9.07 ರಷ್ಟು ಹೆಚ್ಚಳವಾಗಿದೆ.
ಇದಲ್ಲದೇ, ವರ್ಷದಿಂದ ವರ್ಷಕ್ಕೆ ವಿಶ್ಲೇಷಣೆಯ ಪ್ರಕಾರ - 2023 ರ ನವೆಂಬರ್ಗೆ ಹೋಲಿಸಿದರೆ ನಿವ್ವಳ ಸದಸ್ಯರ ಸೇರ್ಪಡೆಯಲ್ಲಿ ಶೇಕಡಾ 4.88 ರಷ್ಟು ಬೆಳವಣಿಗೆಯಾಗಿರುವುದು ಕಂಡು ಬಂದಿದೆ. ದೇಶದಲ್ಲಿ ಉದ್ಯೋಗಗಳ ಸಂಖ್ಯೆ ಹೆಚ್ಚಾಗಿರುವುದು ಮತ್ತು ಉದ್ಯೋಗಿಗಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿರುವುದನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಸಂಸ್ಥೆಯ ಅಧಿಕೃತ ಹೇಳಿಕೆ ತಿಳಿಸಿದೆ.
8.74 ಲಕ್ಷ ಹೊಸ ಸದಸ್ಯರ ನೋಂದಣಿ: ಇಪಿಎಫ್ಒ ಗೆ 2024 ರ ನವೆಂಬರ್ನಲ್ಲಿ ಸುಮಾರು 8.74 ಲಕ್ಷ ಹೊಸ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ. ಹೊಸ ಸದಸ್ಯರ ಸೇರ್ಪಡೆಯು ಹಿಂದಿನ ಅಕ್ಟೋಬರ್ 2024 ಕ್ಕೆ ಹೋಲಿಸಿದರೆ ಶೇಕಡಾ 16.58 ರಷ್ಟು ಏರಿಕೆಯಾಗಿದೆ. ಇದಲ್ಲದೇ, ವರ್ಷದಿಂದ ವರ್ಷದ ವಿಶ್ಲೇಷಣೆಯ ಪ್ರಕಾರ- 2023 ರ ನವೆಂಬರ್ನಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೊಸ ಸದಸ್ಯರ ಸೇರ್ಪಡೆಯಲ್ಲಿ ಶೇಕಡಾ 18.8 ರಷ್ಟು ಬೆಳವಣಿಗೆಯಾಗಿದೆ.
ನೋಂದಾಯಿತರಲ್ಲಿ ಹೆಚ್ಚಿನವರು 18-25 ವಯೋಮಾನದವರು: ನೋಂದಾಯಿತ ಸದಸ್ಯರ ಪೈಕಿ 18-25 ವಯೋಮಾನದವರೇ ಅತ್ಯಧಿಕವಾಗಿರುವುದು ಗಮನಾರ್ಹವಾಗಿದೆ. 18-25 ವಯೋಮಾನದ 4.81 ಲಕ್ಷ ಹೊಸ ಸದಸ್ಯರು ಇಪಿಎಫ್ಒಗೆ ಸೇರ್ಪಡೆಯಾಗಿದ್ದು, ಇದು 2024 ರ ನವೆಂಬರ್ನಲ್ಲಿ ಸೇರ್ಪಡೆಯಾದ ಒಟ್ಟು ಹೊಸ ಸದಸ್ಯರ ಶೇಕಡಾ 54.97 ರಷ್ಟಿದೆ. 18-25 ವಯೋಮಾನದ ಹೊಸ ಸದಸ್ಯರ ಸೇರ್ಪಡೆಯು 2024 ರ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಶೇಕಡಾ 9.56 ರಷ್ಟು ಹೆಚ್ಚಳವಾಗಿದೆ. ಇದು 2023 ರ ನವೆಂಬರ್ ಗೆ ಹೋಲಿಸಿದರೆ ಶೇಕಡಾ 13.99 ರಷ್ಟು ಏರಿಕೆಯಾಗಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
ಇದಲ್ಲದೇ, ನವೆಂಬರ್ 2024 ರಲ್ಲಿ 18-25 ವಯೋಮಾನದವರ ನಿವ್ವಳ ವೇತನದಾರರ ದತ್ತಾಂಶವು ಸರಿಸುಮಾರು 5.86 ಲಕ್ಷವಾಗಿದ್ದು, ಇದು ಹಿಂದಿನ ಅಕ್ಟೋಬರ್ 2024 ಕ್ಕೆ ಹೋಲಿಸಿದರೆ ಶೇಕಡಾ 7.96 ರಷ್ಟು ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ. ವೇತನದಾರರ ದತ್ತಾಂಶದ ಲಿಂಗವಾರು ವಿಶ್ಲೇಷಣೆಯ ಪ್ರಕಾರ- ತಿಂಗಳಲ್ಲಿ ಸೇರ್ಪಡೆಯಾದ ಹೊಸ ಸದಸ್ಯರ ಪೈಕಿ ಸುಮಾರು 2.40 ಲಕ್ಷ ಹೊಸ ಸದಸ್ಯರು ಮಹಿಳೆಯರಾಗಿದ್ದಾರೆ. ಇದು 2024 ರ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಶೇಕಡಾ 14.94 ರಷ್ಟು ಹೆಚ್ಚಳವಾಗಿದೆ. ಈ ಅಂಕಿ - ಅಂಶವನ್ನು 2023 ರ ನವೆಂಬರ್ಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇಕಡಾ 23.62 ರಷ್ಟು ಗಮನಾರ್ಹ ಬೆಳವಣಿಗೆಯಾಗಿರುವುದು ಕಂಡು ಬರುತ್ತದೆ.
ಇದನ್ನೂ ಓದಿ : ಭಾರತದ ಉದ್ಯೋಗ ನೇಮಕಾತಿ ಶೇ 31ರಷ್ಟು ಹೆಚ್ಚಳ: ಎಐ ನೌಕರಿ ಮಾರುಕಟ್ಟೆ ಶೇ 42ರಷ್ಟು ಬೆಳವಣಿಗೆ - JOB MARKET