ಮೈಸೂರು: ಪ್ರಸಿದ್ಧ ಸುತ್ತೂರು ಜಾತ್ರಾ ಮಹೋತ್ಸವವು ಜನವರಿ 26ರಿಂದ 31ರ ತನಕ 6 ದಿನಗಳ ಕಾಲ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಹೋತ್ಸವದ ಸಿದ್ಧತೆ ಕುರಿತು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿಗಳಾದ ಮಂಜುನಾಥ್ ಮತ್ತು ಶಿವಕುಮಾರಸ್ವಾಮಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು. ಇದೊಂದು ವಿಭಿನ್ನ ಜಾತ್ರಾ ಮಹೋತ್ಸವವಾಗಿದ್ದು, ಇಲ್ಲಿ ಧಾರ್ಮಿಕ ಆಚರಣೆಗಳ ಜೊತೆಗೆ ಜ್ಞಾನದ ಅರಿವು ಸಹ ಮೂಡಿಸಲಾಗುತ್ತದೆ. ಆರು ದಿನಗಳ ಕಾಲ ನಡೆಯಲಿರುವ ಈ ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾಮೂಹಿಕ ವಿವಾಹ, ಹಾಲರವಿ ಉತ್ಸವ, ವೀರಭದ್ರೇಶ್ವರ ಕೊಂಡೋತ್ಸವ, ಶ್ರೀಮಹದೇಶ್ವರ ಕೊಂಡೋತ್ಸವ ಮತ್ತು ಲಕ್ಷ ದೀಪೋತ್ಸವ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ವೈವಿಧ್ಯಮಯ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪ್ರಮುಖ ಕಾರ್ಯಕ್ರಮಗಳು ಹೀಗಿವೆ: ಜನವರಿ 26ರಂದು ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಚಾಲನೆ ಸಿಗಲಿದ್ದು, ಜ. 27 ರಂದು ಸಾಮೂಹಿಕ ವಿವಾಹ ಮತ್ತು ಅಂದೇ ಹಾಲರವಿ ಉತ್ಸವ ನಡೆಯಲಿದೆ. ಜ. 28 ರಂದು ರಥೋತ್ಸವ ಹಾಗೂ ಶ್ರೀ ವೀರಭದ್ರೇಶ್ವರ ಕೊಂಡೋತ್ಸವ ನಡೆದರೆ, ಜ. 29 ರಂದು ಶ್ರೀಮಹದೇಶ್ವರ ಕೊಂಡೋತ್ಸವ ಮತ್ತು ಲಕ್ಷ ದೀಪೋತ್ಸವ ನಡೆಯಲಿದೆ. ಜ. 30 ರಂದು ತೆಪ್ಪೋತ್ಸವ ನಡೆಯಲಿದ್ದು ಹಾಗೂ ಕೊನೆಯ ದಿನ ಜ. 31ರಂದು ಅನ್ನಬ್ರಹ್ಮೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿಗಳು ತಿಳಿಸಿದರು.
- ಜನವರಿ 26: ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಚಾಲನೆ
- ಜನವರಿ 27: ಸಾಮೂಹಿಕ ವಿವಾಹ ಮತ್ತು ಹಾಲರವಿ ಉತ್ಸವ ಆಯೋಜನೆ
- ಜನವರಿ 28: ರಥೋತ್ಸವ ಹಾಗೂ ಶ್ರೀ ವೀರಭದ್ರೇಶ್ವರ ಕೊಂಡೋತ್ಸವ ನೆರವೇರಿಕೆ
- ಜನವರಿ 29: ಶ್ರೀಮಹದೇಶ್ವರ ಕೊಂಡೋತ್ಸವ ಮತ್ತು ಲಕ್ಷ ದೀಪೋತ್ಸವ ಆಯೋಜನೆ
- ಜನವರಿ 30: ತೆಪ್ಪೋತ್ಸವ ಆಯೋಜನೆ
- ಜನವರಿ 31: ಅನ್ನಬ್ರಹ್ಮೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ರಂಗೋಲಿ ಮತ್ತು ಸೋಬಾನೆ ಪದ ಸ್ಪರ್ಧೆಗಳು: ಜನವರಿ 26ರಂದು ಗ್ರಾಮೀಣ ಕಲೆ ರಂಗೋಲಿ ಸ್ಪರ್ಧೆ ನಡೆಯಲಿದೆ. ಜನವರಿ 26ರಿಂದ ಮೂರು ದಿನಗಳ ಕಾಲ ಸೋಬಾನೆ ಸ್ಪರ್ಧೆ ಆಯೋಜಿಸಲಾಗಿದ್ದು, ಸೋಬಾನೆ ಸ್ಪರ್ಧೆಯಲ್ಲಿ 150ಕ್ಕೂ ಹೆಚ್ಚು ತಂಡಗಳು ಭಾಗಿಯಾಗಲಿವೆ. ಇವುಗಳ ಜೊತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವೈವಿಧ್ಯಮಯ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳ ಆಯೋಜನೆ ಮಾಡಲಾಗಿದೆ.
ಭಜನಾ ಮೇಳ: ಈ ಬಾರಿ 31ನೇ ರಾಜ್ಯಮಟ್ಟದ ಭಜನಾ ಮತ್ತು ಏಕತಾರಿ ಸ್ಪರ್ಧೆಗಳು ಏರ್ಪಾಟು ಮಾಡಲಾಗಿದೆ. ರಾಜ್ಯ ಮತ್ತು ಹೊರ ರಾಜ್ಯಗಳ ಸುಮಾರು 800ಕ್ಕೂ ಹೆಚ್ಚು ಪುರುಷ, ಮಹಿಳಾ, ಮಕ್ಕಳ ತಂಡಗಳು ಭಾಗಿಯಾಗಲಿವೆ. ಒಟ್ಟು 7 ವಿಭಾಗಗಳಲ್ಲಿ ಈ ಸ್ಪರ್ಧೆ ನಡೆಯಲಿದ್ದು, ಪ್ರತಿ ವಿಭಾಗಕ್ಕೂ ಪ್ರತ್ಯೇಕ ಬಹುಮಾನಗಳನ್ನು ನೀಡಲಾಗುತ್ತದೆ.
ಸಾಮೂಹಿಕ ವಿವಾಹ: ಸಾಮೂಹಿಕ ವಿವಾಹದಲ್ಲಿ ಜಾತಿ-ಮತ ಭೇದವಿಲ್ಲದೆ ಸರ್ವ ಧರ್ಮಗಳ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅಂತರ್ಜಾತಿಗಳ, ವಿಶೇಷ ಚೇತನರು ಹಾಗೂ ಹೊರ ರಾಜ್ಯಗಳ ವಧು - ವರರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ವಿವಾಹಗಳ ನೋಂದಣಿ ಮಾಡಿಕೊಂಡಿದ್ದು, ವಧುವಿಗೆ ಸೀರೆ, ಕುಪ್ಪಸ, ಮಾಂಗಲ್ಯ ಹಾಗೂ ಕಾಲುಂಗುರ, ವರನಿಗೆ ಪಂಚೆ, ವಲ್ಲಿ, ಶರ್ಟ್ಗಳನ್ನು ನೀಡಲಾಗುತ್ತಿದೆ. ಸಾಮೂಹಿಕ ವಿವಾಹ ವ್ಯವಸ್ಥೆಯಲ್ಲಿ ಈವರೆಗೆ 3,200ಕ್ಕೂ ಹೆಚ್ಚು ಮಂದಿ ಸತಿಪತಿಗಳಾಗಿದ್ದಾರೆ. ವಧು - ವರರು ವಿವಾಹದ ದೃಢೀಕರಣ ಪತ್ರ, ನೋಂದಣಿ ಪತ್ರಗಳನ್ನು ಸಲ್ಲಿಸಿ, ಸರ್ಕಾರ ನೀಡುವ ಪ್ರೋತ್ಸಾಹ ಧನವನ್ನು ಪಡೆದುಕೊಳ್ಳಬಹುದಾಗಿದೆ.
ವಸ್ತು ಪ್ರದರ್ಶನ: ಇದರ ಜೊತೆಗೆ ವಸ್ತು ಪ್ರದರ್ಶನ, ಕೃಷಿ ಮೇಳ, ಕೃಷಿ ವಿಚಾರ ಸಂಕಿರಣ, ಚಿತ್ರಕಲಾ ಮತ್ತು ಗಾಳಿಪಟ ಸ್ಪರ್ಧೆಗಳು, ಚಿತ್ರ ಸಂತೆ, ಕುಸ್ತಿ ಪಂದ್ಯಾವಳಿ, ಆರೋಗ್ಯ ತಪಾಸಣಾ ಶಿಬಿರ, ದೋಣಿ ವಿಹಾರ, ಗ್ರಾಮೀಣ ಜನರಿಗೆ ದೇಸಿ ಆಟಗಳು, 54ನೇ ದನಗಳ ಪರಿಷೆ, ಕಪಿಲಾರತಿ, ಸಾಂಸ್ಕೃತಿಕ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸುತ್ತೂರು ಜಾತ್ರಾ ನಾಟಕೋತ್ಸವ, ಕಲಾತಂಡಗಳ ಪ್ರದರ್ಶನ, ಛಾಯಾಚಿತ್ರ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆಗಳು ಆಯೋಜನೆ ಮಾಡಲಾಗಿದೆ.
ಮಹಾ ದಾಸೋಹಕ್ಕೆ ವ್ಯವಸ್ಥೆ: ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವ ಭಕ್ತರಿಗೆ ಪ್ರತಿನಿತ್ಯವೂ ಬೆಳಿಗ್ಗೆ ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದದ ವ್ಯವಸ್ಥೆ ಇರುತ್ತದೆ. ಒಟ್ಟು ಆರು ದಿನಗಳ ಪ್ರಸಾದ ತಯಾರಿಕೆಗಾಗಿ 1 ಸಾವಿರ ಕ್ವಿಂಟಲ್ ಅಕ್ಕಿ, 240 ಕ್ವಿಂಟಲ್ ತೊಗರಿಬೇಳೆ, 1500 ಕ್ಯಾನ್ ರಿಫೈನ್ಡ್ ಅಡುಗೆ ಎಣ್ಣೆ, 12 ಟನ್ ಬೆಲ್ಲ, 3500 ಕೆ.ಜಿ ಕಾರದಪುಡಿ, 110 ಕ್ವಿಂಟಲ್ ಕಡ್ಲೆಹಿಟ್ಟು, 200 ಕ್ವಿಂಟಲ್ ಸಕ್ಕರೆ, 500 ಕೆ ಜಿ ನಂದಿನಿ ತುಪ್ಪ, ತಲಾ 800 ಕೆ.ಜಿ ದ್ರಾತ, ಗೋಡಂಬಿ, 8000 ಸಾವಿರ ಲೀಟರ್ ಹಾಲು, 28000 ಲೀಟರ್ ಮೊಸರು, 25000 ತೆಂಗಿನಕಾಯಿ, 5000 ಕೆ ಜಿ ಉಪ್ಪಿನಕಾಯಿ ಬಳಕೆ ಮಾಡಿಕೊಳ್ಳಲಾಗುತ್ತದೆ.
ಸಾರಿಗೆ ವ್ಯವಸ್ಥೆ: ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವವರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಸಾರಿಗೆ ಸಂಸ್ಥೆಗಳು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಂದ ಶ್ರೀ ಸುತ್ತೂರು ಕ್ಷೇತ್ರಕ್ಕೆ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ದೂರದ ಊರುಗಳಿಂದ ಬರುವವರಿಗೆ ತಾತ್ಕಾಲಿಕ ಕುಟೀರಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಗಣ್ಯಾತಿಗಣ್ಯರು ಭಾಗಿ: ಪೂಜ್ಯ ಮಠಾಧೀಶರು, ಧರ್ಮಗುರುಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಚಿವರುಗಳು, ಸಂಸದರು, ಶಾಸಕರು, ಗಣ್ಯರು, ಸಾಹಿತಿಗಳು, ಉದ್ಯಮಿಗಳು ಹಾಗೂ ಕಲಾವಿದರು ಭಾಗಿಯಾಗಲಿದ್ದಾರೆ. ಆರು ದಿನಗಳ ಜಾತ್ರಾ ಮಹೋತ್ಸವದಲ್ಲಿ ಸುಮಾರು 20 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜಾತ್ರಾ ಮಹೋತ್ಸವ ಸುಸೂತ್ರವಾಗಿ ನಡೆಯಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಕೃಷಿ ಮೇಳ: ತಂತ್ರಜ್ಞಾನಾಧಾರಿತ ಕೃಷಿಮೇಳ ಕೂಡ ಮಹೋತ್ಸವದಲ್ಲಿ ಇರಲಿದೆ. ಸುಸ್ಥಿರ ಕೃಷಿಗಾಗಿ ನಿಖರ ಕೃಷಿ ಬೇಸಾಯ ತಾಂತ್ರಿಕತೆ ಈ ವರ್ಷದ ಕೃಷಿ ಮೇಳದ ವಿಶೇಷ ಕಾರ್ಯಕ್ರಮ ಆಗಿದೆ. ಕೃಷಿ ಮೇಳದಲ್ಲಿ ಗಮನ ಸೆಳೆಯುತ್ತಿರುವ ನೈಜ ಬೆಳೆಯ ಪ್ರಾತ್ಯಕ್ಷಿಕೆ, 5 ಎಕರೆ ಪ್ರದೇಶದಲ್ಲಿ 250ಕ್ಕೂ ಹೆಚ್ಚು ತರಕಾರಿ ಬೆಳೆಗಳು, ಸೊಪ್ಪು ಬೆಳೆಗಳು, ಹೂ ಬೆಳೆಗಳು, ವಿದೇಶಿ ಬೆಳೆಗಳು, ಮೇವು ಬೆಳೆಗಳು ಹಾಗೂ ಗೆಡ್ಡೆ-ಕೋಸು ಬೆಳೆಗಳ ಪ್ರಾತ್ಯಕ್ಷಿಕೆ ಅನಾವರಣ ಮಾಡಲಾಗುತ್ತದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು: ಮಹೋತ್ಸವದ ಅಂಗವಾಗಿ ಗದ್ದುಗೆಯ ಆವರಣದಲ್ಲಿ ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರಿಂದ ಗಾಯನ, ನೃತ್ಯ ಹಾಗೂ ನಾಟಕಗಳಿರುತ್ತದೆ. ಗ್ರಾಮಾಂತರ ಪ್ರದೇಶದ ನಾಟಕ ತಂಡಗಳಿಂದ 20ಕ್ಕೂ ಹೆಚ್ಚು ಪೌರಾಣಿಕ ನಾಟಕಗಳು ಏಕಕಾಲದಲ್ಲಿ ನಾಲ್ಕು ವೇಡದಿಕೆಗಳಲ್ಲಿ ಪ್ರದರ್ಶನಗೊಳುತ್ತದೆ. ವಸ್ತುಪ್ರದರ್ಶನ ಆವರಣದಲ್ಲಿ ಪ್ರತಿದಿನ ಸಂಜೆ 7 ರಿಂದ 9ರವರೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಹೊರಗಿನ ಕಲಾವಿದರು ನಡೆಸಿಕೊಡಲಿದ್ದಾರೆ.
ಇದನ್ನೂ ಓದಿ: ಗವಿಸಿದ್ದೇಶ್ವರ ಜಾತ್ರೆಯಲ್ಲಿ ಗಾಳಿಪಟ ಉತ್ಸವ: ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ - KITE FESTIVAL