ಸಕಲೇಶಪುರ(ಹಾಸನ): ಮೃತ ಕ್ಯಾಪ್ಟನ್ ಅರ್ಜುನ ಆನೆ ಸ್ಮಾರಕದ ಸ್ಥಳದಲ್ಲಿ ಸರಿಯಾದ ಮೂಲ ಸೌಕರ್ಯಗಳಿಲ್ಲದೇ ಉದ್ಘಾಟನೆಗೆ ನಾವು ಅವಕಾಶ ನೀಡುವುದಿಲ್ಲ ಶಾಸಕ ಸಿಮೆಂಟ್ ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಅರ್ಜುನ ಆನೆ ನಮ್ಮ ನಾಡಿಗೆ ಒಂದು ಗೌರವ ತಂದು ಕೊಟ್ಟಿದೆ. ಅದಕ್ಕೆ ನಾವು ಯಾವ ರೀತಿ ಗೌರವ ಕೊಡಬೇಕು!. ಸ್ಮಾರಕ ನೋಡಲು ಬರುವ ಪ್ರವಾಸಿಗರಿಗೆ ಯಾವುದೇ ಮೂಲಸೌಕರ್ಯವಿಲ್ಲದೇ ಏಕಾಏಕಿ ಉದ್ಘಾಟನೆ ಮಾಡುವುದು ಎಷ್ಟು ಸರಿ. ಅಗೌರವ ತೋರಿದಂತೆ ಆಗುವುದಿಲ್ಲವೇ..? ಹಾಗಾಗಿ ನಾನು ಕಾರ್ಯಕ್ರಮವನ್ನು ವಿರೋಧಿಸಿದ್ದೇನೆ. ಮೊದಲು ಮೂಲಸೌಕರ್ಯ ನೀಡಬೇಕು" ಎಂದು ಶಾಸಕ ಸಿಮೆಂಟ್ ಮಂಜು ಮಾಧ್ಯಮದ ಮೂಲಕ ಸರ್ಕಾರದ ವಿರುದ್ಧ ಗುಡುಗಿದರು.
"ಯಾವುದೇ ಮೂಲ ಸೌಕರ್ಯಗಳನ್ನು ಮಾಡದೇ ಸ್ಮಾರಕ ಉದ್ಘಾಟನೆಗೆ ಹೊರಟಿರುವುದು, ಅರ್ಜುನನಿಗೆ ಮಾಡುತ್ತಿರುವ ಅಗೌರವವಾಗಿದೆ. ಈ ವಿಚಾರವಾಗಿ ನಾನು ಅರಣ್ಯ ಸಚಿವ ಈಶ್ವರ ಖಂಡ್ರೆ ಜೊತೆ ಮಾತನಾಡಿದೆ. ಅವರಿಗೆ ಇಲ್ಲಿನ ಮಾಹಿತಿ ನೀಡಿದೆ. ಸ್ಮಾರಕ ನಿರ್ಮಾಣಕ್ಕೆ 5 ಕೋಟಿ ಕೊಡಬೇಕು ಎಂದು ಮನವಿ ಮಾಡಿದ್ದೆ. ಸದ್ಯ 50 ಲಕ್ಷ ನೀಡುವುದಾಗಿ ಹೇಳಿ ಕನಿಷ್ಠ 25 ಲಕ್ಷ ಕೂಡಾ ನೀಡಿಲ್ಲ. ಹೀಗಾದರೆ ಹೇಗೆ. ಸ್ಮಾರಕಕ್ಕೆ ಬರುವವರಿಗೆ ಆಸನದ ವ್ಯವಸ್ಥೆ, ರಸ್ತೆ ಕಾಮಗಾರಿ, ನೀರಿನ ವ್ಯವಸ್ಥೆ, ಹೀಗೆ ಮೂಲ ಸೌಕರ್ಯಗಳನ್ನು ನೀಡಬೇಕು. ಆ ಕಾಮಗಾರಿಗಳು ಆಗುವ ತನಕ ಉದ್ಘಾಟನೆ ಮಾಡಬಾರದು ಎಂದು ಮನವಿ ಮಾಡಿದ್ದೇನೆ. ಅವರು ಸರಿ ಉದ್ಘಾಟನೆ ಮುಂದೂಡೋಣ ಎಂದಿದ್ದಾರೆ" ಎಂದರು.
ಇನ್ನು ಈಗಾಗಲೇ ಸಕಲೇಶಪುರ ತಾಲೂಕು, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ರಮೇಶ್ ಪೂಜಾರಿ ಕೂಡ ಈ ಕುರಿತಾಗಿ ಧ್ವನಿಯೆತ್ತಿದ್ದರು. ಈಗ ಸ್ಮಾರಕ ನಿರ್ಮಾಣ ಉದ್ಘಾಟನೆಗೆ ಶಾಸಕರು ವಿರೋಧ ವ್ಯಕ್ತಪಡಿಸಿದ್ದರಿಂದ ಕನ್ನಡಪರ ಸಂಘಟನೆಗಳು ಸಾಥ್ ನೀಡಿವೆ.
ಇದನ್ನೂ ಓದಿ: ಮೈಸೂರಲ್ಲಿ ಅರ್ಜುನ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ ಸಂಸದ ಯದುವೀರ್