ರಾಷ್ಟ್ರೀಯ ಚಂಡಮಾರುತ ಸನ್ನದ್ಧತೆ ಯೋಜನೆಯಡಿ ಭಾರತದ ಮೊದಲ ಸಂಪೂರ್ಣ ಸಮಗ್ರ ವಿಪತ್ತು ಎಚ್ಚರಿಕೆ ವ್ಯವಸ್ಥೆಯಾದ 'ಕವಚಮ್' ಅನ್ನು ಕೇರಳ ಸರ್ಕಾರ ಜಾರಿಗೊಳಿಸಿದೆ. ಕೇರಳ ಎಚ್ಚರಿಕೆ, ಬಿಕ್ಕಟ್ಟು ಮತ್ತು ಅಪಾಯ ನಿರ್ವಹಣಾ ವ್ಯವಸ್ಥೆ ಎಂಬುದರ ಸಂಕ್ಷಿಪ್ತ ರೂಪ ಕವಚಮ್ (Kerala Warnings, Crisis and Hazard Management System -KaWaCHaM) ಆಗಿದೆ.
ತೀವ್ರ ವಿಪತ್ತುಗಳ ಸಮಯದಲ್ಲಿ ತ್ವರಿತವಾಗಿ ಸಾರ್ವಜನಿಕರಿಗೆ ಸಂದೇಶಗಳನ್ನು ರವಾನಿಸಲು ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಇದು 126 ಸೈರನ್-ಸ್ಟ್ರೋಬ್ ದೀಪಗಳು, ತುರ್ತು ಕಾರ್ಯಾಚರಣೆ ಕೇಂದ್ರಗಳು, ನಿರ್ಧಾರ-ಬೆಂಬಲ ಸಾಫ್ಟ್ ವೇರ್ ಮತ್ತು ಡೇಟಾ ಹಬ್ ಅನ್ನು ಒಳಗೊಂಡಿದೆ. ಪ್ರಸ್ತುತ, ರಾಜ್ಯಾದ್ಯಂತ 91 ಸೈರನ್ಗಳನ್ನು ಸ್ಥಾಪಿಸಲಾಗಿದ್ದು, ಒಟ್ಟಾರೆ 126 ಸ್ಥಳಗಳಲ್ಲಿ ಸೈರನ್ ಸ್ಥಾಪನೆಯ ಗುರಿ ಹೊಂದಲಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ಮತ್ತು ವಿಶ್ವ ಬ್ಯಾಂಕ್ನಿಂದ ಧನಸಹಾಯ ಪಡೆದ ಈ ಉಪಕ್ರಮವನ್ನು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್ಡಿಎಂಎ) ನಿರ್ವಹಣೆ ಮಾಡುತ್ತಿದೆ. ಸೈರನ್ಗಳು ಮತ್ತು ಮೊಬೈಲ್ ಸಂದೇಶಗಳ ಮೂಲಕ ನೈಜ-ಸಮಯದಲ್ಲಿ ಎಚ್ಚರಿಕೆಯ ಸಂದೇಶಗಳನ್ನು ರವಾನಿಸುವ ಮೂಲಕ ಸಾರ್ವಜನಿಕರ ಸುರಕ್ಷತೆ ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ.
ತ್ವರಿತವಾಗಿ ಜನರನ್ನು ಸ್ಥಳಾಂತರಿಸಲು ನೆರವು: "ಈ ವ್ಯವಸ್ಥೆಯು ಸಾರ್ವಜನಿಕರಿಗೆ ಮತ್ತು ರಕ್ಷಣಾ ಪಡೆಗಳಿಗೆ ನಿಖರವಾದ ಎಚ್ಚರಿಕೆ ಸಂದೇಶಗಳನ್ನು ರವಾನಿಸಲು ನಮಗೆ ಅನುವು ಮಾಡಿಕೊಡುತ್ತದೆ. ಅಗತ್ಯವಿದ್ದರೆ ತ್ವರಿತವಾಗಿ ಜನರನ್ನು ಸ್ಥಳಾಂತರಿಸಲು ಇದು ಅನುಕೂಲ ಮಾಡಿಕೊಡುತ್ತದೆ" ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಈ ವ್ಯವಸ್ಥೆಯು ತುರ್ತು ಕಾರ್ಯಾಚರಣೆ ಕೇಂದ್ರಗಳು, ಕಣ್ಗಾವಲು ಕ್ಯಾಮೆರಾಗಳು ಮತ್ತು 24/7 ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಗಳನ್ನು ಹೊಂದಿದೆ. ಈ ನಿಯಂತ್ರಣ ಕೊಠಡಿಗಳನ್ನು ವರ್ಚುಯಲ್ ಖಾಸಗಿ ನೆಟ್ ವರ್ಕ್ ಮೂಲಕ ಸಂಪರ್ಕಿಸಲಾಗಿದ್ದು, ವಿಪತ್ತು ಪೀಡಿತ ಪ್ರದೇಶಗಳ ತ್ವರಿತ ಮೇಲ್ವಿಚಾರಣೆ ಮತ್ತು ಯಾವುದೇ ಅಪಾಯದ ಸಂದರ್ಭದಲ್ಲಿ ತ್ವರಿತ ಪ್ರತಿಕ್ರಿಯೆ ನೀಡಲು ಅನುವು ಮಾಡಿಕೊಡುತ್ತದೆ. ಈ ವ್ಯವಸ್ಥೆಯು ವಿಪತ್ತು ನಿರ್ವಹಣೆಗೆ ಸಹಾಯ ಮಾಡಲು ಜಲಮೂಲಗಳು, ರಸ್ತೆಗಳು, ಸೇತುವೆಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ಇತರ ಪ್ರಮುಖ ಮೂಲ ಸೌಕರ್ಯಗಳ ಸ್ಥಳಗಳ ನಿರ್ಣಾಯಕ ಡೇಟಾ ಸಹ ಸಂಗ್ರಹಿಸುತ್ತದೆ.
ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಯೋಜನೆಯ ಪ್ರಮುಖ ಭಾಗವಾಗಿದೆ. "ಸೈರನ್ಗಳ ಮೂಲಕ ನೀಡಲಾಗುವ ಎಚ್ಚರಿಕೆಗಳು ಮತ್ತು ತೆಗೆದುಕೊಳ್ಳಬೇಕಾದ ಸೂಕ್ತ ಕ್ರಮಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದು ಬಹಳ ಮುಖ್ಯ" ಎಂದು ಪಿಣರಾಯಿ ವಿಜಯನ್ ತಿಳಿಸಿದರು. ಮೊದಲ ಹಂತದ ಭಾಗವಾಗಿ ಪ್ರಸ್ತುತ 91 ಸೈರನ್ ಗಳನ್ನು ಅಳವಡಿಸಲಾಗಿದೆ.
ಇದು ಹೇಗೆ ಕೆಲಸ ಮಾಡುತ್ತದೆ?: 'ಕವಾಚಮ್' ವ್ಯವಸ್ಥೆಯು ನಾಗರಿಕ ಪೋರ್ಟಲ್ ಮತ್ತು 24 ಗಂಟೆಗಳ ತುರ್ತು ಕರೆ ಕೇಂದ್ರಗಳನ್ನು ಹೊಂದಿದೆ. ಈ ವೇದಿಕೆಗಳ ಮೂಲಕ, ಸಾರ್ವಜನಿಕರು ಅಪಾಯಗಳನ್ನು ವರದಿ ಮಾಡಬಹುದು ಅಥವಾ ತುರ್ತು ಸಂದರ್ಭಗಳಲ್ಲಿ ಸಹಾಯ ಕೋರಬಹುದು. ಕರೆ ಮಾಡಿದವರ ಸ್ಥಳದ ಮಾಹಿತಿ ಸೇರಿದಂತೆ ಇತರ ಮಾಹಿತಿಯನ್ನು ತಕ್ಷಣವೇ ಹತ್ತಿರದ ರಕ್ಷಣಾ ತಂಡಗಳಿಗೆ ವರ್ಗಾಯಿಸಲಾಗುತ್ತದೆ ಹಾಗೂ ನಿಯಂತ್ರಣ ಕೊಠಡಿಗಳ ಮೂಲಕ ಕ್ರಮಗಳನ್ನು ಟ್ರ್ಯಾಕ್ ಮಾಡಲಾಗುತ್ತದೆ. ಪೊಲೀಸ್, ಅಗ್ನಿಶಾಮಕ ದಳ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್) ನಿಯಂತ್ರಣ ಕೊಠಡಿಗಳನ್ನು ಸಹ ಈ ಜಾಲದಲ್ಲಿ ಸಂಯೋಜಿಸಲಾಗಿದೆ.
ಇದನ್ನೂ ಓದಿ : 'ತೆರಿಗೆ ಭಯೋತ್ಪಾದನೆಗೆ ಬಲಿಯಾದ ಮಧ್ಯಮ ವರ್ಗ': ಕೇಂದ್ರದ ಮುಂದೆ 7 ಬೇಡಿಕೆಗಳನ್ನಿಟ್ಟ ಕೇಜ್ರಿವಾಲ್ - TAX TERRORISM