ಗುಜರಾತ್: ಪವಿತ್ರ ಕ್ಷೇತ್ರ ದ್ವಾರಕಾಗೆ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್ ಪ್ರಪಾತಕ್ಕೆ ಬಿದ್ದು ಐವರು ಮೃತಪಟ್ಟು, 17 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಗುಜರಾತ್ನ ಡಾಂಗ್ ಜಿಲ್ಲೆಯಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ.
"ನಸುಕಿನ ಜಾವ 4.15ಕ್ಕೆ ಸಾಪುರತಾರಾ ಬೆಟ್ಟ ಪ್ರದೇಶದಲ್ಲಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡಿದ್ದರಿಂದ ತಡೆಗೋಡೆಗೆ ಡಿಕ್ಕಿ ಹೊಡೆದು ಪ್ರಪಾತಕ್ಕೆ ಬಿದ್ದಿದೆ. 35 ಅಡಿಗಿಂತಲೂ ಹೆಚ್ಚು ಆಳಕ್ಕೆ ಬಸ್ ಬಿದ್ದಿದೆ. ಬಸ್ನಲ್ಲಿ 48 ಯಾತ್ರಿಕರು ಪ್ರಯಾಣಿಸುತ್ತಿದ್ದರು" ಎಂದು ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಿ.ಪಾಟೀಲ್ ತಿಳಿಸಿದ್ದಾರೆ.
"ಅಪಘಾತದಲ್ಲಿ ಇಬ್ಬರು ಮಹಿಳೆಯರು, ಮೂವರು ಪುರುಷರು ಸೇರಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡ 17 ಜನರನ್ನು ಅಹವಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ" ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.
"ಮಹಾರಾಷ್ಟ್ರದ ತ್ರಯಂಬಕೇಶ್ವರ್‌ನಿಂದ ಗುಜರಾತ್ನ ದ್ವಾರಕಾಗೆ ಖಾಸಗಿ ಬಸ್ನಲ್ಲಿ 48 ಯಾತ್ರಿಕರು ತೆರಳುವಾಗ ಅಪಘಾತ ಘಟಿಸಿದೆ. ಯಾತ್ರಿಕರೆಲ್ಲ ಮಧ್ಯ ಪ್ರದೇಶ ಮೂಲದವರು" ಎಂದು ಎಸ್.ಜಿ.ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾಕುಂಭದಿಂದ ಮರಳುತ್ತಿದ್ದ ಯಾತ್ರಿಗಳಿದ್ದ ಪಿಕಪ್ ವಾಹನ ಅಪಘಾತ; 8 ಸಾವು, 12 ಮಂದಿಗೆ ಗಾಯ