Garlic Rasam Recipe: ಚಳಿಗಾಲದಲ್ಲಿನ ಹವಾಮಾನದ ಬದಲಾವಣೆಗಳಿಂದ ಅನೇಕರು ಕೆಮ್ಮು, ನೆಗಡಿ ಹಾಗೂ ಜ್ವರದಂತಹ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆರೋಗ್ಯ ಸರಿಯಿಲ್ಲದ ವೇಳೆಯಲ್ಲಿ ಬಾಯಿಗೆ ಏನೂ ರುಚಿ ಬರುವುದಿಲ್ಲ. ಈ ಸಂದರ್ಭದಲ್ಲಿ 'ಬೆಳ್ಳುಳ್ಳಿ ರಸಂ' ಸಿದ್ಧಪಡಿಸಿ ಸೇವಿಸಬಹುದು.
ಈ ರಸಂ ತುಂಬಾ ರುಚಿಕರ ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಕೆಮ್ಮು, ನೆಗಡಿ ಹಾಗೂ ಜ್ವರಕ್ಕೆ ಉತ್ತಮ ಪರಿಹಾರ ಲಭಿಸುತ್ತದೆ. ಈ ರಸಂ ತಯಾರಿಸಲು ಹೆಚ್ಚಿನ ಶ್ರಮ ವಹಿಸುವ ಅಗತ್ಯವಿಲ್ಲ. ಕೆಲವೇ ನಿಮಿಷಗಳಲ್ಲಿ ಈ ರಸಂ ಅನ್ನು ತುಂಬಾ ಸುಲಭವಾಗಿ ಸಿದ್ಧಪಡಿಸಬಹುದು. ಬೆಳ್ಳುಳ್ಳಿ ರಸಂ ಹೇಗೆ ತಯಾರಿಸಬೇಕೆಂಬುದನ್ನು ಇಲ್ಲಿ ತಿಳಿಯೋಣ.
ಬೆಳ್ಳುಳ್ಳಿ ರಸಂ ರೆಡಿ ಮಾಡಲು ಬೇಕಾಗಿರುವ ಪದಾರ್ಥಗಳೇನು?:
- ಹುಣಸೆಹಣ್ಣು - ಒಂದು ಚಿಕ್ಕ ನಿಂಬೆಹಣ್ಣಿನ ಗಾತ್ರದಷ್ಟು
- ಟೊಮೆಟೊ - ಎರಡು (ಮಧ್ಯಮ ಗಾತ್ರ)
- ಕಾಳುಮೆಣಸು - ಅರ್ಧ ಟೀಸ್ಪೂನ್
- ಜೀರಿಗೆ - ಎರಡು ಟೀಸ್ಪೂನ್
- ಬೆಳ್ಳುಳ್ಳಿ ಎಸಳು - ಒಂದು ಹಿಡಿಯಷ್ಟು
- ಎಣ್ಣೆ - 1 ಟೀಸ್ಪೂನ್
- ಹಸಿಮೆಣಸಿನಕಾಯಿ - 5
- ಕರಿಬೇವು - 2 ಎಲೆಗಳು
- ಉಪ್ಪು - ರುಚಿಗೆ ಬೇಕಾಗುವಷ್ಟು
- ಅರಿಶಿನ - ಅರ್ಧ ಟೀಸ್ಪೂನ್
- ಕೊತ್ತಂಬರಿ ಸೊಪ್ಪು - ಸ್ವಲ್ಪ
ಒಗ್ಗರಣೆ ನೀಡಲು ಬೇಕಾಗುವ ಸಾಮಗ್ರಿಗಳು:
- ಎಣ್ಣೆ - 1 ಟೀಸ್ಪೂನ್
- ಮೆಂತ್ಯಕಾಳು - ಒಂದು ಚಿಟಿಕೆ
- ಜೀರಿಗೆ - ಅರ್ಧ ಟೀಸ್ಪೂನ್
- ಸಾಸಿವೆ - ಅರ್ಧ ಟೀಟೀಸ್ಪೂನ್
- ಮೆಣಸಿನಕಾಯಿ - 4
- ಕರಿಬೇವು ಎಲೆ - ಸ್ವಲ್ಪ
- ಬೆಳ್ಳುಳ್ಳಿ ಎಸಳು - 3
- ಇಂಗು - ಒಂದು ಚಿಟಿಕೆ
ಬೆಳ್ಳುಳ್ಳಿ ರಸಂ ಸಿದ್ಧಪಡಿಸುವ ವಿಧಾನ:
- ಮೊದಲು ಹುಣಸೆಹಣ್ಣನ್ನು ಚಿಕ್ಕ ಬೌಲ್ನಲ್ಲಿ ತೊಳೆದು ಹತ್ತು ನಿಮಿಷಗಳ ಕಾಲ ನೆನೆಸಿಟ್ಟುಕೊಳ್ಳಿ.
- ಈಗ ಅಡುಗೆಗೆ ಬೇಕಾಗಿರುವ ಟೊಮೆಟೊಯನ್ನು ಮಧ್ಯಮ ಗಾತ್ರದ ಪೀಸ್ಗಳಾಗಿ ಕಟ್ ಮಾಡಿ ಇಟ್ಟುಕೊಳ್ಳಬೇಕಾಗುತ್ತದೆ. ಜೊತೆಗೆ ಹಸಿಮೆಣಸಿನಕಾಯಿಯನ್ನು ಉದ್ದವಾಗಿ ಹಾಗೂ ಸಣ್ಣಗೆ ಕಟ್ ಮಾಡಿ ಇಡಬೇಕು.
- ಹುಣಸೆಹಣ್ಣು ಚೆನ್ನಾಗಿ ನೆನೆಸಿದ ಬಳಿಕ, ಅದರ ರಸವನ್ನು ತೆಗೆದುಕೊಂಡು ಪಕ್ಕಕ್ಕೆ ಇಡಿ.
- ಇದೀಗ ಮಿಕ್ಸರ್ ಜಾರ್ ತೆಗೆದುಕೊಂಡು ಮೊದಲು ಜೀರಿಗೆ ಹಾಗೂ ಮೆಣಸಿನಕಾಯಿಗಳನ್ನು ಸೇರಿಸಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಬಳಿಕ ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ, ಅವುಗಳ ಸಣ್ಣಗೆ ಆಗುವ ತನಕ ಮತ್ತೆ ಮಿಕ್ಸರ್ ಮಾಡಿ ಪಕ್ಕಕ್ಕೆ ಇಟ್ಟುಕೊಳ್ಳಬೇಕಾಗುತ್ತದೆ.
- ಇದಾದ ಬಳಿಕ ಒಲೆಯ ಮೇಲೆ ಒಂದು ಪಾತ್ರೆಯನ್ನು ಇಡಿ. ಅದರೊಳಗೆ ಎಣ್ಣೆ ಸೇರಿಸಿಕೊಳ್ಳಬೇಕಾಗುತ್ತದೆ. ಎಣ್ಣೆ ಬಿಸಿಯಾದ ಬಳಿಕ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಎಲೆಗಳನ್ನು ಸೇರಿಸಿ ಸ್ವಲ್ಪ ಹೊತ್ತು ಹುರಿಯಬೇಕಾಗುತ್ತದೆ.
- ಇವೆಲ್ಲವು ಬೆಂದ ಬಳಿಕ, ಕಟ್ ಮಾಡಿದ ಟೊಮೆಟೊ ಪೀಸ್ಗಳನ್ನು ಹಾಕಿ. ಇವು ಮೃದುವಾಗುವವರೆಗೆ ಫ್ರೈ ಮಾಡಿ. ಹುರಿಯುವಾಗ ಉಪ್ಪು ಹಾಗೂ ಅರಿಶಿನ ಸೇರಿಸಿ.
- ಟೊಮೆಟೊ ಪೀಸ್ಗಳು ಚೆನ್ನಾಗಿ ಬೆಂದ ಬಳಿಕ, ಈ ಮೊದಲೇ ರುಬ್ಬಿದ ಬೆಳ್ಳುಳ್ಳಿ ಮಿಶ್ರಣವನ್ನು ಇದರೊಳಗೆ ಸೇರಿಸಿ. ಎರಡು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಫ್ರೈ ಮಾಡಬೇಕಾಗುತ್ತದೆ.
- ಮೊದಲೇ ತಯಾರಿಸಿದ ಹುಣಸೆ ರಸ ಹಾಗೂ ಒಂದೂವರೆ ಲೀಟರ್ ನೀರನ್ನು ಇದರೊಳಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ವೇಳೆಯಲ್ಲಿ ನೀವು ಉಪ್ಪು ಹಾಗೂ ಖಾರದ ಪ್ರಮಾಣವನ್ನು ಚೆಕ್ ಮಾಡಿಕೊಳ್ಳಿ. ಈ ರಸಂ ತುಂಬಾ ಹುಳಿಯಾಗಿದ್ದರೆ, ನೀವು ಸ್ವಲ್ಪ ನೀರನ್ನು ಸೇರಿಸಬೇಕು.
- ಇದರೊಳಗೆ ಕೊತ್ತಂಬರಿ ಸೊಪ್ಪು ಸೇರಿಸಿ ಮಧ್ಯಮ ಉರಿಯಲ್ಲಿ ಐದು ನಿಮಿಷಗಳ ಕಾಲ ಕುದಿಸಬೇಕಾಗುತ್ತದೆ.
- ಇದೀಗ, ಮತ್ತೊಂದು ಒಲೆಯ ಮೇಲೆ ಒಗ್ಗರಣೆಯನ್ನು ತಯಾರಿಸಿ. ಒಂದು ಸಣ್ಣ ಪ್ಯಾನ್ ತೆಗೆದುಕೊಂಡು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ, ಮೆಂತ್ಯ ಸೇರಿಸಿ ಫ್ರೈ ಮಾಡಬೇಕು.
- ಸ್ವಲ್ಪ ಬೆಂದ ಬಳಿಕ ಜೀರಿಗೆ, ಸಾಸಿವೆ, ಒಣ ಮೆಣಸಿನಕಾಯಿ, ಜಜ್ಜಿದ ಬೆಳ್ಳುಳ್ಳಿ ಎಸಳು, ಕರಿಬೇವು ಮತ್ತು ಇಂಗು ಸೇರಿಸಿ ಹುರಿದುಕೊಳ್ಳಬೇಕಾಗುತ್ತದಾರೆ.
- ಒಗ್ಗರಣೆ ರೆಡಿಯಾದ ಬಳಿಕ, ಇದನ್ನು ಪಕ್ಕದ ಒಲೆಯ ಮೇಲೆ ಕುದಿಯುತ್ತಿರುವ ರಸಂನಲ್ಲಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
- ಅಂತಿಮವಾಗಿ ಈ ರಸಂನೊಳಗೆ, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕಾಗುತ್ತದೆ. ಆಗ ರುಚಿಕರ 'ಬೆಳ್ಳುಳ್ಳಿ ರಸಂ' ಸವಿಯಲು ಸಿದ್ಧ!