ಬೆಂಗಳೂರು: "ಡಿಸಿಎಂ ಡಿ.ಕೆ.ಶಿವಕುಮಾರ್ ರಾಜ್ಯಕ್ಕೆ ಮುಖ್ಯಮಂತ್ರಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ" ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಕುತೂಹಲದ ಹೇಳಿಕೆ ನೀಡಿದ್ದಾರೆ.
ಸದಾಶಿನಗರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಇಂದು ಭೇಟಿ ನೀಡಿ ನೀರಾವರಿ ಕುರಿತು ಅವರೊಂದಿಗೆ ಚರ್ಚಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಅನಾವಶ್ಯಕವಾಗಿ ಸಿಎಂ ಸಿದ್ದರಾಮಯ್ಯ ಅವರು ಹಬ್ಬಿಸುತ್ತಿರುವ ಗೋಜಲು ಇದು. ಕಾಂಗ್ರೆಸ್ ಪಕ್ಷದ ನೇಮ್ ಆ್ಯಂಡ್ ಫೇಮ್ ಹಾಳು ಮಾಡುತ್ತಿದ್ದಾರೆ. ಇವರೇನು ಕಾಂಗ್ರೆಸ್ ಕಟ್ಟಿದವರಲ್ಲವಲ್ಲ, ಅವರಿಗೆ ಏನಾಗಬೇಕು. ಅವರದ್ದು ಮುಗಿಯಿತಲ್ಲ, ಇದು ಅನಾವಶ್ಯಕ. ಇದೆಲ್ಲ ಬಾಲಿಶತನ, ನಾನ್‌ಸೆನ್ಸ್" ಎಂದರು.
136 ಸ್ಥಾನ ಗೆಲ್ಲಲು ಡಿಕೆಶಿ ಕೊಡುಗೆ ಬಹಳಷ್ಟಿದೆ: "ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನ ಗೆಲ್ಲಲು ಡಿ.ಕೆ.ಶಿವಕುಮಾರ್ ಅವರ ಕೊಡುಗೆ ಬಹಳಷ್ಟಿದೆ. ಅವರದು ಸಾಕಷ್ಟು ಖರ್ಚಾಗಿದೆ. ಚುನಾವಣಾ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಮಾತುಕತೆಯಾಗಿತ್ತು. ಹೀಗಾಗಿ ಮುಂದೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ" ಎಂದು ಹೇಳಿದರು.
ಸಿದ್ದರಾಮಯ್ಯ ಏನು ಕಾಂಗ್ರೆಸ್ ಪಕ್ಷ ಕಟ್ಟಿದವರಲ್ಲವಲ್ಲ - ವಿಶ್ವನಾಥ್ :"ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷವನ್ನು ಕಟ್ಟಿದವರಲ್ಲ. ಕಾಂಗ್ರೆಸ್ ಪಕ್ಷದ ಘನತೆ ಹಾಗೂ ಖ್ಯಾತಿಯನ್ನು ಕಟ್ಟಿಕೊಂಡು ಅವರಿಗೇನು ಆಗಬೇಕು. ಈ ಕಾರಣಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಇದರ ಹಿಂದೆ ಸಿದ್ದರಾಮಯ್ಯನವರಿರುವುದು ಖಚಿತ. ಮಂತ್ರಿಗಳು ಯಾರು ಕೇಳುತ್ತಿದ್ದಾರೆ, ಮಂತ್ರಿಗಳು ನೆಪಮಾತ್ರ" ಎಂದರು.
ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಹಳ್ಳಿಹಕ್ಕಿ: "ಸಿಎಂ ಸಿದ್ದರಾಮಯ್ಯ ಅವರು ಮುಡಾ ಪ್ರಕರಣದಲ್ಲಿ ಮರ್ಯಾದೆ ಕಳೆದುಕೊಂಡಿದ್ದಾರೆ. ಮೈಸೂರು ಜನರಿಗೆ ಮನೆ ಕಟ್ಟಿಕೊಳ್ಳಲು ಒಂದು ಸೈಟ್ ಕೊಡುವುದಿಲ್ಲ. ಬದಲಾಗಿ ಮುಖ್ಯಮಂತ್ರಿ ಹಾಗೂ ಸಚಿವರು ತಮಷ್ಟಕ್ಕೆ ತಾವೇ ನಿವೇಶನಗಳನ್ನು ಬರೆಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರ ಕಾಲದಲ್ಲಿ ಮೈಸೂರು ವಿಜಯನಗರ ಸಾಮ್ರಾಜ್ಯವಾಗಿದೆ. 1200 ರೂ.ಗೆ 50×80 ಅಡಿ ನಿವೇಶನವನ್ನು ಮಾರಾಟ ಮಾಡಿದ್ದಾರೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಚಿನ್ನ, ಬೆಳ್ಳಿಯನ್ನು ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದರು. ಈಗ ನಿವೇಶನಗಳ ಮಾರಾಟವಾಗುತ್ತಿದೆ. ಸಿದ್ದರಾಮಯ್ಯನವರಿಗೆ ನಾಚಿಕೆಯಾಗಬೇಕು" ಎಂದು ಟೀಕಿಸಿದರು.
ಹೌದೌದು ಅವರದ್ದು ಸಿಕ್ಕರೆ ರಾಜಕೀಯ ಪ್ರೇರಿತ: ಮುಡಾ ಆಸ್ತಿ ಇಡಿ ಮುಟ್ಟುಗೋಲಿನ ಬಗ್ಗೆ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಹೌದೌದು ಅವರದ್ದು ಸಿಕ್ಕರೆ ರಾಜಕೀಯ ಪ್ರೇರಿತ, ಅವರನ್ನು ಬೇಷ್ ಎಂದ್ರೆ ಯಸ್" ಎಂದರು.
ಇದನ್ನೂ ಓದಿ: ಡಿಕೆ ಶಿವಕುಮಾರ್ಗೆ ಸಿಎಂ ಆಗುವಂತೆ ಆಶೀರ್ವದಿಸಿದ ಗುಣಧರನಂದಿ ಮಹಾರಾಜರು: ಡಿಸಿಎಂ ಹೇಳಿದ್ದಿಷ್ಟು