ಬಾಲಿವುಡ್ ಸೂಪರ್ ಸ್ಟಾರ್ ಸೈಫ್ ಅಲಿ ಖಾನ್ ಅವರನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕನಿಗೆ 1 ಲಕ್ಷ ರೂಪಾಯಿ ನೀಡುವುದಾಗಿ ಖ್ಯಾತ ಗಾಯಕ ಮಿಕಾ ಸಿಂಗ್ ಭರವಸೆ ನೀಡಿದ್ದಾರೆ. ಜನವರಿ 16ರಂದು ಭಜನ್ ಸಿಂಗ್ ರಾಣಾ ಅವರು ಗಾಯಗೊಂಡ ಸೈಫ್ ಅಲಿ ಖಾನ್ ಅವರನ್ನು ತಮ್ಮ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಸಮಯಕ್ಕೆ ಸರಿಯಾಗಿ ಆಸ್ಪತ್ರೆ ತಲುಪಿದ ಹಿನ್ನೆಲೆ, ನಟ ಅಪಾಯದಿಂದ ಪಾರಾದರು.
ಪಂಜಾಬಿ ಗಾಯಕ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಶೇರ್ ಮಾಡಿದ್ದು, ಆಟೋ ಚಾಲಕನ ಉದಾತ್ತ ಕಾರ್ಯವನ್ನು ಶ್ಲಾಘಿಸಿದ್ದಾರೆ. ಅಲ್ಲದೇ, ಭಾರತದ ಮೆಚ್ಚಿನ ಸೂಪರ್ ಸ್ಟಾರ್ನನ್ನು ಉಳಿಸಿದ್ದಕ್ಕಾಗಿ ಕನಿಷ್ಠ 11 ಲಕ್ಷ ರೂಪಾಯಿಗಳ ಬಹುಮಾನಕ್ಕೆ ಅರ್ಹರು ಎಂದು ನಾನು ಬಲವಾಗಿ ನಂಬುತ್ತೇನೆ ಎಂದು ತಿಳಿಸಿದ್ದಾರೆ. ಅವರ ಈ ಉದಾತ್ತ ಕಾರ್ಯ ನಿಜಕ್ಕೂ ಶ್ಲಾಘನೀಯ. ಸಾಧ್ಯವಾದರೆ, ದಯವಿಟ್ಟು ಅವರ ಸಂಪರ್ಕ ಮಾಹಿತಿಯನ್ನು ನನ್ನೊಂದಿಗೆ ಹಂಚಿಕೊಳ್ಳಬಹುದೇ?. ಅವರಿಗೆ ಕೃತಜ್ಞತೆಯ ಸಂಕೇತವಾಗಿ ನಾನು 1 ಲಕ್ಷ ರೂ.ಗಳನ್ನು ಬಹುಮಾನವಾಗಿ ನೀಡಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗೋ ಮೊದಲು, ಸೈಫ್ ಅಲಿ ಖಾನ್ ಆಟೋ ಚಾಲಕನನ್ನು ಭೇಟಿ ಮಾಡಿದರು. ಆಟೋ ಚಾಲಕ ಭಜನ್ ಸಿಂಗ್ ರಾಣಾ ಅವರನ್ನು ಆಸ್ಪತ್ರೆಗೆ ಕರೆಸಿಕೊಂಡ ನಟ ಅವರ ಸಹಾಯಕ್ಕೆ ಧನ್ಯವಾದ ಅರ್ಪಿಸಿದರು. ಸೈಫ್ ತಾಯಿ ಶರ್ಮಿಳಾ ಠಾಗೋರ್ ಕೂಡಾ ರಾಣಾಗೆ ತಮ್ಮ ಕೃತಘ್ಞತೆ ಅರ್ಪಿಸಿದರು.
ಇದನ್ನೂ ಓದಿ: 'ಆಟೋದಲ್ಲಿ ಸೈಫ್ ನೋವು ಅನುಭವಿಸಿದ್ದರು': ಆಸ್ಪತ್ರೆಯಲ್ಲಿ ನಟನನ್ನು ಭೇಟಿಯಾದ ಚಾಲಕ ಹೇಳಿದ್ದೇನು?
ಜನವರಿ 16ರ ಮುಂಜಾನೆ ಬಾಂದ್ರಾದ ಸತ್ಗುರು ಶರಣ್ ಕಟ್ಟಡದಲ್ಲಿರುವ ಸೈಫ್ ಅಲಿ ಖಾನ್ ಅವರ ನಿವಾಸಕ್ಕೆ ನುಗ್ಗಿದ ವ್ಯಕ್ತಿ, ನಟನಿಗೆ 6 ಬಾರಿ ಇರಿದು ಪರಾರಿಯಾಗಿದ್ದ. ದಾಳಿ ನಂತರ, ಅವರನ್ನು 2.30ರ ಸುಮಾರಿಗೆ ಆಟೋರಿಕ್ಷಾದಲ್ಲಿ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ಕೂಡಲೇ ನಟನಿಗೆ ಎರಡು ಪ್ರಮುಖ ಶಸ್ತ್ರಚಿಕಿತ್ಸೆಗಳು ನಡೆದವು. ಅಂದು ನಟನ ನಿವಾಸದ ಬಳಿ ಹಾದು ಹೋಗುತ್ತಿದ್ದ ಭಜನ್ ಸಿಂಗ್ ರಾಣಾ ಅವರ ಆಟೋವನ್ನು ಕೆಲವರು (ನಟನ ಮನೆಯ ಸಿಬ್ಬಂದಿ) ತಡೆದಿದ್ದರು.
ಇದನ್ನೂ ಓದಿ: 'ಸ್ಟ್ರೆಚರ್ ತನ್ನಿ, ನಾನು ಸೈಫ್ ಅಲಿ ಖಾನ್': ರಕ್ತಸಿಕ್ತಗೊಂಡಿದ್ದ ನಟನನ್ನು ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಹೇಳಿದ್ದಿಷ್ಟು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ತಕ್ಷಣ ಕ್ರಮ ಕೈಗೊಂಡರು. ಹಲವು ತಂಡಗಳಾಗಿ ಆರೋಪಿಯ ಪತ್ತೆಗೆ ಶೋಧ ಕಾರ್ಯಾಚರಣೆ ಕೈಗೊಂಡರು. ಜನವರಿ 19ರಂದು ಪೊಲೀಸರು ದಾಳಿಕೋರ ಬಾಂಗ್ಲಾದೇಶ ನಿವಾಸಿ ಮೊಹಮ್ಮದ್ ಶರೀಫುಲ್ ಇಸ್ಲಾಂ ಶಹಜಾದ್ ನನ್ನು ಮುಂಬೈನ ಥಾಣೆಯಲ್ಲಿ ಬಂಧಿಸಿದರು. ಭಾನುವಾರ ಮಧ್ಯಾಹ್ನ ನ್ಯಾಯಾಲಯದೆದುರು ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಗೆ 5 ದಿನಗಳ ಪೊಲೀಸ್ ಕಸ್ಟಡಿ ವಿಧಿಸಿತು.